ಬೆಂಗಳೂರಲ್ಲಿ ಭೀಕರ ಅಪಘಾತ: ಮೂವರು ಯುವಕರು ಸ್ಥಳದಲ್ಲೇ ಸಾವು

ಬೆಂಗಳೂರಲ್ಲಿ ಭೀಕರ ಅಪಘಾತ: ಮೂವರು ಯುವಕರು ಸ್ಥಳದಲ್ಲೇ ಸಾವು

ಬೆಂಗಳೂರು, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಬಸವೇಶ್ವರನಗರದ ಪವಿತ್ರ ಪ್ಯಾರಡೈಸ್ ಹೋಟೆಲ್​ನಿಂದ ಮಾಗಡಿ ರಸ್ತೆ ಕಡೆ ಹೋಗುವಾಗ ಪುಣ್ಯ ಹೋಟೆಲ್ ಎದುರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಡಿವೈಡರ್ ಮತ್ತು ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ವರದಿಯಾಗಿದೆ. ಬಸವೇಶ್ವರನಗರದ ಪುಣ್ಯ ಆಸ್ಪತ್ರೆಯಲ್ಲಿ ತಡರಾತ್ರಿ 1:30ಕ್ಕೆ ಈ ದುರ್ಭಟನೆ ಸಂಭವಿಸಿದೆ. ಅನಿಲ್, ಕಾರ್ತಿಕ್ ಮತ್ತು ಶ್ರೀನಾಥ್ ಮೃತ ಯುವಕರಾಗಿದ್ಧಾರೆ. ವೀಕೆಂಡ್ ಆದ್ದರಿಂದ ನೈಟ್ ರೈಡಿಂಗ್ ಮೋಜು ಮಸ್ತಿಯಲ್ಲಿದ್ದ ಈ ಮೂವರು ಸ್ನೇಹಿತರು ತಲೆಗೆ ಹೆಲ್ಮೆಟ್ ಧರಿಸದೇ ವೇಗವಾಗಿ ಬೈಕ್ ಚಲಾಯಿಸುತ್ತಿದ್ದರು. ಈ ಯುವಕರು ರಾತ್ರಿ ಹೋಟೆಲ್​ನಲ್ಲಿ ಊಟ ಮುಗಿಸಿ ಯಮಾಹ ಆರ್​ ಒನ್ ಬೈಕ್​ನಲ್ಲಿ ಬಸವೇಶ್ವರನಗರದ ಪವಿತ್ರ ಪ್ಯಾರಡೈಸ್ ಕಡೆಯಿಂದ ಮಾಗಡಿ ರಸ್ತೆ ಕಡೆ ಹೋಗುತ್ತಿರುತ್ತಾರೆ. ಆಗ ರಸ್ತೆಯ ಡಿವೈಡರ್ ಹಾಗೂ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೂವರೂ ಕೂಡ ತಲೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಅಸುನೀಗುತ್ತಾರೆ. ಹೆಲ್ಮೆಟ್ ಇಲ್ಲದೆ ಹಾಗೂ ಅಜಾಗರೂಗಕತೆಯಿಂದ ಚಾಲನೆ ಮಾಡಿದ್ದರಿಂದ ಈ ಸಾವು ಸಂಭವಿಸಿದೆ. ಹೆಲ್ಮೆಟ್ ಧರಿಸಿದ್ದರೆ ಮೂವರ ಪ್ರಾಣ ಉಳಿಯುವ ಸಾಧ್ಯತೆ ಇತ್ತೆನ್ನಲಾಗಿದೆ. ಮೃತ ಯುವಕರಲ್ಲಿ ಅನಿಲ್ ಕುಣಿಗಲ್ ನಿವಾಸಿಯಾಗಿದ್ದು, ನಾಶಿಕ್​ನ ಹೆಚ್​ಎಎಲ್​ನಲ್ಲಿ ಕೆಲಸ ಮಾಡುತ್ತಿದ್ದ. ಕಾರ್ತಿಕ್ ಟಿ. ನರಸೀಪುರದ ನಿವಾಸಿಯಾಗಿದ್ದು, ಕೆಆರ್​ಡಿಐಎಲ್​ನಲ್ಲಿ ಎಂಜಿನಿಯರ್ ಆಗಿದ್ದ. ಹಾಗೂ ಶ್ರೀನಾಥ್ ಗೌರಿಬಿದನೂರು ನಿವಾಸಿಯಾಗಿದ್ದು ಆತನೂ ಟೆಕ್ಕಿಯಾಗಿದ್ದ. ಈ ಮೂವರಲ್ಲಿ ಅನಿಲ್ ಮತ್ತು ಶ್ರೀನಾತ್ ಅವರ ಮದುವೆಗೆ ಸಿದ್ಧತೆ ನಡೆದಿತ್ತೆನ್ನಲಾಗಿದೆ. ಕಾರ್ತಿಕ್ ತಂಗಿಯನ್ನು ಅನಿಲ್​ಗೆ ಮದುವೆ ಮಾಡಿಕೊಡುವ ಸಿದ್ಧತೆ  ನಡೆದು ಮದುವೆಯ ದಿನಾಂಕ ಮಾತ್ರ ಗೊತ್ತುಮಾಡುವುದು ಬಾಕಿ ಇತ್ತು. ಇನ್ನು, ಶ್ರೀನಾಥ್ ಕೂಡ ಮದುವೆಯಾಗಲು ಹುಡುಗಿಯನ್ನು ನೋಡಿಕೊಂಡು ಬಂದಿರುತ್ತಾನೆ. ಇಂಥ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು ಮೃತರ ಕುಟುಂಬಗಳನ್ನು ಜರ್ಝರಿತಗೊಳಿಸಿದೆ. ಈ ಮೂವರ ಮೃತದೇಹಗಳನ್ನ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos