ಲೊಟಗೇರಿ ಅಂಗನವಾಡಿ ಅವ್ಯವಸ್ಥೆ

ಲೊಟಗೇರಿ ಅಂಗನವಾಡಿ ಅವ್ಯವಸ್ಥೆ

ಕೊಳೆತ ಆಹಾರ ಧಾನ್ಯ ಸುಡಲು ಮುಂದಾದ ಕಾರ್ಯಕರ್ತೆ, ಮೇಲ್ವಿಚಾರಕರು
ಮುದ್ದೇಬಿಹಾಳ:ಎರಡು ವರ್ಷಗಳಿಂದ ಸರಕಾರದಿಂದ ಪೂರೈಕೆಯಾಗಿದ್ದ ಆಹಾರ ಧಾನ್ಯವನ್ನು ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ವಿತರಿಸಬೇಕಿದ್ದ ಆಹಾರ ಧಾನ್ಯ ವಿತರಿಸದೇ ಕೊಳೆಯುವಂತೆ ಮಾಡಿದ್ದ ಕಾರ್ಯಕರ್ತೆಯ ರಕ್ಷಣೆಗೆ ಅಧಿಕಾರಿಗಳೇ ಮುಂದಾದರೇ ಎಂಬ ಪ್ರಶ್ನೆ ಉದ್ಭವವಾಗಿದೆ.

ತಾಲೂಕಿನ ಲೊಟಗೇರಿ ಅಂಗನವಾಡಿ ಕಾರ್ಯಕರ್ತೆ ಕಳೆದ ಮೂರು ದಿನಗಳ ಹಿಂದೆ ಮಕ್ಕಳಿಗೆ ಕೊಡುವ ಹಾಲಿನ ಪೌಡರ್ ಪ್ಯಾಕೇಟ್ ಕದ್ದೊಯ್ಯುವ ವೇಳೆ ಗ್ರಾಮಸ್ಥರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕು ಬಿದ್ದಿದ್ದರು. ಬಳಿಕ ಮೇಲಾಧಿಕಾರಿಗಳು ವಿಚಾರಣೆ ನಡೆಸಲು ಹೋದರೂ ಸಹಕಾರ ನೀಡದೇ ದಾಖಲೆಗಳನ್ನು ತೆಗೆದುಕೊಂಡು ಮನೆಗೆ ಹೋಗಿರುವ ಆರೋಪ ಎದುರಿಸಿದ್ದರು. ಸ್ವತಃ ಸಿಡಿಪಿಓ ಸಾವಿತ್ರಿ ಗುಗ್ಗರಿ ಅವರ ಎದುರಿಗೆ ಗ್ರಾಮಸ್ಥರು ಕಾರ್ಯಕರ್ತೆಯ ವಿರುದ್ಧ ಆರೋಪಗಳ ಸುರಿಮಳೆಯನ್ನೇಗೈಯ್ದಿದ್ದರು. ಬಳಿಕ ಸ್ಥಳದಲ್ಲಿಯೇ ಕಾರಣ ಕೇಳುವ ನೋಟಿಸ್ ನೀಡಿ ಬಂದಿದ್ದರು.

ಆಹಾರ ಧಾನ್ಯ ಸುಟ್ಟ ಕಾರ್ಯಕರ್ತೆ, ಮೇಲ್ವಿಚಾರಕಿಯರು

ಸದ್ಯಕ್ಕೆ ಅಂಗನವಾಡಿಗಳು ಬಂದ್ ಇವೆ.ನಿನ್ನೆಯಷ್ಟೇ ಅಂಗನವಾಡಿಗೆ ಭೇಟಿ ನೀಡಿ ಹೋಗಿದ್ದ ಸಿಡಿಪಿಓ ಸಾವಿತ್ರಿ ಗುಗ್ಗರಿ ಮೇಲ್ವಿಚಾರಕರನ್ನು ಕಳಿಸಿ ಕೊಳೆತು ಹೋಗಿದ್ದ ದಾಸ್ತಾನಿನ ಲೆಕ್ಕಮಾಡಿಕೊಂಡು ಬರಲು ತಿಳಿಸಿದ್ದರು. ಅದರಂತೆ ಮೇಲ್ವಿಚಾರಕಿಯೊಬ್ಬರು ಅಂಗನವಾಡಿಗೆ ಬಂದು ಕೊಳೆತು ಹೋಗಿದ್ದ ಆಹಾರ ಧಾನ್ಯಗಳೆಷ್ಟು ಎಂಬುದನ್ನು ಪಟ್ಟಿ ಮಾಡಿಕೊಂಡಿದ್ದಾರೆ. ಅಲ್ಲದೇ ಕೊಳೆತಿದ್ದ ಆಹಾರ ಧಾನ್ಯವನ್ನು ಚೀಲಗಳ ಸಮೇತ ಅಂಗನವಾಡಿ ಕಟ್ಟಡದ ಅನತಿ ದೂರದಲ್ಲಿಯೇ ಸುಟ್ಟು ಹಾಕಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಗ್ರಾಮಸ್ಥರು ಮತ್ತೆ ಅಂಗನವಾಡಿಯತ್ತ ಧಾವಿಸಿ ಬಂದು ಆಹಾರ ಧಾನ್ಯ ಸುಡುತ್ತಿರುವ ಕಾರಣ ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವಲ್ಪ ಆಹಾರ ಧಾನ್ಯ ಸುಟ್ಟು ಹಾಕಿದ್ದ ಮೇಲ್ವಿಚಾರಕರು, ಕಾರ್ಯಕರ್ತೆ ಗ್ರಾಮಸ್ಥರ ಆಕ್ರೋಶದ ಹಿನ್ನೆಲೆಯಲ್ಲಿ ಕೊಳೆತಿದ್ದ ಆಹಾರ ಧಾನ್ಯ ಸುಡುವ ಕಾರ್ಯದಿಂದ ಹಿಂದೆ ಸರಿದಿದ್ದಾರೆ.

ಅಂಗನವಾಡಿ ಕಾರ್ಯಕರ್ತೆ ರಕ್ಷಣೆಗೆ ಹುನ್ನಾರ

ಸುದ್ದಿಗಾರರೊಂದಿಗೆ ಮಾತನಾಡಿದ ಜಯ ಕರ್ನಾಟಕ ಸಂಘಟನೆಯ ತಾಲೂಕಾಧ್ಯಕ್ಷ ಬಾಪುಗೌಡ ಪಾಟೀಲ, ಡಿಎಸ್‌ಎಸ್ ಮುಖಂಡ ಮಲ್ಲು ತಳವಾರ(ಬಿಜ್ಜೂರ), ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಕೇಳಿದರೆ ತಾವು ಆಹಾರ ದಾಸ್ತಾನು ಸುಡಲು ಹೇಳಿಲ್ಲ ಎನ್ನುತ್ತಿದ್ದಾರೆ. ಮೇಲ್ವಿಚಾರಕರನ್ನು ಕೇಳಿದರೆ ಸಿಡಿಪಿಓ ಅವರೇ ಸುಡುವಂತೆ ಹೇಳಿದ್ದಾರೆ ಎಂದು ತಿಳಿಸುತ್ತಿದ್ದಾರೆ. ಒಟ್ಟಾರೆ ಕಾರ್ಯಕರ್ತೆಯನ್ನು ರಕ್ಷಿಸುವ ಹುನ್ನಾರ ಅಧಿಕಾರಿಗಳಿಂದ ನಡೆದಿದೆ ಎಂದು ಆರೋಪಿಸಿದರು. ಸಿಡಿಪಿಓ ಕಾರ್ಯಕರ್ತೆಯ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ನಮಗಿಲ್ಲ. ಮೇಲಾಧಿಕಾರಿಗಳು ಬರುವವರೆಗೂ ಈ ಕೊಳೆತ ಆಹಾರ ಧಾನ್ಯ ಹಾಗೆ ಇರಲಿ. ಕೂಡಲೇ ಮೇಲಾಧಿಕಾರಿಗಳು ಭೇಟಿ ನೀಡಿ ಸಂಬಂಧಿಸಿದ ಕಾರ್ಯಕರ್ತೆ, ಮೇಲ್ವಿಚಾರಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಧಿಕಾರಿಗಳು ತಮ್ಮ ಕೆಲಸ ಮಾಡಲಿ
ಲೊಟಗೇರಿ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಂಗನವಾಡಿ ಮಹಾಮಂಡಳದ ರಾಜ್ಯಾಧ್ಯಕ್ಷೆ ನೀಲಮ್ಮ ಪಾಟೀಲ(ಬೋರಾವತ್) ಅಂಗನವಾಡಿಗೆ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಅವ್ಯವಸ್ಥೆ ಕಂಡು ಏನೊಂದು ಮಾತನಾಡದೇ ಅಧಿಕಾರಿಗಳು ತಮ್ಮ ಕೆಲಸ ತಾವು ಮಾಡುತ್ತಾರೆ. ಯಾರು ತಪ್ಪು ಮಾಡಿದ್ದಾರೆ ಅವರು ಶಿಕ್ಷೆ ಅನುಭವಿಸುತ್ತಾರೆ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos