ಷಾ ಜೊತೆ ಚರ್ಚಿಸಿದ ನಂತರ ಅಭ್ಯರ್ಥಿಗಳ ಪಟ್ಟಿ ಘೋಷಣೆ: ಬಿಎಸ್ವೈ

ಷಾ ಜೊತೆ ಚರ್ಚಿಸಿದ ನಂತರ ಅಭ್ಯರ್ಥಿಗಳ ಪಟ್ಟಿ ಘೋಷಣೆ: ಬಿಎಸ್ವೈ

ನವದೆಹಲಿ, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಜೊತೆ ಚರ್ಚಿಸಿದ ನಂತರ ಮುಂಬರುವ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇಂದು ನವದೆಹಲಿಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಗೊಂದಲವಿಲ್ಲ. ರಾಷ್ಟ್ರೀಯ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರ ಜೊತೆ ಚರ್ಚೆ ನಂತರ ಅಂತಿಮ ಪಟ್ಟಿ ಬಿಡುಗಡೆಯಾಗಲಿದೆ ಎಂದರು.ಹಾಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕೆಂಬ ಸಲಹೆಯನ್ನು ಪಕ್ಷದ ಕಾರ್ಯಕರ್ತರು ನೀಡಿದ್ದಾರೆ. ಲೋಕಸಭೆ ಚುನಾವಣೆ ಸಮಯ ಹತ್ತಿರದಲ್ಲಿರುವುದರಿಂದ ಹೊಸ ಅಭ್ಯರ್ಥಿಗಳನ್ನು ಪಕ್ಷಕ್ಕೆ ಕರೆತರುವುದು ಅಷ್ಟು ಸುಲಭದ ಮಾತಲ್ಲ ಎಂದರು.ಹಾಲಿ ಅಭ್ಯರ್ಥಿಗಳ ಕ್ಷೇತ್ರಗಳನ್ನು ಹೊರತುಪಡಿಸಿದರೆ ಉಳಿದಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಾಗಿ ಹೇಳಿದರು.ಚಿತ್ರನಟ ದಿವಂಗತ ಅಂಬರೀಶ್ ಅವರ ಪತ್ನಿ ಸುಮಲತಾ ಬಿಜೆಪಿಗೆ ಸೇರ್ಪಡೆ ಕುರಿತಂತೆ ಮಾತನಾಡಿದ ಯಡಿಯೂರಪ್ಪ, ಅವರ ಜೊತೆ ನಾನಾಗಲಿ, ಪಕ್ಷದ ಮುಖಂಡರಾಗಲಿ ಈವರೆಗೂ ಚರ್ಚೆ ನಡೆಸಿಲ್ಲ.ಅಲ್ಲದೆ ಸುಮಲತಾ ಯಾವ ಪಕ್ಷದಿಂದ ಸ್ಪರ್ಧಿಸಬೇಕೋ ಎಂಬುದರ ಬಗ್ಗೆ ಗೊಂದಲದಲ್ಲಿದ್ದಾರೆ. ಜೊತೆಗೆ ಚುನಾವಣೆ ಕಣದಲ್ಲಿರಬೇಕಾ ಎಂಬುದರ ಬಗ್ಗೆಯೂ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ಎಲ್ಲವೂ ಗೊಂದಲಮಯವಾಗಿದೆ ಎಂದರು.ಇನ್ನು ಅಂಬರೀಶ್ ಕುಟುಂಬದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಗುರವಾಗಿ ಮಾತನಾಡುವುದು ಸರಿಯಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಎಚ್ಚರಿಕೆಯಿಂದ ಮಾತನಾಡಬೇಕೆಂದು ತಿರುಗೇಟು ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos