ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ

  • In Metro
  • January 17, 2019
  • 273 Views
ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ

ಬೆಂಗಳೂರು:
ಬಿಜೆಪಿ ಸದಸ್ಯರ ಬಹಿಷ್ಕಾರದ ನಡುವೆ ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಮೇಯರ್ ಗಂಗಾಂಬಿಕೆಯವರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಹನ್ನೆರಡೂ ಸ್ಥಾಯಿ ಸಮಿತಿಗೆಳಿಗೆ ಅಧ್ಯಕ್ಷರನ್ನು ಚುನಾಯಿಸಲಾಗಿದೆ. ಮೇಯರ್ ಅವರು ಕೆಎಂಸಿ ನಿಯಮ ಉಲ್ಲಂಘಿಸಿ ಚುನಾವಣೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರು ಚುನಾವಣೆಯನ್ನು ಬಹಿಷ್ಕರಿಸಿ ಹೊರನಡೆದರು.

ಬಿಜೆಪಿ ಸದಸ್ಯರ ಬಹಿಷ್ಕಾರದ ನಡುವೆಯೂ ಮೇಯರ್ ಅವರು, ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಸದಸ್ಯರ ಬೆಂಬಲದಿಂದ 12 ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಮೊದಲಿಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಜೆಡಿಎಸ್‍ನ ಹೇಮಲತಾ ಗೋಪಾಲಯ್ಯ ಅಧ್ಯಕ್ಷರಾಗಿ ಆಯ್ಕೆಯಾದರು. ಬೃಹತ್ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಗೆ ಕಾಂಗ್ರೆಸ್‍ನ ಲಾವಣ್ಯ ಗಣೇಶ್, ಅಪೀಲು ಸ್ಥಾಯಿ ಸಮಿತಿಗೆ ಸುಜಾತಾ ರಮೇಶ್, ಸಾಮಾಜಿಕ ನ್ಯಾಯ ಸಮಿತಿಗೆ ಸೌಮ್ಯಾ ಶಿವಕುಮಾರ್, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ವೇಲು ನಾಯ್ಕರ್ ಅಧ್ಯಕ್ಷರಾಗಿ ಚುನಾಯಿತರಾದರು.

ಆರೋಗ್ಯ ಸ್ಥಾಯಿ ಸಮಿತಿಗೆ ಪಕ್ಷೇತರರಾದ ಮುಜಾಹಿದ್ ಪಾಷಾ, ಆಡಳಿತ ಮತ್ತು ಸುಧಾರಣಾ ಸ್ಥಾಯಿ ಸಮಿತಿಗೆ ಆನಂದ್ ಆಯ್ಕೆಯಾದರು. ತೋಟಗಾರಿಕೆ ಸ್ಥಾಯಿ ಸಮಿತಿಗೆ ಜೆಡಿಎಸ್‍ನ ಐಶ್ವರ್ಯಾ, ವಾರ್ಡ್ ಮಟ್ಟದ ಕಾಮಗಾರಿಗಳ ಸ್ಥಾಯಿ ಸಮಿತಿಗೆ ಉಮ್ಮೇ ಸಲ್ಮಾ, ಶಿಕ್ಷಣ ಸ್ಥಾಯಿ ಸಮಿತಿಗೆ ಇಮ್ರಾನ್ ಪಾಷಾ ಅಧ್ಯಕ್ಷರಾದರು. ಮಾರುಕಟ್ಟೆ ಸ್ಥಾಯಿ ಸಮಿತಿಗೆ ಪಕ್ಷೇತರರಾದ ಫರೀದಾ ಇಸ್ತಿಯಾಕ್, ನಗರ ಯೋಜನೆ ಸ್ಥಾಯಿ ಸಮಿತಿಗೆ ಕಾಂಗ್ರೆಸ್‍ನ ನಾಗರಾಜ್ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯೂ ಆದ ಮೇಯರ್ ಗಂಗಾಂಬಿಕೆಯವರು 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಮೇಯರ್ ಗಂಗಾಂಬಿಕೆಯವರು ಕೆಎಂಸಿ ನಿಯಮ ಉಲ್ಲಂಘಿಸಿ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ನಡೆಸಿದ್ದು, ಈ ಕುರಿತು ಕಾನೂನು ಹೋರಾಟ ನಡೆಸುವ ಕುರಿತು ಮುಖಂಡರೊಂದಿಗೆ ಚರ್ಚಿಸಲಾಗುವುದು ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ.ನಿಯಮದಂತೆ 11 ಮಂದಿ ಸದಸ್ಯರ ಪೈಕಿ ಅಧ್ಯಕ್ಷರ ಆಯ್ಕೆಗೆ ಕನಿಷ್ಟ 6 ಮಂದಿ ಸದಸ್ಯರಿರಬೇಕು. ಆದರೆ ನಾಲ್ಕೈದು ಜನ ಸದಸ್ಯರನ್ನಿಟ್ಟುಕೊಂಡು ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಗಿದೆ ಎಂದು ದೂರಿದರು. ಈ ಅನ್ಯಾಯದ ವಿರುದ್ಧ ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸಿದ್ದು, ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಫ್ರೆಶ್ ನ್ಯೂಸ್

Latest Posts

Featured Videos