ʼಕಿರಿಕ್ ಪಾರ್ಟಿ’ ಆಯ್ತೂ ಈಗ ʻಬ್ಯಾಚುಲರ್ ಪಾರ್ಟಿʼ!

ʼಕಿರಿಕ್ ಪಾರ್ಟಿ’ ಆಯ್ತೂ ಈಗ ʻಬ್ಯಾಚುಲರ್ ಪಾರ್ಟಿʼ!

ಬೆಂಗಳೂರು: ನಮ್ಮ ಸ್ಯಾಂಡಲ್‌ ವುಡ್ ನಲ್ಲಿ‘ಕಿರಿಕ್ ಪಾರ್ಟಿ’ ಸಿನಿಮಾ ಅತಿ ಹೆಚ್ಚು ದಾಖಲೆಯನ್ನು ಸೃಷ್ಟಿಮಾಡಿತ್ತು. ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ್ದ ‘ಕಿರಿಕ್ ಪಾರ್ಟಿ’ ತೆರೆಕಂಡು ಬರೋಬ್ಬರಿ ಏಳು ವರ್ಷಗಳಾಗಿವೆ. ಅದರ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದು ಗೊತ್ತೇ ಇದೆ. ಇದೀಗ ಅವರೆಲ್ಲರೂ ಮತ್ತಷ್ಟು ಖ್ಯಾತರಾಗಿದ್ದಾರೆ. ಉನ್ನತ ಮಟ್ಟದಲ್ಲಿದ್ದಾರೆ. ಆದರೆ, ಆ ರೀತಿಯ ಯೂತ್ ಕಾಮಿಡಿ ಸ್ಟೋರಿ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗನ್ನು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ ‘ಬ್ಯಾಚುಲರ್ ಪಾರ್ಟಿ’ ಕೊಡಲು ಸಜ್ಜಾಗಿದ್ದಾರೆ ಎಂಬುದು ವಿಶೇಷ.

‘ಕಿರಿಕ್ ಪಾರ್ಟಿ’ಯ ಬರಹಗಾರ ಅಭಿಜಿತ್ ಮಹೇಶ್, ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ‘ಬ್ಯಾಚುಲರ್ ಪಾರ್ಟಿ’ಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಚಗುಳಿಯಿಡುವ ಸಂಭಾಷಣೆಗೆ ಖ್ಯಾತರಾಗಿರುವ ಅಭಿ, ತಮ್ಮ ಮೊದಲ ಸಿನಿಮಾದಲ್ಲಿ ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದಕ್ಕೆ ಸಿನಿಮಾ ಬಿಡುಗಡೆಯವರೆಗೂ ಕಾಯಬೇಕು. ಅದಕ್ಕೂ ಮುನ್ನ ‘ಬ್ಯಾಚುಲರ್ ಪಾರ್ಟಿ’ಯ ಮೊದಲ ಝಲಕ್ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಬರೀ ಪೋಸ್ಟರ್ ಹರಿಬಿಡದೇ ಅದಕ್ಕೊಂದು ಸಣ್ಣ ವೀಡಿಯೋವೊಂದನ್ನು ರಿಲೀಸ್ ಮಾಡಿದೆ. ಅದರಲ್ಲೂ ಕೆಲವು ಅಂಶಗಳು ಗಮನ ಸೆಳೆಯುವಂತಿದ್ದು, ಹಿನ್ನೆಲೆ ಸಂಗೀತವೂ ಅಡಕವಾಗಿದೆ. ಇವೆಲ್ಲವೂ ರೀಲ್ಸ್‌ನಲ್ಲಿ ರಿಲೀಸ್ ಮಾಡಿರುವುದು ಮತ್ತೊಂದು ವಿಶೇಷ. ಕಣ್ಮನ ಸೆಳೆಯುವ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಥಿಯೇಟರ್‌ನಲ್ಲಿ ಇದರ ಅನುಭವ ಪಡೆಯಬೇಕು ಮತ್ತು ಚಿತ್ರಮಂದಿರಗಳಲ್ಲಿ ಕುಳಿತು ನಗೆಗಡಲಲ್ಲಿ ತೇಲುವ ಸಿನಿಮಾ ಇದಾಗಿದೆ ಎಂಬುದು ಚಿತ್ರತಂಡದ ಅನಿಸಿಕೆ.

 

ಫ್ರೆಶ್ ನ್ಯೂಸ್

Latest Posts

Featured Videos