ಬೆಂಗಳೂರಲ್ಲಿ ಪಲ್ಸ್ ಪೋಲಿಯೋ: 3,345 ಬೂತ್ ಗಳು ಸ್ಥಾಪನೆ

ಬೆಂಗಳೂರಲ್ಲಿ ಪಲ್ಸ್ ಪೋಲಿಯೋ: 3,345 ಬೂತ್ ಗಳು ಸ್ಥಾಪನೆ

ಬೆಂಗಳೂರು, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ನಗರ ವ್ಯಾಪ್ತಿಯಲ್ಲಿರುವ 5 ವರ್ಷದೊಳಗಿನ 10,47,320 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಲು ಬಿಬಿಎಂಪಿ 3,345 ಬೂತ್‍ಗಳನ್ನು ಸಿದ್ಧಗೊಳಿಸಿದ್ದು , ಉಸ್ತುವಾರಿಗೆ 20 ವಿಶೇಷ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.

ಮಾ.10 ಮತ್ತು ಮಾ.13ರಂದು ನಡೆಯಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಆರೋಗ್ಯ ಕೇಂದ್ರಗಳು, ಔಷಧಾಲಯಗಳು ,ಅಂಗನವಾಡಿ ಕೇಂದ್ರಗಳು, ಶಾಲೆಗಳು, ಪ್ರಮುಖ ಉದ್ಯಾನವನಗಳು, ಮೆಟ್ರೋ ನಿಲ್ದಾಣ ಹಾಗೂ ಕೊಳಚೆ ಪ್ರದೇಶಗಳಲ್ಲಿ ಪಲ್ಸ್ ಪೋಲಿಯೋ ಬೂತ್‍ಗಳನ್ನು ಸ್ಥಾಪಿಸಲಾಗಿದೆ.

ನಗರದಲ್ಲಿ 1,00,98,840 ಜನಸಂಖ್ಯೆಯಿದ್ದು ಇದರಲ್ಲಿ 10 ಲಕ್ಷಕ್ಕೂ ಹೆಚ್ಚು ಐದು ವರ್ಷದೊಳಗಿನ ಮಕ್ಕಳನ್ನು ಗುರುತಿಸಲಾಗಿದೆ. 775 ಕೊಳಚೆ ಪ್ರದೇಶಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳಿದ್ದಾರೆ.

ಈ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ಹಾಕುವ ಉದ್ದೇಶದಿಂದ 3,345 ಬೂತ್‍ಗಳು, 139 ಯೋಜನಾ ಘಟಕಗಳು, 430 ಸ್ಥಿರ ತಂಡಗಳು, 325 ಸಂಚಾರಿ ತಂಡಗಳು, 14,670 ಲಸಿಕಾ ಕಾರ್ಯಕರ್ತರು, 734 ಮೇಲ್ವಿಚಾರಕರು ಹಾಗೂ 20 ವಿಶೇಷ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.

ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಯಶಸ್ಸಿಗಾಗಿ ನಾಳೆ ಬೆಳಗ್ಗೆ ಎಂ.ಜಿ. ರಸ್ತೆಯಿಂದ ಪಾಲಿಕೆ ಕೇಂದ್ರ ಕಚೇರಿವರೆಗೂ ಬೃಹತ್ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.

ಮೇಯರ್ ಗಂಗಾಂಬಿಕೆ , ಉಪ ಮೇಯರ್ ಭದ್ರೇಗೌಡ ಸೇರಿದಂತೆ ಪಾಲಿಕೆಯ ಉನ್ನತ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಸಾವಿರಾರು ಮಂದಿ ಈ ಜಾಥಾದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದರ ಜತೆಗೆ ದೂರದರ್ಶನ, ಆಕಾಶವಾಣಿ, ಪತ್ರಿಕೆಗಳು ಹಾಗೂ ಮಾಧ್ಯಮಗಳಲ್ಲಿ ಪ್ರಚಾರ ನಡೆಸುವುದಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‍ಗಳನ್ನು ಕಟ್ಟುವುದರ ಜತೆಗೆ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಪಲ್ಸ್ ಪೋಲಿಯೋದ ಮಹತ್ವದ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ.

ಒಟ್ಟಾರೆ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಬಿಬಿಎಂಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು , ಈ ಹಿಂದೆ ಎಷ್ಟೇ ಬಾರಿ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿದ್ದರೂ ಇದೇ 10 ಮತ್ತು 13ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ತಮ್ಮ ಮಕ್ಕಳನ್ನು ಬೂತ್‍ಗೆ ಕರೆ ತಂದು ಎರಡು ಹನಿ ಪೋಲಿಯೋ ಹಾಕಿಸುವ ಮೂಲಕ ಪೋಲಿಯೋ ಮುಕ್ತ ವಿಶ್ವ ನಿರ್ಮಾಣಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮನವಿ ಮಾಡಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos