ರಾಜ್ಯ ಕಾಂಗ್ರೆಸ್ ನಾಯಕರ ಕೋಟ್ಯಂತರ ‘ಬೇನಾಮಿ ಆಸ್ತಿ’ ಪತ್ತೆ!

ರಾಜ್ಯ ಕಾಂಗ್ರೆಸ್ ನಾಯಕರ ಕೋಟ್ಯಂತರ ‘ಬೇನಾಮಿ ಆಸ್ತಿ’ ಪತ್ತೆ!

ಬೆಂಗಳೂರು, ಏ. 19, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದ ಕೈ ನಾಯಕರಿಗೆ ಸಂಕಟ ಶುರುವಾಗಿದೆ. ಯಾಕೆಂದರೆ ಕಾಂಗ್ರೆಸ್ ನಾಯಕರು ನೂರಾರು ಕೋಟಿ ಅಕ್ರಮ ಸಂಪಾದನೆ ಮಾಡಿರುವ ವಿಚಾರ ಐಟಿ ತನಿಖೆಯಲ್ಲಿ ಬಹಿರಂಗವಾಗಿದೆ. ಹೀಗಾಗಿ ‌ವಾಮಮಾರ್ಗದಲ್ಲಿ ಸಂಪಾದಿಸಿದ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿ ಕೈ ನಾಯಕರು ಇದ್ದಾರೆ ಎಂದು ಐಟಿ ಉನ್ನತ ಮೂಲಗಳು ತಿಳಿಸಿವೆ. ಕಳೆದ ವರ್ಷದ ದಾಖಲೆಗಳ ಪರಿಶೀಲನೆಯ ವೇಳೆ ಕಾಂಗ್ರೆಸ್ ನಾಯಕರ ಕೋಟ್ಯಂತರ ರೂ. ಮೌಲ್ಯದ ಬೇನಾಮಿ ಆಸ್ತಿ ಪತ್ತೆ ಮಾಡಿದ್ದು, ಆಸ್ತಿ ವಿವರಗಳ ವರದಿಯನ್ನು ದೆಹಲಿಯಲ್ಲಿರುವ ಬೇನಾಮಿ ಟ್ರಿಬ್ಯೂನಲ್​ಗೆ ಕರ್ನಾಟಕ-ಗೋವಾ ಐಟಿ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಗೊತ್ತಾಗಿದೆ. ಟ್ರಬಲ್ ಶೂಟರ್ ಎಂದೇ ಫೇಮಸ್ ಆಗಿರುವ ಡಿ ಕೆ ಶಿವಕುಮಾರ್​ ಕುಟುಂಬಸ್ಥರು, ಸಂಬಂಧಿಕರು ಹಾಗೂ ಸ್ನೇಹಿತರ ಹೆಸರಲ್ಲಿ ಬರೋಬ್ಬರಿ 235 ಕೋಟಿ ಆಸ್ತಿ ಗಳಿಕೆ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಬೇನಾಮಿ ಆಸ್ತಿ ಮಾಲಿಕರು, ಡಿಕೆಶಿಗೂ ಇರುವ ನಂಟಿನ ವಿವರ ವರದಿಯಲ್ಲಿ ಉಲ್ಲೇಖವಾಗಿದೆ ಎಂಬ ಮಾಹಿತಿ ಸಿಕ್ಕಿದೆ.

2017ರ ಆಗಸ್ಟ್​ನಲ್ಲಿ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿ, ಬೆಂಗಳೂರು, ರಾಮನಗರ, ಕನಕಪುರ ಸೇರಿ ಹಲವೆಡೆ ದಾಳಿ ಮಾಡಿದ್ದರು. ಕಳೆದ ಒಂದೂವರೆ ವರ್ಷದ ತನಿಖೆಯಲ್ಲಿ 235 ಕೋಟಿ ಬೇನಾಮಿ ಆಸ್ತಿ ಪತ್ತೆಯಾಗಿದ್ದು, ಇನ್ನೂ ಹಲವರ ಹೆಸರಲ್ಲಿ ಡಿಕೆಶಿ ಬೇನಾಮಿ ಆಸ್ತಿ ಇರುವ ಶಂಕೆ‌ ಇದೆ ಎಂದು ಹೇಳಲಾಗಿದೆ. ಬೇನಾಮಿ ಆಸ್ತಿ ಸುಳಿಯಲ್ಲಿ ಬೆಳಗಾವಿಯ ಪ್ರಭಾವಿ ಕಾಂಗ್ರೆಸ್ ನಾಯಕ ರಮೇಶ್ ಜಾರಕಿಹೋಳಿ ಇದ್ದು, ಇವರಿಗೆ ಸಂಬಂಧಿಸಿದ 115 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಬೆಳಗಾವಿ, ಬೆಂಗಳೂರು ಹಾಗೂ ಗೋವಾದಲ್ಲಿ ಹೊಂದಿದ್ದಾರೆ ಎಂದು ಐಟಿ ಇಲಾಖೆ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ. ಹಾಗೆಯೇ ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೂಡ ಬರೋಬ್ಬರಿ 49 ಕೋಟಿ ಮೌಲ್ಯದ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಐಟಿ ಅಧಿಕಾರಿಗಳ ತನಿಖೆ ವೇಳೆ ಬಯಲಾಗಿದೆ ಎಂದು ಹೇಳಲಾಗಿದೆ. ಈ ಎಲ್ಲ ಅಂಶಗಳನ್ನು ಗೋವಾ ಐಟಿ ಅಧಿಕಾರಿಗಳು ಉಲ್ಲೇಖ‌ ಮಾಡಿರುವುದರಿಂದ ಕಾಂಗ್ರೆಸ್ ಘಟಾನುಘಟಿ ನಾಯಕರು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos