ಸಚಿವ ಸಂಪುಟ ಸಭೆ: ಬಿಬಿಎಂಪಿ ಬಜೆಟ್, ‘ಫನಿ’ ಸೇರಿದಂತೆ ಮಹತ್ವದ ನಿರ್ಣಯ

ಸಚಿವ ಸಂಪುಟ ಸಭೆ: ಬಿಬಿಎಂಪಿ ಬಜೆಟ್, ‘ಫನಿ’ ಸೇರಿದಂತೆ ಮಹತ್ವದ ನಿರ್ಣಯ

ಬೆಂಗಳೂರು, ಮೇ.9, ನ್ಯೂಸ್ ಎಕ್ಸ್ ಪ್ರೆಸ್: ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂ ಬಜೆಟ್ ಹಾಗೂ ಒಡಿಶಾ ಪರಿಹಾರ ನಿಧಿ ಬಗ್ಗೆ ಚರ್ಚೆ ನಡೆಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ 9,824 ಕೋಟಿ ರೂ ಮೊತ್ತದ ಬಿಬಿಎಂಪಿ ಬಜೆಟ್​ಗೆ ಒಪ್ಪಿಗೆ ಸೂಚಿಸಿದ್ದರೆ, ಫನಿ ಚಂಡಮಾರುತದಿಂದ ತತ್ತರಿಸಿರುವ ಒಡಿಶಾ ರಾಜ್ಯಕ್ಕೆ 10 ಕೋಟಿ ನೆರವು ಘೋಷಿಸಿದ್ಧಾರೆ. ಲೋಕಸಭೆ ಚುನಾವಣೆ ನಂತರ ನಡೆದ ಮೊದಲ ರಾಜ್ಯ ಸಚಿವ ಸಂಪುಟ ಮುಕ್ತಾಯವಾಗಿದ್ದು, ಬಿಬಿಎಂಪಿ ಬಜೆಟ್​, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಾಸವಿರುವ ಪ್ರದೇಶಗಳ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಹಾಗೂ ಫನಿ ಚಂಡಮಾರುತಕ್ಕೆ ತುತ್ತಾದ ಒಡಿಶಾ ರಾಜ್ಯಕ್ಕೆ ನೆರವು ನೀಡುವುದು ಸೇರಿದಂತೆ ಹಲವಾರು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸಲಾಗಿದೆ.  ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಿಬಿಎಂಪಿ ಬಜೆಟ್​ ಕುರಿತು ಪ್ರಸ್ತಾಪ ಮಾಡಲಾಯಿತು. ಅಲ್ಲದೆ ಸ್ವತಃ ಮುಖ್ಯಮಂತ್ರಿಯನ್ನು ಭೇಟಿ ಮಾಡಿದ್ದ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ 13 ಸಾವಿರ ಕೋಟಿ ರೂ ಮೊತ್ತದ ಬಜೆಟ್​ಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದರು. ಆದರೆ, ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿ 9,824 ಕೋಟಿ ರೂ ಮೊತ್ತದ ಬಿಬಿಎಂಪಿ ಬಜೆಟ್​ಗೆ ಒಪ್ಪಿಗೆ ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನ ವಾಸವಿರುವ ಪ್ರದೇಶಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಕಾಮಗಾರಿಗೆ 573 ಕೋಟಿ ರೂ ಗಳ ಎಸ್ಸಿಎಸ್ಪಿ ಆಂಡ್ ಟಿಎಸ್ ಪಿ ಕ್ರಿಯಾ ಯೋಜನೆಗೆ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ. ಅಲ್ಲದೆ ಚಿಂತಾಮಣಿ ನಗರಕ್ಕೆ ಅರಸೀಕೆರೆಯ ಭಕ್ತರಹಳ್ಳಿಯ ಮೂಲಕ ನೀರು ಹರಿಸುವ 10.65 ಕೋಟಿ ಮೌಲ್ಯದ ಟಿಎಸ್​ಪಿ ಕ್ರಿಯಾ ಯೋಜನೆಗೂ ಸಮ್ಮತಿ ಸೂಚಿಸಲಾಗಿದೆ. ಒಡಿಶಾಗೆ 10 ಕೋಟಿ ರೂ ನೆರವು : ‘ಫನಿ’ ಚಂಡಮಾರುತಕ್ಕೆ ತುತ್ತಾಗಿರುವ ಒಡಿಶಾ ರಾಜ್ಯಕ್ಕೆ ಸಾಧ್ಯವಾದಷ್ಟು ನೆರವು ನೀಡುವುದಾಗಿ ಈ ಹಿಂದೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಿಸಿದ್ದರು. ಅದರಂತೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಎಲ್ಲಾ ಸಚಿವರ ಜೊತೆಗೆ ಈ ಕುರಿತು ಚರ್ಚೆ ನಡೆಸಿದ ಸಿಎಂ  ಚಂಡಮಾರುತದಿಂದ ತತ್ತರಿಸಿರುವ ಒಡಿಶಾ ರಾಜ್ಯದಲ್ಲಿ ಪುನರ್ವಸತಿ ಹಾಗೂ ಪರಿಹಾರ ಕ್ರಮ ಕೈಗೊಳ್ಳಲು 10 ಕೋಟಿ ನೆರವು ನೀಡಲು ತೀರ್ಮಾನಿಸಿದ್ದಾರೆ. ಒಡಿಶಾದಲ್ಲಿ ಅಪಾರ ಜನ, ಜಾನುವಾರು, ಆಸ್ತಿಪಾಸ್ತಿ ನಷ್ಟ ಅನುಭವಿಸಿರುವ  ಹಿನ್ನೆಲೆಯಲ್ಲಿ ಸಂತ್ರಸ್ತರ ನೆರವಿಗಾಗಿ ರಾಜ್ಯ ಸರ್ಕಾರ ಈ ಅನುದಾನ ಬಿಡುಗಡೆ ಮಾಡಲಿದೆ.

ಫ್ರೆಶ್ ನ್ಯೂಸ್

Latest Posts

Featured Videos