ಬಕ್ರೀದ್‌ ಗೆ ಜೋರಾಯ್ತು ಕುರಿಗಳ ಮಾರಾಟ

ಬಕ್ರೀದ್‌ ಗೆ ಜೋರಾಯ್ತು ಕುರಿಗಳ ಮಾರಾಟ

ದೇವನಹಳ್ಳಿ, ಆ. 10: ತ್ಯಾಗ ಬಲಿದಾನಗಳ ಸಂಕೇತವಾಗಿ ಆಚರಿಸುವಂತಹ ಮುಸಲ್ಮಾನರ ಬಕ್ರೀದ್‌ ಹಬ್ಬ ಇನ್ನೆರಡು ದಿನಗಳ ಬಾಕಿ ಇರುವಾಗಲೇ ಮಾರುಕಟ್ಟೆಗಳಲ್ಲಿ ಕುರಿ ಮತ್ತು ಮೇಕೆಗಳಿಗೆ ಬರ್ಜರಿ ಡಿಮೇಂಡ್ ಬಂದಿದೆ. ಸಾಮಾನ್ಯವಾಗಿ 20-25 ಸಾವಿರ ರೂ. ಹಾಗೂ ಎಡರು ಕುರಿಗಳಿಗೆ 50 ಸಾವಿರಗಳಂತೆ ಅಧಿಕ ಬೆಲೆಯಲ್ಲಿ ಮಾರಾಟವಾಗುತ್ತಿರುವುದು ಕಂಡು ಬಂದಿದೆ.

ಕುರಿಗಳನ್ನು ಸಾಕಾಣಿಕೆ ಮಾಡುವವರು ಹೇಳುವ ಪ್ರಕಾರ ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಕುರಿಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಮನೆಯ ಹತ್ತಿರ ಹುಡುಕಿಕೊಂಡು ಬರುತ್ತಾರೆ.

ಅಂಗಾಗ ವೈಫಲ್ಯ ಕುರಿ ಬಲಿಗೆ ನಿಷೇಧ

ಗಾಯವಾದ ಕುರಿ ಬಲಿ ನೀಡಲಾಗುವುದಿಲ್ಲ, ಯಾವುದಾದರೂ ಅಂಗ ಊನವಾದರೆ ಬಲಿಗೆ ಅನರ್ಹವಾಗಿರುತ್ತದೆ. ಇದಕ್ಕೆ ಇಸ್ಲಾಂನಲ್ಲಿ ಆದ್ಯತೆ ಇಲ್ಲ. ಅಲ್ಲದೆ ರೋಗಗ್ರಸ್ಥವಾಗಿರುವ ಕುರಿಯನ್ನು ಬಲಿ ನೀಡುವುದಿಲ್ಲ, ಕುರಿಯ ಕೊಂಬು ಮುರಿದಿದ್ದರೂ ಸಹ ಬಲಿ ನೀಡಲು ಅನರ್ಹವಾಗಿರುತ್ತದೆ. ಈ ಸಮಯದಲ್ಲಿ ಗಾಳಿ ಮಳೆಗಾವಾಗಿದ್ದು, ಇದನ್ನು ಶೀತದಿಂದ ಸಂರಕ್ಷಿಸುವುದು, ಅಂಗಗಳಿಗೆ ಗಾಯವಾಗದಂತೆ ನೋಡಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ ಎಂದು ಮುಸ್ಲಿಂ ಮುಖಂಡ ಫಸಲ್ ಪಾಶ ಹೇಳುತ್ತಾರೆ.

ಒಂದು ಕುರಿ ತೂಕಕ್ಕೆ ತಕ್ಕಂತೆ 10 ರಿಂದ 25 ಸಾವಿರದವರೆಗೂ ಮಾರಾಟವಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಕುರಿ ಮಾಂಸದ ದರ 400 ರಿಂದ 500 ರೂ. ವರೆಗೆ ಇದೆ. ಕೊಂಡುಕೊಳ್ಳುವವರು ಉಂಡೆ ಕುರಿಯನ್ನೇ ತೂಕಕ್ಕೆ ಹಾಕಿ ಕಿಲೋಗೆ ಸಾವಿರದಂತೆ ನಿಗಧಿ ಮಾಡಿ ಮಾರಾಟ ಮಾಡಿಕೊಳ್ಳುತ್ತಾರೆ. ಮಾರಾಟ ಮಾಡಲು ಹಲವು ತಿಂಗಳಿನಿಂದ ಕುರಿಗಳನ್ನು ತಯಾರು ಮಾಡಲಾಗುತ್ತದೆ. ಕೊಬ್ಬಿದ, ಹೆಚ್ಚು ತೂಕವುಳ್ಳ, ಕೊಬ್ಬಿರುವ ಕುರಿಗಳಿಗೆ ಬೇಡಿಕೆ ಇರುವ ಕಾರಣ ನಾವು ಇದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಹಬ್ಬ ಇನ್ನೇನು ಒಂದು ತಿಂಗಳು ಇದ್ದಂತೆ ಕುರಿಗೆ ಹೆಚ್ಚು ಆರೈಕೆ ಮಾಡಲಾಗುತ್ತದೆ. ಪೌಷ್ಠಿಕ ಆಹಾರ, ತಾಜ ಸೊಪ್ಪು ಹೀಗೆ ಹತ್ತು ಹಲವಾರು ರೀತಿಯಲ್ಲಿ ಕುರಿಯನ್ನು ನೋಡಿಕೊಳ್ಳಲಾಗುತ್ತದೆ. ಮಗುವಿನಂತೆ ಪೋಷಿಸುವುದು ಮುಖ್ಯವಾಗಿರುತ್ತದೆ ಅಂತಹ ಕುರಿಯನ್ನು ಬಕ್ರೀದ್ ಹಬ್ಬದಲ್ಲಿ ಅಲ್ಲಹನಿಗೆ ಬಲಿ ನೀಡಲಾಗುತ್ತದೆ ಎಂದು ಜಾಮೀಯ ಮಸೀದಿಯ ಹೈದರ್ ಸಾಬ್ ಹೇಳುತ್ತಾರೆ.

ಹಬ್ಬವನ್ನು ಮಾಡುವ ವಿಶೇಷತೆ

ಪ್ರವಾದಿಗಳಲ್ಲಿ ಒಬ್ಬರಾದ ಪ್ರವಾದಿ ಇಬ್ರಾಹಿಂ ತಮ್ಮ ಮಗ ಇಸ್ಮಾಯಿಲ್‌ ನನ್ನು ಸೃಷ್ಟಿಕರ್ತ ಅಲ್ಲಾಹನಿಗೆ ಬಲಿ ಕೊಡಲು ಮುಂದಾದ ದಿನವನ್ನು ಈದ್-ಉಲ್-ಅದಾ (ಬಕ್ರೀದ್) ಎನ್ನಲಾಗುತ್ತದೆ. ತನ್ನ ಮಗನನ್ನು ಬಲಿ ಕೊಡುವಾಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಿಸ್ಮಿಲ್ಲಾ ಎಂದು ಹೇಳಿ ಮಗನ ಕತ್ತಿನ ಮೇಲೆ ಹಲವಾರು ಬಾರಿ ಕತ್ತಿ ಹರಿಸಿದರೂ ಕತ್ತು ಕುಯ್ಯುವುದಿಲ್ಲ. ಆ ವೇಳೆಯಲ್ಲಿ ದೇವದೂತ ಜಿಬ್ರಾಯಿಲ್ ಪ್ರತ್ಯಕ್ಷರಾಗಿ ಒಂದು ದುಂಬಿ (ದಷ್ಟಪುಷ್ಟ ಕುರಿ)ಯನ್ನು ಆ ಜಾಗದಲ್ಲಿ ಇಡುತ್ತಾರೆ. ಆಗ ಸತ್ಯ ನಿಷ್ಠಯಿಂದ ಆ ಕುರಿಯನ್ನು ಬಲಿ ನೀಡುವ ಮೂಲಕ ಇಸ್ಲಾಂ ಧರ್ಮದಲ್ಲಿ ಇದೊಂದು ಸುವರ್ಣ ದಿನವಾಗಿಬಿಡುತ್ತದೆ.

 

ಬಲಿಕೊಟ್ಟ ಪ್ರಾಣಿಯ ಮಾಂಸ ಮೂರು ಭಾಗ

ಬಕ್ರೀದ್ ಹಬ್ಬದಲ್ಲಿ ಬಲಿ ನೀಡಿದ ಪ್ರಾಣಿಯ ಮಾಂಸವನ್ನು3 ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ಸಂಬಂಧಿಕರಿಗೆ, ಎರಡನೇ ಭಾಗವನ್ನು ಬಡವರಿಗೆ ಹಂಚುತ್ತಾರೆ. ಮೂರನೇ ಭಾಗವನ್ನು ಮನೆಯವರಿಗಾಗಿ ಉಳಿಸಿಕೊಳ್ಳುವ ಸಂಪ್ರದಾಯವಿದೆ. ಪ್ರವಾದಿ ಇಬ್ರಾಹಿಂನ ದೈವಾಜ್ಞೆ ಪಾಲನೆಯ ನೆನಪನ್ನು ಬಲಿದಿನದಂದು ಪುನರಾವರ್ತನೆಗೆ ಒಳಪಡಿಸುವುದು ವಿಶೇಷ.

ಬಕ್ರೀದ್ ಹಬ್ಬದಲ್ಲಿ ಕುರಿಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ನಮ್ಮ ಮನೆಯಲ್ಲಿ 10-15 ಕುರಿಗಳನ್ನು ಸಾಕಲಾಗಿದೆ. ಮೂರು ಕುರಿಗಳನ್ನು ಈಗಾಗಲೇ ಮಾರಿದ್ದೇವೆ. ಇನ್ನುಳಿದ ಕುರಿಗಳನ್ನು ಹಾಗೇಯೆ ಉಳಿಸಿಕೊಂಡು ಸಾಕಾಣಿಕೆ ಮಾಡಲಾಗುತ್ತಿದೆ. ಮುಸಲ್ಮಾನರು ಮನೆಯ ಹತ್ತಿರವೇ ಬಂದು ಖರೀದಿಸುವುದರಿಂದ ಮನೆ ಬಾಗಿಲಿಗೆ ಹಣ ಬರುವಂತೆ ಆಗಿದೆ. ತಾಲೂಕಿನಲ್ಲಿ ಕುರಿ ಸಾಕಾಣಿಕೆ ಹೆಚ್ಚು ಮಾಡುವುದರಿಂದ ಒಂದು ಕುರಿ ಮತ್ತು ಉಣ್ಣೆ ನಿಗಮವನ್ನು ಸ್ಥಾಪಿಸಿದರೆ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತದೆ

ನಾರಾಯಣಸ್ವಾಮಿ, ಕುರಿ ಸಾಕಾಣಿಕೆಗಾರ, ಬೈಚಾಪುರ

ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕುರಿ ಅಭಿವೃದ್ಧಿ ಮಂಡಳಿಯವರು ಕುರಿ ಉತ್ಪಾದನಾ ಸಹಕಾರ ಸಂಘವನ್ನು ಸ್ಥಾಪಿಸಿ ಕುರಿ ಸಾಕುವವರಿಗೆ ತಲಾ ಒಂದು ಲಕ್ಷದಿಂದ 2 ಲಕ್ಷರೂಗಳವರೆಗೆ ಸಾಲ ಸೌಲಭ್ಯಗಳ ಮೂಲಕ ನೀಡಿದರೆ ಅನುಕೂಲವಾಗುತ್ತದೆ. ಶೆಡ್ ನಿರ್ಮಾಣ ಮೇವು ಹೀಗೆ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಾಧಿಕಾರಿಗಳು ಮಾಡಬೇಕು.

 

ಫ್ರೆಶ್ ನ್ಯೂಸ್

Latest Posts

Featured Videos