ಮಾಜಿ ವಿರುದ್ಧ ಹಾಲಿ ನಿರ್ದೇಶಕರ ಗುಡುಗು

ಮಾಜಿ ವಿರುದ್ಧ ಹಾಲಿ ನಿರ್ದೇಶಕರ ಗುಡುಗು

ದೊಡ್ಡಬಳ್ಳಾಪುರ, ಜು. 31: ಬಮೂಲ್ ನಿರ್ದೇಶಕ ಸ್ಥಾನಕ್ಕೆ ಕಾನೂನು ಬದ್ಧವಾಗಿಯೇ ಆಯ್ಕೆಯಾಗಿದ್ದೇನೆ. ಆದರೆ, ನನ್ನ ಗೆಲುವನ್ನು ಸಹಿಸಿಕೊಳ್ಳಲಾಗದ ಬಮೂಲ್ ಮಾಜಿ ನಿರ್ದೇಶಕ ಎಚ್.ಅಪ್ಪಯ್ಯ ಅವರು, ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡುತ್ತೇನೆ’ ಎಂದು ಬಿ.ಸಿ. ಆನಂದ್ ಕುಮಾರ್ ತಿರುಗೇಟು ನೀಡಿದ್ದಾರೆ.
ನಗರದ ಬಮೂಲ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್, `ಬಮೂಲ್ ಟ್ರಸ್ಟ್ನಿಂದ ಬರುವ 52 ಲಕ್ಷ ರೂ.ವನ್ನು ಹಾಡೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘವೊಂದಕ್ಕೇ ವರ್ಗಾವಣೆ ಮಾಡಿಕೊಂಡು ಅಕ್ರಮವೆಸಗಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
`ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಿಸಲಾಗಿರುವ ಹೈಮಾಸ್ಟ್ ವಿದ್ಯುತ್ ದೀಪಕ್ಕೆ ಗ್ರಾಮ ಪಂಚಾಯಿತಿ ವತಿಯಿಂದ 4 ಲಕ್ಷ, ಬಮೂಲ್ನಿಂದ 12 ಲಕ್ಷ ಬಿಡುಗಡೆ ಮಾಡಿದ್ದಾರೆ. ಇದಲ್ಲದೆ ಹಲವಾರು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಎಚ್.ಅಪ್ಪಯ್ಯ ಅವರ ಮಾತಿಗೆ ಕಟ್ಟುಬಿದ್ದು, ವಿನಾಕಾರಣ ಹಣ ಡ್ರಾ ಮಾಡಿದ್ದಾರೆ. ಇವರು ಸಹ ಸಂಕಷ್ಟಕ್ಕೆ ಸಿಲುಕಲಿದ್ದಾರೆ’ ಎಂದು ಹೇಳಿದರು.
`ಬಮೂಲ್ ಮಾಜಿ ನಿರ್ದೇಶಕ ಎಚ್.ಅಪ್ಪಯ್ಯ ಅವರ ಸ್ವಗ್ರಾಮವಾಗಿರುವ ಹಾಡೋನಹಳ್ಳಿ ಹಾಲು ಉತ್ಪಾಕರ ಸಹಕಾರ ಸಂಘ ಹಾಗೂ ಗ್ರಾಮ ಪಂಚಾಯಿತಿ ಎರಡಕ್ಕೂ ಪರೋಕ್ಷವಾಗಿ ಬೆಂಬಲವಾಗಿ ನಿಂತು ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವುದು ಬಹಿರಂಗವಾಗಿದೆ’ ಎಂದರು.
`ಯಾವುದೇ ಸಹಕಾರ ಸಂಸ್ಥೆಗೆ ಸರ್ಕಾರದಿಂದ ನಾಮ ನಿರ್ದೇಶನ ಸದಸ್ಯರಾದರೆ ಮೂರು ವರ್ಷಗಳ ಕಾಲ ಸದಸ್ಯತ್ವ ಇರಲಿದೆ. ಅಷ್ಟರಲ್ಲಿ ಇದೇ ಸಂಸ್ಥೆಯ ಉನ್ನತ ಸ್ಥಾನಕ್ಕೆ ಜನರಿಂದ ಆಯ್ಕೆಯಾಗಲು ಕಾನೂನಿನಲ್ಲಿ ಅವಕಾಶ ಇದೆ. ಈ ಎಲ್ಲಾ ವಿಚಾರವನ್ನು ತಿಳಿದ ನಂತರವೇ ಬಮೂಲ್ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಅಪ್ಪಯ್ಯ ಅವರು ತಾವು ಬಮೂಲ್ ನಿರ್ದೇಶಕರಾಗಿದ್ದ ಅವಧಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ಮುಚ್ಚಿಕೊಳ್ಳಲು, ಈಗ ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ’ ಎಂದು ದೂರಿದರು.

ಶೀಘ್ರದಲ್ಲೆ ರಾಸಲೀಲೆ ಸಿಡಿ ಬಹಿರಂಗ
ಬಮೂಲ್ ಮಾಜಿ ನಿರ್ದೇಶಕ ಅಪ್ಪಯ್ಯಣ್ಣ ಅವರ ಪುತ್ರ ಹಾಡೋನಹಳ್ಳಿಯ ಖಾಸಗಿ ಕಚೇರಿಯೊಂದರಲ್ಲಿ ನಡೆಸಿರುವ ರಾಸಲೀಲೆಗಳಿಗೆ ಸಂಬಂಧಿಸಿದಂತೆ ದಾಖಲೆಗಳು ಸಿಕ್ಕಿವೆ. ಶೀಘ್ರದಲ್ಲೆ ಅದರ ಸಿಡಿಯನ್ನು ಬಿಡುಗಡೆ ಮಾಡುತ್ತೇನೆ’ಎಂದು ಹಾಲಿ ನಿರ್ದೇಶಕ ಬಿ.ಸಿ. ಆನಂದ್ ಗುಡುಗಿದರು.
ಕಾಂಗ್ರೆಸ್ ಮುಖಂಡ ಹಾಡೋನಹಳ್ಳಿ ಮುನೇಗೌಡ ಮಾತನಾಡಿ, `ಹಾಡೋನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತಂತೆ ಈಗಾಗಲೇ ಲೋಕಾಯುಕ್ತ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದೇವೆ. ಅದರ ಕುರಿತು ವಿಚಾರಣೆ ನಡೆಯುತ್ತಿದೆ’ ಎಂದರು.
ಈ ಪತ್ರಿಕಾಗೋಷ್ಟಿಯಲ್ಲಿ ಕಂಟನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos