ಅಮಿತ್ ಶಾ ಹಿಂದೂವಲ್ಲ, ಜೈನ: ಪ್ರೊ.ಕಾಂಚ ಐಲಯ್ಯ

ಅಮಿತ್ ಶಾ ಹಿಂದೂವಲ್ಲ, ಜೈನ: ಪ್ರೊ.ಕಾಂಚ ಐಲಯ್ಯ

ಬೆಂಗಳೂರು, ಮಾ.4, ನ್ಯೂಸ್ಎಕ್ಸ್ ಪ್ರೆಸ್‍:  ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಿಂದೂ ಧರ್ಮಕ್ಕೆ ಸೇರಿಲ್ಲ. ಆತ, ಜೈನ ಧರ್ಮದ ಬನಿಯಾ ಸಮುದಾಯದವರು ಎಂದು ಚಿಂತಕ, ಹಿರಿಯ ಲೇಖಕ ಪ್ರೊ.ಕಾಂಚ ಐಲಯ್ಯ ಹೇಳಿದ್ದಾರೆ.

ರವಿವಾರ ನಗರದ ಬೆನ್ಸನ್ ಟೌನ್ ಬಳಿಯ ಪಾಲಾನ ಭವನದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ ಒಕ್ಕೂಟದಿಂದ (ಎನ್‌ಸಿಎಚ್‌ಆರ್‌ಒ) ಆಯೋಜಿಸಿದ್ದ, ದಲಿತ ಮತ್ತು ಬಹುಜನರ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ದೇಶವನ್ನು ಪ್ರಬಲ ಜಾತಿಗಳ ನಾಯಕರು ಮಾತ್ರ ಆಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ‘ಹಿಂದೂ’ ಧರ್ಮಕ್ಕೆ ಸೇರಿಲ್ಲ. ಆದರೂ, ತಾನು ಹಿಂದೂ ಎಂದು ದಿಕ್ಕು ತಪ್ಪಿಸಿ ಆಡಳಿತ ನಡೆಸುತ್ತಿರುವುದು ನಾಚಿಕೆಗೇಡು ಎಂದು ಶಾ ರನ್ನು ಟೀಕಿಸಿದ್ದಾರೆ.

ದೇಶದಲ್ಲಿ ಬ್ರಾಹ್ಮಣ, ಬನಿಯಾ ಹಾಗೂ ಕಯಾಸ್ತಾ ಜನಾಂಗಗಳು ಮಾತ್ರ ರಾಜಕೀಯದ ಲಾಭ ಪಡೆಯುತ್ತಿದೆ. ಆದರೆ, ಶೂದ್ರ ಜನಾಂಗದ ಲಿಂಗಾಯತ, ನಾಯರ್, ಒಕ್ಕಲಿಗ ಸೇರಿದಂತೆ ಇನ್ನಿತರೆ ಸಮುದಾಯಗಳು ಸ್ಥಳೀಯ ರಾಜಕೀಯಕ್ಕೆ ಮಾತ್ರ ಸೀಮಿತವಾಗಿವೆ ಎಂದು ಬೇಸರ ವ್ಯಕ್ತಪೆಡಿಸಿದರು.

ಬಹುಜನರ ಮಕ್ಕಳಿಗೆ ಗುಣಮಟ್ಟ ಹಾಗೂ ಆಂಗ್ಲ ಮಾಧ್ಯಮದ ಶಿಕ್ಷಣ ತುರ್ತು ಅಗತ್ಯತೆ ಇದೆ ಎಂದ ಅವರು, ಮಾಧ್ಯಮ ಎನ್ನುವುದು ಸಹ ಪ್ರಬಲ ಜಾತಿಗಳ ಕೈ ಸೇರಿದೆ. ಆದರೆ, ಶೋಷಿತ ಸಮುದಾಯದ ಬರವಣಿಗೆ ಅನ್ನು ಅಸ್ತ್ರವಾಗಿಟ್ಟುಕೊಂಡು ಬದಲಾವಣೆಗೆ ಮುಂದಾಗಬೇಕು. ಇದನ್ನು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಸಹ ಪ್ರತಿಪಾದಿಸಿದ್ದಾರೆ ಎಂದು ತಿಳಸಿದರು.

ಎನ್‌ಸಿಎಚ್‌ಆರ್‌ಒ ರಾಷ್ಟ್ರೀಯ ಅಧ್ಯಕ್ಷ ಪ್ರೊ.ಎ.ಮಾರ್ಕ್ಸ್ ಮಾತನಾಡಿ, ಸಂವಿಧಾನ ಉಳಿಸುವುದಕ್ಕಾಗಿ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ದುರಂತ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸದ ಮನುವಾದಿಗಳು ಈಗ ದೇಶಪ್ರೇಮದ ಪಾಠ ಮಾಡುತ್ತಿದ್ದಾರೆ. ಅಂಬೇಡ್ಕರರ ಸಂವಿಧಾನ ಉಳಿದರಷ್ಟೇ ನಾವು ಉಳಿಯುತ್ತೇವೆ ಎಂದರು.

ವಿಚಾರ ಸಂಕಿರಣದಲ್ಲಿ ಎನ್‌ಸಿಎಚ್‌ಆರ್‌ಒ ಪ್ರಧಾನ ಕಾರ್ಯದರ್ಶಿ ಪ್ರೊ.ಪಿ.ಕೋಯಾ, ಉಪಾಧ್ಯಕ್ಷ ಕೆ.ಪಿ.ಮುಹಮ್ಮದ್ ಶರೀಫ್, ರಾಜ್ಯಾಧ್ಯಕ್ಷ ವಕೀಲ ಪಿ.ಬಾಲನ್, ಕಾರ್ಯದರ್ಶಿ ಎಚ್.ಎಸ್.ಮಲ್ಲೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos