ಸೆಂಟ್ರಲ್ ಬ್ಯಾಂಕ್ ಖಾತೆ ಹ್ಯಾಕಿಂಗ್: ಮೂವರ ಬಂಧನ

ಸೆಂಟ್ರಲ್ ಬ್ಯಾಂಕ್ ಖಾತೆ ಹ್ಯಾಕಿಂಗ್: ಮೂವರ ಬಂಧನ

ನವದೆಹಲಿ: ದಕ್ಷಿಣ ದೆಹಲಿಯಲ್ಲಿರುವ ಸೆಂಟ್ರಲ್ ಬ್ಯಾಂಕ್‌ನಿಂದ ವಂಚನೆ ಮೂಲಕ 9 ಲಕ್ಷ ರೂ. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಂತರ್‌ರಾಷ್ಟ್ರೀಯ ಮಟ್ಟದ ಬಾಕ್ಸರ್ ಸಹಿತ ಮೂವರು ಹ್ಯಾಕರ್‌ಗಳನ್ನು ಬಂಧಿಸಲಾಗಿದೆ.

ಪ್ರತ್ಯೇಕ ದಾಳಿಯಲ್ಲಿ ಅಂತರ್‌ರಾಷ್ಟ್ರೀಯ ಮಟ್ಟದ ಬಾಕ್ಸರ್ ಅರ್ಜುನ್ ರಾಣಾ ಹಾಗೂ ಅವರ ಇಬ್ಬರು ಸಹಚರರಾದ ವಿಶಾಲ್ ಟೊಕಾಸ್ ಹಾಗೂ ನೈಜೀರಿಯದ ಪ್ರಜೆ ಎಮ್ಮಾ ಡೊಝಿ ಒಸಿಯಾಕು ಅವರನ್ನು ಮಂಗಳವಾರ ಬಂಧಿಸಲಾಗಿದ್ದು,ಅವರಿಂದ 10 ಡೆಬಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ
ಎಂದು ಪೊಲೀಸ್ ಉಪ ಆಯುಕ್ತ ವಿಜಯ್ ಕುಮಾರ್ ತಿಳಿಸಿದ್ದಾರೆ.

ಅರ್ಜುನ ರಾಣಾ ಹಾಗೂ ವಿಶಾಲ್ ಟೊಕಾಸ್ ಎನ್ನುವವರು ಅರ್ಜುನ್ ರಾಣಾ ಎಂಟರ್‌ಪ್ರೈಸಸ್ ಖಾತೆಯಲ್ಲಿ ನಕಲಿ ಗುರುತುಪತ್ರ ಬಳಸಿಕೊಂಡು 9 ಲಕ್ಷ ರೂ. ಹಣ ಹಿಂಪಡೆಯಲು ಯತ್ನಿಸಿದ್ದಾರೆ ಎಂದು ಸ್ಥಳೀಯ ಪೊಲೀಸರಿಗೆ ಗ್ರೇಟರ್ ಕೈಲಾಶ್‌ನ ಸೆಂಟ್ರಲ್ ಬ್ಯಾಂಕಿನ ಮ್ಯಾನೇಜರ್ ಸುನೀಲ್ ಶರ್ಮಾ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿತ್ತು.

ತನಿಖೆಯ ವೇಳೆ ಹ್ಯಾಕರ್‌ಗಳ ಗುಂಪು ಎಚ್‌ಡಿಎಫ್‌ಸಿಯಲ್ಲಿ ಖಾತೆ ಹೊಂದಿರುವ ಕಂಕಾರಿಯಾ ಮಹಿನಹರ್ ನಾಗರಿಕ ಸಹಕಾರಿ ಬ್ಯಾಂಕ್ ಲಿ.ನಿಂದ 10 ಲಕ್ಷ ರೂ. ವಂಚನೆಯಿಂದ ವರ್ಗಾಯಿಸಿರುವ ವಿಚಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಪ್ರಕರಣ ಅಹ್ಮದಾಬಾದ್‌ನಲ್ಲಿ ಜ.7 ರಂದು ದಾಖಲಾಗಿತ್ತು.

ವಿಚಾರಣೆ ವೇಳೆ ರಾಣಾ ಹಾಗೂ ಟೊಕೊಸ್ ತಾವು ಒಸಿಯಾಕು ಪರವಾಗಿ ಕೆಲಸ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದರು. ಪೊಲೀಸರು ನೈಜೀರಿಯ ಪ್ರಜೆಯನ್ನು ಆತ ನೆಲೆಸಿರುವ ಲಾಜ್‌ಪತ್ ನಗರದ ಮನೆಯಿಂದ ಬಂಧಿಸಿದ್ದಾರೆ ಎಂದು ಕುಮಾರ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos