ಹತ್ತು ಹಲವು ಸಮಸ್ಯೆಯಲ್ಲಿ ಬೇಲೂರು ಬಿಇಒ ಕಚೇರಿ

ಹತ್ತು ಹಲವು ಸಮಸ್ಯೆಯಲ್ಲಿ ಬೇಲೂರು ಬಿಇಒ ಕಚೇರಿ

ಬೇಲೂರು, ನ. 16: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡ ಶಿಥಿಲಗೊಂಡು ದುರಸ್ತಿಗೆ ಕಾಯುತ್ತಿದೆ. ತಾಲೂಕಿನ ನೂರಾರು ಶಾಲೆಗಳ, ಸಾವಿರಕ್ಕೂ ಹೆಚ್ಚು ನೌಕರ ಸಿಬ್ಬಂದಿಗಳ ಕರ್ತವ್ಯದ ಕೆಲಸ ಕಾರ್ಯಗಳ ನಡೆಸುವ ಈ ಕಟ್ಟಡವಿಂದು ಅನೇಕ ಸಮಸ್ಯೆಗಳೊಂದಿಗೆ ನಲುಗುತ್ತಿದೆ. ಕಟ್ಟಡದ ಮೇಲ್ಚಾವಣಿ ಉರುತ್ತಿದೆ. ಕಬ್ಬಿಣಗಳು ಕಾಣುತ್ತಿದೆ. ನೌಕರರು ಮೇಲ್ಚಾವಣಿ ಉದುರಿ ಆಗುವ ಅಪಾಯದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹೆಲ್ಮೆಟ್ ಧರಿಸುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನಲ್ಲಿ ಯಾವುದಾದರೊಂದು ಶಾಲೆಯ ಕೊಠಡಿ ಸೋರುತ್ತಿದ್ದರೆ, ಗೋಡೆ ಬಿರುಕು ಬಿಟ್ಟಿದ್ದರೆ ದೂರು ಅನುಸರಿಸಿ ಸ್ಥಳಕ್ಕೆ ಭೇಟಿ ಮಾಡಿ ಪರ್ಯಾಯ ಮಾರ್ಗಕ್ಕೆ ಕ್ರಮ ಕೈಗೊಳ್ಳುವ, ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡವೆ ಇಂದು ಸಮಸ್ಯೆಯ ಸುಳಿಯಲ್ಲಿ ಸಿಲುಕಿ ನಲುಗುತ್ತಿದೆ ಎಂದರೆ ನಿಜಕ್ಕೂ ಬೇಸರದ ಸಂಗತಿಯಲ್ಲವೆ.

ಕಚೇರಿಗೆ ಆರ್‍ಸಿಸಿ ಕಟ್ಟಡ ನಿರ್ಮಿಸಿ ಹಲವು ವರ್ಷಗಳೆ ಕಳೆದಿದೆ. ಇದೀಗ ಕಚೇರಿ ಕಟ್ಟಡದ ಮೇಲ್ಚಾವಣಿ ಪೂರ್ಣ ಹಾನಿಗೊಳಗಾಗಿದೆ. ಮಳೆ ಬಂದ ಸಂದರ್ಭ ಮೇಲ್ಚಾವಣಿಯ ನೀರು ಕಚೇರಿಯೊಳಗೆ ಇಳಿಯತೊಡಗುತ್ತದೆ. ಗೋಡೆಗಳ ಮೂಲಕ ಪರಿಸರಿಸುತ್ತದೆ. ನೀರು ಹರಿದು ಗೋಡೆಯಲ್ಲಾ ಬೂಸ್ಟ್ ಬಂದಿದೆ. ಮೇಲ್ಚಾವಣಿಯ ಸೀಮೆಂಟಿನ ಪ್ಲಾಸ್ಟರ್ ಅಲ್ಲಲ್ಲಿ ಉದುರಿದ್ದು, ಕಬ್ಬಿಣದ ರಾಡುಗಳು ಕಾಣಿಸುತ್ತಿವೆ. ಇನ್ನೂ ಹಲವು ಕಡೆ ಬಿರುಕು ಬಿಟ್ಟಿದ್ದು, ಯಾವ ಸಂದರ್ಭದಲ್ಲಿ ಕಳಚಿ ಬೀಳುವ ಸಾಧ್ಯತೆಯಿದೆಯೊ ಗೊತ್ತಿಲ್ಲ.

ವಿಶೇಷ ಎಂದರೆ ಈ ಆರ್‍ಸಿಸಿ ಕಟ್ಟಡದ ಮೇಲ್ಭಾಗಕ್ಕೆ ತೆರಳಲು ಮೆಟ್ಟಿಲುಗಳನ್ನ ನಿರ್ಮಿಸಿಲ್ಲ. ಇದರಿಂದ ಮೇಲ್ಚಾವಣಿಯ ಹೊರಭಾಗದಲ್ಲಿ ಏನೆಲ್ಲಾ ವಸ್ತುಗಳು ಬಿದ್ದಿವೆ, ನೀರು ಸರಾಗವಾಗಿ ಹರಿಯಲಾಗದ ಸ್ಥಿತಿ ಇದೆಯೆ ಎಂಬುದನ್ನು ತಿಳಿಯಲು ಆಗದಿರುವುದು ಸಹ ಕಟ್ಟಡ ದುಸ್ತಿತಿಗೆ ಬರಲು ಕಾರಣವಾಗಿದೆ.

ನೂರಾರು ಶಾಲೆಗಳ, ನೌಕರರ ಹಲವಾರು ದಾಖಲೆಗಳ ಹೊಂದಿರುವ ಈ ಬಿಇಒ ಕಚೇರಿ ಕಟ್ಟಡದಲ್ಲಿ ಸ್ಥಳದ ಕೊರತೆ ಉಂಟಾಗಿದೆ. ದಾಖಲಾತಿಗಳ ಇಟ್ಟುಕೊಳ್ಳಲು ಸ್ಥಳವಿಲ್ಲದಂತಾಗಿದ್ದು, ಇರುವ ಒಂದು ಚಿಕ್ಕದಾದ ಕೊಠಡಿಯಲ್ಲಿ ದಾಖಲೆಗಳ ಇಡುವುದರಿಂದ ದಾಖಲೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ.

ಇದರ ನಡುವೆಯೆ ಕಟ್ಟಡದ ಸುತ್ತಮುತ್ತ ಗಿಡಗಂಟೆಗಳು ಬೆಳೆದಿದ್ದು, ಇದರ ತೆರವಿಗೆ ಕ್ರಮ ಕೈಗೊಳ್ಳಬೇಕಿದೆ. ಕಟ್ಟಡವು ಸುಣ್ಣಬಣ್ಣವಿಲ್ಲದೆ ಸೊರಗುತ್ತಿದೆ. ಆದರೆ ಕಚೇರಿಯಲ್ಲಿ ಡಿ.ದರ್ಜೆ ನೌಕರರ ಕೊರತೆ ಇರುವುದರಿಂದ ಕಚೇರಿಯ ಕೆಲವೊಂದು ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿದೆ. ಕಟ್ಟಡದ ಮುಂಭಾಗ ಸ್ಥಳವಿದ್ದರೂ ಉತ್ತಮ ಯೋಜನೆಯಡಿ ಕಟ್ಟಡ ನಿರ್ಮಿಸದೆ ಇರುವುದೆ ಈ ಸಮಸ್ಯೆಗೆ ಪ್ರಮುಖ ಕಾರಣ ಎನ್ನುತ್ತಾರೆ ಹೆಸರು ಹೇಳದ ನೌಕರರೊಬ್ಬರು.

 

 

ಫ್ರೆಶ್ ನ್ಯೂಸ್

Latest Posts

Featured Videos