ಜಾತಿ ಟೀಕೆ ಶಿವರಾಮೇಗೌಡ ವಿರುದ್ಧ ಬಲಿಜ ಸಂಘಟನೆ ದೂರು

ಜಾತಿ ಟೀಕೆ ಶಿವರಾಮೇಗೌಡ ವಿರುದ್ಧ ಬಲಿಜ ಸಂಘಟನೆ ದೂರು

ಬೆಂಗಳೂರು, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಸುಮಲತಾ ಅವರನ್ನು ಜಾತಿ ಆಧಾರದ ಮೇಲೆ ಟೀಕಿಸುವ ಭರದಲ್ಲಿ ಮಂಡ್ಯವನ್ನು ನಾಯ್ಡುಮಯ ಮಾಡಲಾಗುತ್ತಿದೆ ಎಂದು ಹೇಳಿದ್ದ ಸಂಸದ ಎಲ್.ಆರ್. ಶಿವರಾಮೇಗೌಡ ವಿರುದ್ಧ ಬಲಿಜ ಸಂಘಟನೆಯೊಂದು ದೂರು ನೀಡಿದೆ. ನಾಯ್ಡು ಸಮುದಾಯದ ಆತ್ಮಗೌರವಕ್ಕೆ ಧಕ್ಕೆ ತಂದ ಶಿವರಾಮೇಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಅಂಬರೀಷ್ ಅವರು ನಾಯ್ಡು. ಅವರ ಜೊತೆ ಪ್ರಚಾರ ಮಾಡುತ್ತಿರುವ ದರ್ಶನ್ ಮತ್ತು ರಾಕ್​ಲೈನ್ ವೆಂಕಟೇಶ್ ಅವರೂ ನಾಯ್ಡುಗಳೇ. ಬೆಂಗಳೂರು ಸುತ್ತಮುತ್ತ ಇದ್ದ ನಾಯ್ಡುಗಳು ಈ ಮಂಡ್ಯಕ್ಕೆ ಬಂದಿದ್ದಾರೆ. ಮಂಡ್ಯವನ್ನು ನಾಯ್ಡುಮಯ ಮಾಡಲು ಹೊರಟಿದ್ದಾರೆ ಎಂದು ಜೆಡಿಎಸ್ ಸಂಸದ ಎಲ್.ಆರ್. ಶಿವರಾಮೇಗೌಡ ಅವರು ಕೆಲ ದಿನಗಳ ಹಿಂದೆ ಮಾತನಾಡಿ ವಿವಾದ ಸೃಷ್ಟಿಸಿದ್ದರು. ಶಿವರಾಮೇಗೌಡ ಅವರ ಈ ಹೇಳಿಕೆಗೆ ನಾಯ್ಡುಗಳ ಸಂಘಟನೆಯು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಸೌಹಾರ್ದಯುತವಾಗಿ ಬದುಕುತ್ತಿರುವ ಬಲಿಜ ನಾಯ್ಡು ಸಮುದಾಯದ ಜನರ ವಿರುದ್ಧ ಆಡಿರುವ ಮಾತಿಗೆ ಶಿವರಾಮೇಗೌಡ ಮತ್ತಿತರರು ಕ್ಷಮೆ ಕೇಳಬೇಕೆಂದು ಕರ್ನಾಟಕ ಬಲಿಜ ಸಂಘ ಆಗ್ರಹಿಸಿದೆ. ರಾಜ್ಯಾದ್ಯಂತ 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಬಲಿಜ ನಾಯ್ಡು ಸಮುದಾಯದವರು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 10ರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಮಂಡ್ಯವೊಂದರಲ್ಲೇ ಸಮುದಾಯದ 50 ಸಾವಿರ ವೋಟ್ ಇದೆ. ಕರ್ನಾಟಕದಲ್ಲಿ ಕನ್ನಡವನ್ನು ಒಪ್ಪಿಕೊಂಡು ಒಟ್ಟಾಗಿ ಜೀವನ ಮಾಡುತ್ತಿದ್ದೇವೆ. ಇಲ್ಲಿಯವರೆಗೂ ಯಾವುದೇ ಭಿನ್ನಾಭಿಪ್ರಾಯ ನಮ್ಮ ಮಧ್ಯೆ ಇರಲಿಲ್ಲ. ಈಗ ನಾಯ್ಡು ಜಾತಿ ಬಗ್ಗೆ ಕೀಳಾಗಿ ಮಾತನಾಡುವ ಮೂಲಕ ಜೆಡಿಎಸ್ ಮುಖಂಡರು ಜಾತಿ ಜಾತಿ ಮಧ್ಯೆ ಎತ್ತಿಕಟ್ಟುತ್ತಿದ್ದಾರೆ. ಅವರು ನಾಯ್ಡು ಸಮುದಾಯಕ್ಕೆ ಕ್ಷಮೆ ಕೇಳಬೇಕು ಎಂದು ಬಲಿಜ ನಾಯ್ಡು ಸಂಘಟನೆಯ ಪ್ರಧಾನ ಕಾರ್ಯದರ್ಶಿ ವೀರೇಂದ್ರ ಕುಮಾರ್ ಒತ್ತಾಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos