ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ

ಬೆಂಗಳೂರು : ರಾಜಧಾನಿಯ ಪಾತಕ ಲೋಕವನ್ನು ಮುನ್ನಡೆಸುವ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿ ಕೈದಿಗಳಿಗೆ ಶಾಕ್ ನೀಡಿದ್ದಾರೆ.

ದಾಳಿ ವೇಳೆ ಸಿಕ್ಕಿದ ವಸ್ತುಗಳನ್ನು ನೋಡಿ ಸಿಸಿಬಿ ಪೊಲೀಸರೂ ಗಾಬರಿಯಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳು ರಾಜಾ ರೋಷವಾಗಿ ಗಾಂಜಾ ಹೊಡಯುತ್ತಿರುವ ಸಂಗತಿ ಹೊರ ಬಿದ್ದಿದೆ. ಮಾತ್ರವಲ್ಲ, ಕೈದಿಗಳ ಬಳಿ ನೂರಾರು ಚಾಕು ಹಾಗೂ ಮೊಬೈಲ್ , ಸಿಮ್ ಕಾರ್ಡ್ ಪತ್ತೆಯಾಗಿವೆ.

ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಸಿಸಿಬಿಯ ಹತ್ತಕ್ಕೂ ಹೆಚ್ಚು ತಂಡ ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳ ಬಂಧೀಖಾನೆಗಳ ಮೇಲೆ ಬೆಳಗಿನ ಜಾವ ಐದು ಗಂಟೆಗೆ ದಾಳಿ ನಡೆಸಿದ್ದಾರೆ. ಶ್ವಾನದಳದೊಂದಿಗೆ ಸಿಸಿಬಿ ಪೊಲೀಸರು ಎಂಟ್ರಿ ಕೊಡುತ್ತಿದ್ದಂತೆ ನಿದ್ದೆಯಲ್ಲಿದ್ದ ಕೈದಿಗಳು ಶಾಕ್ ಆಗಿದ್ದಾರೆ.

ಕೆಲವು ಕೊಠಡಿಗಳಲ್ಲಿ ಖೈದಿಗಳು ಹೊಂದಿದ್ದ ನೂರಾರು ಚಾಕು, ಕತ್ತರಿ ಮತ್ತಿತರ ವಸ್ತುಗಳು ಪತ್ತೆಯಾಗಿದ್ದು ಅವನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಕೆಲವರ ಕೋಣೆಗಳಲ್ಲಿ ಗಾಂಜಾ ಹಾಗೂ ಗಾಂಜಾ ಸೇವನೆ ಮಾಡುವ ಉಪಕರಣಗಳು ಪತ್ತೆಯಾಗಿವೆ. ಮೊಬೈಲ್ , ಸಿಮ್ ಕಾರ್ಡ್ ಜತೆಗೆ ಪೆನ್ ಡ್ರೈವ್ ಹಾಗೂ ಮೆಮೋರಿ ಕಾರ್ಡ್ಗಳು ಪತ್ತೆಯಾಗಿವೆ.

ಬೆಂಗಳೂರಿನ ಭೂಗತ ಲೋಕದಲ್ಲಿ ನಡೆಯುವ ಕೊಲೆಗಳಿಗೆ ಸಂಚು ರೂಪಗೊಳ್ಳುವುದೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ. ಇತ್ತೀಚೆಗೆ ಬೆಂಗಳೂರಿನಲ್ಲಿ ರೌಡಿಗಳ ಕಾಳಗ, ಹತ್ಯೆಗಳ ಹಿನ್ನೆಲೆಯಲ್ಲಿ ಅಪರಾಧ ಚಟುವಟಿಕೆ ಮೇಲೆ ನಿಗಾ ವಹಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರು ಆದೇಶಿಸಿದ್ದರು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಎಲ್ಲಾ ವಿಭಾಗದ ಪೊಲೀಸರು ಏಕ ಕಾಲಕ್ಕೆ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದರು. ರೌಡಿ ಮನೆಗಳ ಮೇಲೆ ದಾಳಿ ಮಾಡುವ ಮೊದಲೇ ಸಿಸಿಬಿ ಪೊಲೀಸರು ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ಮಾಡಿ ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ವಶಕ್ಕೆ ಪಡೆದ ವಿಚಾರಣೆ ನಡೆಸುತ್ತಿದ್ದಾರೆ.

ಪರಪ್ಪನ ಅಗ್ರಹಾರ ಕಾರಾಗೃಹಲ್ಲಿ ಕೈದಿಗಳಿಗೆ ಸಿಮ್ ಹಾಗೂ ಮೊಬೈಲ್ ಪೂರೈಕೆಯಲ್ಲಿ ಜೈಲು ಸಿಬ್ಬಂದಿ ಕೂಡ ಶಾಮೀಲಾಗಿರುವ ಅನುಮಾನ ವ್ಯಕ್ತವಾಗಿದೆ. ಜೈಲಿನಲ್ಲಿರುವ ಖೈದಿಗಳಿಗೆ ಗಾಂಜಾ ಹಾಗೂ ಮಾರಕಾಸ್ತ್ರಗಳು ಯಾವ ರೀತಿ ಪೂರೈಕೆ ಆದವು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಖೈದಿಗಳು ಇಂಟರ್ ನೆಟ್ ಹಾಗೂ ಸ್ಮಾರ್ಟ್ ಪೋನ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸಿಕ್ಕಿರುವ ಸಿಮ್ ಕಾರ್ಡ್ ಗಳಿಂದ ಕರೆ ಮಾಡಿರುವ, ಅವರ ಜತೆ ಸಂಪರ್ಕಿಸಿರುವ ವ್ಯಕ್ತಿಗಳ ವಿವರಗಳನ್ನು ಪರಿಶೀಲಿಸಿ ತನಿಖೆ ನಡೆಸಲಾಗುವುದು ಎಂದು ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos