ಆಪರೇಷನ್‍ ಕಮಲ ವಿಫಲಗೊಳಿಸಲು ದೋಸ್ತಿಗಳ ರಣತಂತ್ರ..!

ಆಪರೇಷನ್‍ ಕಮಲ ವಿಫಲಗೊಳಿಸಲು ದೋಸ್ತಿಗಳ ರಣತಂತ್ರ..!

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣ
ಪ್ರತೀ ಕ್ಷಣವೂ ಕೂತೂಹಲ ಮೂಡಿಸುತ್ತಿದೆ. ಪ್ರತೀ ದಿನವೂ ಒಂದೊಂದು ತಿರುವು ಪಡೆದುಕೊಳ್ಳುತ್ತಿದೆ.
ಕಳೆದ ಮೂರು ದಿನಗಳಿಂದ ಆಡಳಿತ ರೂಡ ಮೈತ್ರಿ ಪಕ್ಷಗಳು ಹಾಗೂ ಪ್ರತಿಪಕ್ಷ ಬಿಜೆಪಿ ಜಿದ್ದಾಜಿದ್ದಿನ
ರಾಜಕೀಯ ಚಟುವಟಿಕೆಗಳನ್ನು ನಡೆಸುತ್ತಿವೆ.

ಇನ್ನೇನು 2- 3 ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ.
ಚುನಾವಣೆ ಹೊತ್ತಿಗೆ ಮೈತ್ರಿ ಸರ್ಕಾರವನ್ನು ಉರುಳಿಸಿ ಬಿಜೆಪಿ ನೇತರತ್ವದ ಸರ್ಕಾರ ರಚಿಸಬೇಕು. ಆ
ಮೂಲಕ ರಾಜ್ಯದಲ್ಲಿ ಅಧಿಕ ಲೋಕಸಭಾ ಸ್ಥಾನಗಳನ್ನು ಗೆದ್ದು, ಮೋದಿಯನ್ನು ದೆಹಲಿಯಲ್ಲಿ
ಅಧಿಕಾರಕ್ಕೇರಲು ನೆರವಾಗಬೇಕು ಅನ್ನೋದು ರಾಜ್ಯ ಬಿಜೆಪಿಯ ತುಡಿತ. ಇನ್ನೋಂದು ಕಡೆ ರಾಜ್ಯದಲ್ಲಿ
ಮೈತ್ರಿ ಸರ್ಕಾರ ಉಳಿಸಿಕೊಳ್ಳಲೇಬೇಕು ಅನ್ನೋದು ದೋಸ್ತಿಗಳಿಗೆ ಪ್ರತಿಷ್ಟೆಯ ಪ್ರಶ್ನೆ.

ಆಪರೇಷನ್‍ ಕಮಲವನ್ನು ವಿಫಲಗೊಳಿಸಲು ಕಾಂಗ್ರೆಸ್ ಭಾರೀ
ಮಾಸ್ಟರ್ ಪ್ಲ್ಯಾನ್ ರೂಪಿಸಿದೆ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸಚಿವರಾಗಿದ್ದ ನಾಲ್ವರು ಹಿರಿಯ
ಶಾಸಕರರನ್ನು ಸ್ವಇಚ್ಚೆಯಿಂದ ಸಚಿವ ಸ್ಥಾನ ತ್ಯಾಗ ಮಾಡಲು ಕಾಂಗ್ರಸ್ ಹೈಕಮಾಂಡ್‍ ರಾಜ್ಯ
ಕಾಂಗ್ರೆಸ್ ಗೆ ಸೂಚಿಸಿದೆ. ಅತೃಪ್ತರಿಗೆ ಸಚಿವ ಸ್ಥಾನ ನೀಡಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು
ಬಿಜೆಪಿ ತಂತ್ರಕ್ಕೆ ಪ್ರತಿತಂತ್ರವನ್ನು ಮೈತ್ರಿ ನಾಯಕರು ಹೆಣೆದಿದ್ದಾರೆ.

ಇನ್ನೇನು ಆಪರೇಷನ್ ಕಮಲ ನಡೆದೇ ಹೋಯಿತು ಎನ್ನುವಷ್ಟರಲ್ಲಿ ಮುಂಬೈನಲ್ಲಿದ್ದಾರೆ ಎನ್ನಲಾಗುತ್ತಿದ್ದ ಹಗರಿ ಬೊಮ್ಮನಹಳ್ಳಿಯ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್, ಕಂಪ್ಲಿ ಶಾಸಕ ಗಣೇಶ್, ಮಸ್ಕಿ ಶಾಸಕ
ಪ್ರತಾಪಗೌಡ ಪಾಟೀಲ್, ಮುಳಬಾಗಿಲು  ಶಾಸಕ ನಾಗೇಶ್‍
 ಅವರ ಅತೃಪ್ತಿ ತಣಿಸುವಲ್ಲಿ ದೋಸ್ತಿ ಪಡೆ
ಯಶಸ್ವಿಯಾಗಿದೆ. ಶಾಸಕ ಉಮೇಶ್ ಜಾಧವ್ ಕೂಡ ಉಲ್ಟಾ ಹೊಡೆಯುವ ಸಾಧ್ಯತೆಯಿದೆ. ಉಮೇಶ್ ಜಾಧವ್ ವಾಪಸ್ ಬಗ್ಗೆ ಸಹೋದರ ರಾಮಚಂದ್ರ ಜಾಧವ್ ಸುಳಿವು ನೀಡಿದ್ದಾರೆ. ರಮೇಶ್ ಜಾರಕಿಹೊಳಿ, ಮಹೇಶ್ ಕಮಟಳ್ಳಿ ನಡೆ ಮಾತ್ರ ನಿಗೂಢವಾಗಿದೆ.

ಈ ನಾಲ್ವರಿಗೆ ಸಚಿವ ಸ್ಥಾನ ನೀಡೋದಾಗಿ ಕಾಂಗ್ರೆಸ್
ಹೈಕಮಾಂಡ್‍ ಭರವಸೆ ನೀಡಿದೆ. ಅದಕ್ಕಾಗಿ ನಾಲ್ವರು ಹಿರಿಯ ಸಚಿವರ ತಲೆದಂಡಕ್ಕೂ ಸ್ವತಃ ಕಾಂಗ್ರೆಸ್
ರಾಹುಲ್‍ ಗಾಂಧಿ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಆದ್ದರಿಂದ ಈಗಾಗಲೇ ಮಂತ್ರಿ
ಮಂಡಲದಲ್ಲಿರುವ ಸಚಿವರು ತಮ್ಮ ಸ್ಥಾನವನ್ನು ತ್ಯಾಗ ಮಾಡಲೇ ಬೇಕಾದ ಅನಿವಾರ್ಯತೆಯೂ ಎದುರಾಗಿದೆ.

ಇದರಿಂದಾಗಿ ಮತ್ತೆ ಆಪರೇಷನ್ ಕಮಲದ ಮೂಲಕ ಸರ್ಕಾರ ರಚಿಸುವ
ಬಿಜೆಪಿ ಕನಸು ಭಗ್ನವಾಗಿದೆ. ಶಾಸಕರಿಬ್ಬರ ಬೆಂಬಲ ವಾಪಸ್ ಪಡೆದಿದ್ದು, ಆಪರೇಷನ್ ಕಮಲದ ಮೊದಲ ಹಂತ ಎಂದು ಹೇಳಲಾಗಿತ್ತು. ಮುಂಬೈನಲ್ಲಿ ಮಾತನಾಡಿದ್ದ ಪಕ್ಷೇತರ ಆರ್.ಶಂಕರ್ ಮತ್ತು ಹೆಚ್.ನಾಗೇಶ್ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು. ಈಗ ಕಳೆದ ಮೂರ್ನಾಲ್ಕು ದಿನಗಳಿಂದ ಯಾರ ಸಂಪರ್ಕಕ್ಕೆ ಸಿಗದ ಭೀಮಾನಾಯ್ಕ್ ಮತ್ತು ಗಣೇಶ್ ಇಂದು ದಿಢೀರ್ ಆಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ.

ರಾಜ್ಯ ನಾಯಕರೊಂದಿಗೆ ಚರ್ಚಿಸಲು ರಾಜ್ಯ ಕಾಂಗ್ರೆಸ್
ಉಸ್ತುವಾರಿ ಕೆ.ಸಿ.ವೇಣುಗೋಪಾಲ್‍ ಬೆಂಗಳೂರಿಗೆ ಆಗಮಿಸಿದ್ದಾರೆ. ಆಪರೇಷನ್ ಕಮಲ ಬಹುತೇಕ ಫೇಲ್ ಆದ ಬೆನ್ನಲ್ಲೇ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಮಂಗಳವಾರ ಮಧ್ಯಾಹ್ನ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದ ಶಾಸಕ ಆರ್.ಶಂಕರ್ ಇದೂವರೆಗೂ ರಾಜ್ಯಪಾಲರನ್ನು ಭೇಟಿ ಮಾಡಿಲ್ಲ. ಇಂದು ಬೆಂಬಲ ವಾಪಸ್ ಪಡೆದಿದ್ದರ ಬಗ್ಗೆ ಪತ್ರವನ್ನು ನೀಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯನವರ ಒಂದು ಫೋನ್ ಕರೆಯಿಂದಾಗಿ ಆರ್.ಶಂಕರ್ ಮನಸ್ಸು ಬದಲಿಸಿದ್ದಾರೆ.

ಸಂಪುಟದಿಂದ ಕೊಕ್ ನೀಡಿದ ಹಿನ್ನೆಲೆಯಲ್ಲಿ ಆರ್.ಶಂಕರ್ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಮಂಗಳವಾರ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬೆಂಬಲ ಹಿಂಪಡೆದಿದ್ದೇನೆ ಅಂತ ಹೇಳಿದ್ದರು. ಪಕ್ಷೇತರರು ಇಬ್ಬರು ಬೆಂಬಲ ವಾಪಾಸ್ಸು ಪಡೆದ ಬಳಿಕ ಮುಂಬೈನಲ್ಲಿರುವ ಕಾಂಗ್ರೆಸ್‍ನ ಕೆಲ ಅತೃಪ್ತ ಶಾಸಕರು ಇಂದು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. 

ಸಿಎಂ ಕುಮಾರಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ನಮ್ಮ ಶಾಸಕರನ್ನ ರೆಸಾರ್ಟ್​ಗೆ ಕಳಿಸುವುದಿಲ್ಲ. ಅದರ ಅವಶ್ಯಕತೆ ಇಲ್ಲ, ಬಿಜೆಪಿ ನಾಯಕರಿಗೆ ರೆಸಾರ್ಟ್ ನಲ್ಲಿ ಇರುವುದಕ್ಕೆ ನಾವೇ ಹೇಳಿದ್ದೇವೆ. ಅವರು ಅಲ್ಲಿ ಆರಾಮಾಗಿ ಇದ್ದಾರೆ. ನಾನು ಕೂಡ ಆರಾಮವಾಗಿ ಇದ್ದೇನೆ. ಯಾರ ಬಳಿಯೂ ಸಲಹೆ ತೆಗೆದುಕೊಂಡು ನಾನು ರಾಜಕೀಯ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ನಗುಮುಖದಿಂದ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಎಲ್ಲರ ಬಳಿ ನಾನು ಮಾತನಾಡಿ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದೇನೆ. ಬಿಜೆಪಿ ಅವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ. ನಾನು ಹುಡುಕಾಟಕ್ಕೆ ಆರಾಮವಾಗಿ ಇದ್ದೀನಾ? ಎಲ್ಲರು ಏನು ಮಾಡುತ್ತಿದ್ದಾರೆ ಎಂದು ನನಗೂ ಗೊತ್ತಿದೆ. ನಾವೆಲ್ಲರೂ ಆರಾಮಾಗಿ ಇದ್ದೇವೆ. ನಿಮಗೆ ಮತ್ತು ಬೇರೆ ಅವರಿಗೂ ಶಾಸಕರು ನಾಟ್ ರಿಚೆಬಲ್ ಆಗಿರಬಹುದು. ಆದರೆ ಅವರೆಲ್ಲರು ನನಗೆ ರಿಚೆಬಲ್ ಇದ್ದಾರೆ. ನೀವೇ ಏನೇನೋ ಹೇಳುತ್ತಿದ್ದೀರಿ ಎಂದು ಮಾಧ್ಯಮದವರ ಮೇಲೆ ಕಿಡಿಕಾರಿದ್ದಾರೆ.

3 ದಿನಗಳಿಂದ ಅತೃಪ್ತ ಶಾಸಕರು ನನ್ನ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಪ್ರತಿಯೊಂದು ರಾಜಕೀಯ ಬೆಳವಣಿಗೆಯ ಬಗ್ಗೆ ನಾನು ಗಮನ ಕೊಟ್ಟಿದ್ದೇನೆ. ಪ್ರತಿಯೊಂದು ವಿಚಾರವೂ ನನಗೆ ಗೊತ್ತಿದೆ. ಯಾರಿಗೆ ರಕ್ಷಣೆ ಕೊಡಬೇಕು, ಯಾರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು, ಅದರ ಬಗ್ಗೆ ನಾನು ಏನು ತೀರ್ಮಾನ ತೆಗೆದುಕೊಳ್ಳಬೇಕು ಎಲ್ಲವನ್ನು ನಾನು ಮಾಡುತ್ತಿದ್ದೇನೆ. ವೇಣುಗೋಪಾಲ್ ಅವರಿಗೆ ನಾನು ಎಲ್ಲಾ ವಿವರ ಹೇಳಿದ್ದೇನೆ. ವೇಣುಗೋಪಾಲ್ ಅಥವಾ ಕಾಂಗ್ರೆಸ್ ಹೈಕಮಾಂಡ್ ಜೊತೆ ನಾನು ಹುಡುಕಾಟ ಆಡುವುದಕ್ಕೆ ಆಗುತ್ತಾ? ನಾನು ಅಷ್ಟು ಉದ್ಧಟತನ ತೋರಿಸುತ್ತೀನಾ ಎಂದು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ರಾಜ್ಯದ ರಾಜಕೀಯ ಹಾವು-ಏಣಿಯಾಟ ಇಷ್ಟಕ್ಕೆ ನಿಲ್ಲುತ್ತಾ ಇಲ್ಲ ಹೀಗೆ ಮುಂದೆ ಸಾಗುತ್ತಾ? ಅನ್ನೋದು ಕುತೂಹಲ ಮೂಡಿಸುತ್ತಿದೆ. ಮೈತ್ರಿ ಸರ್ಕಾರದ ನಾಯಕರು ಇಷ್ಟಕ್ಕೆ ನಿರಾಳವಾಗದೇ ಒಳಗೊಳಗೆ ಸರ್ಕಾರವನ್ನು ಸುಭದ್ರಗೊಳಿಸಲು ಇನ್ನಷ್ಟು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಆಪರೇಷನ್ ಕಮಲದ ಬಿಜೆಪಿಯ ಕನಸು ಭಗ್ನಗೊಂಡಿದೆ. ಈಗ ಬಿಜೆಪಿಯ ಮುಂದಿನ ನಡೆ ಏನು ಎಂಬುದು ನಿಗೂಢವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos