ಭೋವಿ ಜನಾಂಗ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು

ಭೋವಿ ಜನಾಂಗ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು

ದೊಡ್ಡಬಳ್ಳಾಪುರ, ಅ. 31: ರಾಜ್ಯದ ಸಚಿವ ಸಂಪುಟದಲ್ಲಿ ಭೋವಿ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ನ. 3ರಂದು ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ಸಿದ್ಧರಾಮೇಶ್ವರ ಜಯಂತಿ ಸಮಾರಂಭದಲ್ಲಿ ಸಮುದಾಯ
ಕ್ಕೆ ಸಿಗಬೇಕಾದ ಸವಲತ್ತುಗಳ ಕುರಿತು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಲಾಗುವುದು ಎಂದು ತಾಲ್ಲೂಕು ಭೋವಿ ಜನಾಂಗ ಸಂಘದ ಅಧ್ಯಕ್ಷ ಓಬದೇನಹಳ್ಳಿ ಕೆ.ಮುನಿಯಪ್ಪ ಹೇಳಿದರು.
ತಾಲ್ಲೂಕು ಭೋವಿ ಜನಾಂಗ ಸಂಘದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚು ಭೋವಿ ಸಮುದಾಯ ಇದೆ. ಆದರೆ ಮೂಲ ವೃತ್ತಿಯಾಗಿ ಬಂಡೆ ಕೆಲಸ ಮಾಡುವ ಸಮುದಾಯ ಬಂಡೆ ಒಡೆಯುವ ಕೂಲಿ ಕೆಲಸದಲ್ಲಿ ಹೊಟ್ಟೆ ಹೊರೆಯಬೇಕಾಗಿದೆ. 2008ರಲ್ಲಿ 3 ಮಂದಿ ಭೋವಿ ಸಮುದಾಯದಿಂದ ಸಚಿವರಾಗಿದ್ದರು. ಆದರೆ ಈಗ ಒಬ್ಬ ಸಚಿವರು ಇಲ್ಲ. ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆಯುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟದಲ್ಲಿ ಸಮುದಾಯದ ಒಬ್ಬರಾದರೂ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಬಳ್ಳಾಪುರದಲ್ಲಿ ನ. 3ರಂದು ನಡೆಯುವ ಸಿದ್ಧರಾಮೇಶ್ವರ ಜಯಂತಿ ಸಮಾರಂಭದಲ್ಲಿ ಜನಾಂಗಕ್ಕೆ ಸಿಗಬೇಕಾದ ಸವಲತ್ತುಗಳ ಕುರಿತು ಗಮನ ಸೆಳೆಯಲಾಗುವುದು. ದೊಡ್ಡಬಳ್ಳಾಪುರದಿಂದ ಪ್ರತಿಯೊಬ್ಬರು ಕುಟುಂಬ ಸಮೇತ ಬರುವ ಮೂಲಕ ಶಕ್ತಿ ಪ್ರದರ್ಶನ ಮಾಡಬೇಕಿದೆ ಎಂದು ಮನವಿ ಮಾಡಿದರು.
ಭೋವಿ ಜನಾಂಗ ಸಂಘದ ನಗರ ಅಧ್ಯಕ್ಷ ಟಿ.ಬಸವರಾಜ್ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ನಡೆಯಲಿರುವ ಸಿದ್ಧರಾಮೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವರಾದ ಅಶ್ವತ್ಥನಾರಾಯಣ, ಆರ್.ಅಶೋಕ್ ಸೇರಿದಂತೆ ಜನಾಂಗದ ಶಾಸಕರು, ಮಠಾಧೀಶರು ಭಾಗವಹಿಸಲಿದ್ದಾರೆ. ದೊಡ್ಡಬಳ್ಳಾಪುರದಿಂದ ತೆರಳಲು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ತಾಲ್ಲೂಕು ಭೋವಿ ಜನಾಂಗ ಸಂಘದ ಕಾರ್ಯದರ್ಶಿ ರಾಮಾಂಜಿನೇಯ, ಖಜಾಂಚಿ ಎಂ.ವೀರಪ್ಪ, ಯುವ ಅಧ್ಯಕ್ಷ ಎನ್.ಮಹೇಶ್, ಭೋವಿ ಸಮುದಾಯದ ಮುಖಂಡರಾದ ಹನುಮಂತರಾಜು, ಗುರುಮೂರ್ತಿ ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos