ಪ್ರಾಣ ಬಲಿಗಾಗಿ ಕಾದು ನಿಂತಿದೆ ವಿದ್ಯುತ್ ತಂತಿ

ಪ್ರಾಣ ಬಲಿಗಾಗಿ ಕಾದು ನಿಂತಿದೆ ವಿದ್ಯುತ್ ತಂತಿ

ರಾಮನಗರ, ನ. 04: ತಾಲೂಕಿನ ಕೆಂಪೇಗೌಡನದೊಡ್ಡಿ ಗ್ರಾಮದಲ್ಲಿ ವಿದ್ಯುತ್ ತಂತಿಯನ್ನು ಆಶ್ರಯಿಸಿ ಬಳ್ಳಿ, ಮರಗಳು ಬೆಳೆದಿದ್ದರೂ ಅದರತ್ತ ಗಮನಹರಿಸದಿರುವುದು ಅಚ್ಚರಿಗೆ ಕಾರಣವಾಗಿದೆ.

ಹೌದು, ರಾಮನಗರ-ಮಾಗಡಿ ಮುಖ್ಯರಸ್ತೆಯಲ್ಲಿರುವ ಕೆಂಪೇಗೌಡನದೊಡ್ಡಿ ಗ್ರಾಮದ ರಸ್ತೆ ಪಕ್ಕದಲ್ಲಿ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿ ಹಾದು ಹೋಗಿದೆ. ಆದರೆ ಹಸಿರು ಮರ ಮತ್ತು ಬಳ್ಳಿಗಳನ್ನು ಇದನ್ನು ಆಶ್ರಯಿಸಿ ಬೆಳೆದಿವೆ. ಆದರೆ ಅದ್ಯಾಕೋ ಗೊತ್ತಿಲ್ಲ. ವಿದ್ಯುತ್ ಇಲಾಖೆಯ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲೀ ಇದರತ್ತ ತಿರುಗಿಯೂ ನೋಡದೆ ಮೌನಕ್ಕೆ ಶರಣಾಗಿದ್ದಾರೆ. ಪರಿಣಾಮ ಗಿಡಬಳ್ಳಿಗಳು ಹುಲುಸಾಗಿ ಬೆಳೆಯುತ್ತಿದ್ದು, ಅರಣ್ಯವಾಗಿ ಮಾರ್ಪಟ್ಟಿವೆ.

ಸದಾ ವಿದ್ಯುತ್ ಹರಿಯುವ ಈ ತಂತಿಗೆ ಎಲೆಗಳಿರುವ ಮರದ ಕೊಂಬೆಗಳು ತಾಗಿಕೊಂಡಿದ್ದರೆ ಅದನ್ನು ಆಶ್ರಯಿಸಿ ವಿದ್ಯುತ್ ತಂತಿಯನ್ನೇರಿ ಹಸಿರು ಬಳ್ಳಿಗಳು ಸುತ್ತಿಕೊಂಡು ಬೆಳೆದು ನಿಂತಿವೆ. ಒಂದು ವೇಳೆ ಇದನ್ನು ಅರಿಯದೆ ಈ ಮರವನ್ನು ಅಮಾಯಕರು ಯಾರಾದರೂ ಮುಟ್ಟಿದರೆ ಪ್ರಾಣ ಕಳೆದುಕೊಳ್ಳುವುದು ಗ್ಯಾರಂಟಿ. ರಸ್ತೆ ಮಗ್ಗುಲಲ್ಲಿ ಪ್ರಾಣ ಬಲಿಗಾಗಿ ಕಾದಿರುವ ಈ ಅವ್ಯವಸ್ಥೆಯನ್ನು ಸರಿಪಡಿಸಲು ಬೆಸ್ಕಾಂ ಅಧಿಕಾರಿಗಳು ಗಮನಹರಿಸಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.

ರಾಮನಗರದ ರಾಯರದೊಡ್ಡಿಯಿಂದ ಮಾಗಡಿ ಕಡೆಗೆ ಹೋಗುವ ರಸ್ತೆ ಮಾರ್ಗದ ಉದ್ದಕ್ಕೂ ರಸ್ತೆಬದಿಯಲ್ಲಿರುವ ಮರಗಳ ನಡುವೆ ಹೆವಿ ವೊಲ್ಟೇಟ್ ಲೈನ್ ಸಾಗಿದ್ದು, ಅಲ್ಲಲ್ಲಿ ಮರಗಳಲ್ಲಿನ ಹಸಿರೆಲೆಗಳು ವಿದ್ಯುತ್ ತಂತಿಗೆ ತಾಕುತ್ತಿವೆ. ಕೆಲವು ಕಡೆ ಹಸಿರು ಬಳ್ಳಿಗಳು ಸುರಳಿಯಂತೆ ಸುತ್ತಿಕೊಂಡಿವೆ. ಇವುಗಳನ್ನು ತೆರವು ಮಾಡುವ ಉಸಾಬರಿಗೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos