51 ಮಹಿಳೆಯರಿಂದ ಅಯ್ಯಪ್ಪ ದರ್ಶನ: ಸುಪ್ರೀಂಗೆ ಮಾಹಿತಿ ಸಲ್ಲಿಸಿದ ಕೇರಳ ಸರ್ಕಾರ

51 ಮಹಿಳೆಯರಿಂದ ಅಯ್ಯಪ್ಪ ದರ್ಶನ: ಸುಪ್ರೀಂಗೆ ಮಾಹಿತಿ ಸಲ್ಲಿಸಿದ ಕೇರಳ ಸರ್ಕಾರ

ಕೇರಳ: ಶಬರಿಮಲೆ 2018ರ ಮಂಡಲದಿಂದ 2019ರ ಮಕರವಿಳಕ್ಕುವರೆಗಿನ ಅವಧಿಯಲ್ಲಿ 10ರಿಂದ 50 ವರ್ಷದೊಳಗಿನ ಒಟ್ಟು 51 ಮಹಿಳೆಯರು ಭೇಟಿ ನೀಡಿ ಅಯ್ಯಪ್ಪ ದರ್ಶನ ಪಡೆದಿದ್ದಾರೆ ಎಂದು ಕೇರಳ ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್‌ ತಿಳಿಸಿದ್ದಾರೆ. ಈ ಮಾಹಿತಿಯನ್ನು ಸುಪ್ರೀಂಕೋರ್ಟ್‌ಗೂ ಸಲ್ಲಿಸಲಾಗಿದೆ.

ತಿರುವನಂತಪುರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಸುರೇಂದ್ರನ್‌, ಶಬರಿಮಲೆ ಪ್ರವೇಶಿಸಿದ್ದ ಕನಕದುರ್ಗಾ ಮತ್ತು ಬಿಂದು ಅವರಿಗೆ 24 ಗಂಟೆ ಪೊಲೀಸ್‌ ಭದ್ರತೆ ಒದಗಿಸಲಾಗುವುದು. ಶಬರಿಮಲೆ ಪ್ರವೇಶಿಸಿದ ಎಲ್ಲಾ ಮಹಿಳೆಯರ ಬಗ್ಗೆ ವಿವರವಾದ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದೇವೆ. ನಾವು ಲೆಕ್ಕ ಹಾಕಿರುವ ಮಹಿಳೆಯರಲ್ಲದೆ ಇನ್ನೂ ಹೆಚ್ಚಿನ ಮಹಿಳೆಯರು ಶಬರಿಮಲೆಯಲ್ಲಿ ದರ್ಶನ ಪಡೆದಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಎಲ್ಲಾ ವಯೋಮಾನದ ಮಹಿಳೆಯರಿಗೆ ಶಬರಿಮಲೆ ಪ್ರವೇಶಕ್ಕೆ ಅವಕಾಶ ಕೊಡಬೇಕೆಂದು ಸುಪ್ರೀಂಕೋರ್ಟ್‌ 2018ರ ಸೆಪ್ಟೆಂಬರ್‌ 28ರಂದು ತೀರ್ಪು ನೀಡಿತ್ತು. ಈ ತೀರ್ಪು ಹೊರ ಬಂದ ಬಳಿಕ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ತಡೆಯೊಡ್ಡಿದ್ದ ಭಕ್ತರು ದೊಡ್ಡ ಗಲಭೆ ಸೃಷ್ಟಿಸಿದ್ದರು.

ತೀರ್ಪಿನ ಬಳಿಕ 7,564 ಮಹಿಳೆಯರು ಆನ್‌ಲೈನ್‌ ಮೂಲಕ ದರ್ಶನಕ್ಕೆ ಮನವಿ ಸಲ್ಲಿದ್ದು, ಈ ಪೈಕಿ 51 ಮಹಿಳೆಯರು ಬಿಗಿ ಪೊಲೀಸ್‌ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದಾರೆ ಎಂದು ಸುರೇಂದ್ರನ್‌ ಹೇಳಿದ್ದಾರೆ.

ಶಬರಿಮಲೆ ಪ್ರವೇಶಿಸುವುದಾಗಿ ಮಾಧ್ಯಮಗಳಲ್ಲಿ ಪ್ರಚಾರ ಮಾಡಿದ ಮಹಿಳೆಯರನ್ನು ತಡೆಯಲು ಪ್ರತಿಭಟನೆಗಳು ನಡೆದವು. ಈ ರೀತಿಯ ಪ್ರಚಾರ ಇಲ್ಲದೆ ಶಬರಿಮಲೆ ಪ್ರವೇಶಿಸಿದ ಎಲ್ಲಾ ಮಹಿಳೆಯರಿಗೂ ಪ್ರತಿಭಟನೆಗಳ ಬಿಸಿ ತಟ್ಟಿಲ್ಲ. ಇವರಿಗೆಲ್ಲಾ ಪೊಲೀಸರ ಭದ್ರತೆಯಲ್ಲಿ ದರ್ಶನದ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಪುದುಚೇರಿಯಿಂದ ಬಂದಿದ್ದ ಹಲವು ಮಹಿಳೆಯರು ಪೊಲೀಸರ ಭದ್ರತೆಯಲ್ಲಿ ಅಯ್ಯಪ್ಪ ದರ್ಶನ ಪಡೆದಿದ್ದಾರೆ. ದರ್ಶನ ಪಡೆದಿರುವ ಎಲ್ಲಾ ಮಹಿಳೆಯರ ಆಧಾರ್‌ ನಂಬರ್‌ ಅಥವಾ ವಯಸ್ಸಿನ ದೃಢೀಕರಣ ದಾಖಲೆ, ಮೊಬೈಲ್‌ ನಂಬರ್ ಸಹಿತ ವಿವರವಾದ ಪಟ್ಟಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದೆ
ಎಂದು ಹೇಳಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos