ವಿದ್ಯಾರ್ಥಿಗಳಂದ್ರೆ ನಿರ್ವಾಹಕರಿಗೆ ಅಲರ್ಜಿ

ವಿದ್ಯಾರ್ಥಿಗಳಂದ್ರೆ ನಿರ್ವಾಹಕರಿಗೆ ಅಲರ್ಜಿ

ಬೆಂಗಳೂರು, ಸೆ. 19: ಶಾಲಾ ಕಾಲೇಜುಗಳ ಬಳಿಯಿರುವ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳು ಬಸ್ ಹತ್ತಲು ಕಾಯುತ್ತಿರುವುದನ್ನು  ಕಂಡರೆ ಸಾಕು ಉರಿದು ಬೀಳುತ್ತಾರೆ ಚಾಲಕರು ಮತ್ತು ನಿರ್ವಾಹಕರು. ಬಸ್ ನಿಲ್ದಾಣದಿಂದ ಮಾರು ದೂರ ಬಸ್ ನಿಲ್ಲಿಸುವ ಪರಿಪಾಠ ಬೆಳಸಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಓಡಿ ಹೋಗಿ ಬಸ್ ಹತ್ತಬೆಕೆನ್ನುವಷ್ಟರಲ್ಲಿ ಮುಂದೆ ಹೋಗುವ ಬಸ್ಸುಗಳು. ಕೆಲವೊಮ್ಮೆ ಚಾಲನೆಯಲ್ಲಿರುವ ಬಸ್ಸುಗಳನ್ನು ಹತ್ತು ಪರಿಸ್ಥಿತಿ ವಿದ್ಯಾರ್ಥಿಗಳದ್ದಾಗಿದೆ.

ಇದು ಬಿಎಂಟಿಸಿ ಚಾಲಕರ ನಿರ್ಲಕ್ಷ್ಯದ ವಿರುದ್ದ ಮಹಾರಾಣಿ ಕಾಲೇಜು  ಸೇರಿದಂತೆ ಬಹುತೇಕ ಶಾಲಾ ಕಾಲೇಜು ವಿದ್ಯಾರ್ಥಿಗಳ ದೂರು. ಎಸ್‌ ಜೆಪಿ ಕಾಲೇಜು, ಬೆಂಗಳೂರು ವಿವಿ, ಶೇಷಾದ್ರಿಪುರಂ ಕಾನೂನು ಕಾಲೇಜು, ಜಯನಗರದ ವಿಜಯ ಕಾಲೇಜು, ಮಹಿಳಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನಗರದ ಅನೇಕ ಶಾಲಾ ಕಾಲೇಜುಗಳ ವಿದ್ಯಾರ್ಥಿಳ ಪಾಡಂತೂ ತೀರಾ ಅಸಹನೀಯವಾಗುತ್ತಿದೆ.

ಸರ್ಕಾರ ನಿಗದಿಪಡಿಸಿರುವ ಹಣ ಪಾವತಿ ಮಾಡಿ ಪಾಸ್ ಪಡೆದುಕೊಂಡಿದ್ದೇವೆ. ಬಸ್ ಹತ್ತುವಾಗ, ಇಳಿಯುವಾಗ, ಮತ್ತು ಬಸ್ ಒಳಗಡೆ ಪ್ರಯಾಣಿಕರೊಂದಿಗೆ ವಿದ್ಯಾರ್ಥಿಗಳನ್ನು ಒಂದು ರೀತಿಯಲ್ಲಿ ತಾತ್ಸಾರ ಮನೋಭಾವದಲ್ಲಿ ನೋಡಲಾಗುತ್ತಿದೆ. ವಿದ್ಯಾರ್ಥಿಗಳು ನಿಂತಿರುವ ತಂಗುದಾಣಗಳಲ್ಲಿ  ಬಸ್ ನಿಲ್ಲಿಸಲು ನಿರ್ಲಕ್ಷ್ಯ ತೋರುವ ಚಾಲಕ ಮತ್ತು ನಿರ್ವಾಹಕರನ್ನು ಪ್ರಶ್ನಿಸಿದರೆ, ಅವರು ಹಾರಿಕೆ ಉತ್ತರ ನೀಡುತ್ತಾರೆ.

ಅಲ್ಲದೆ ವಿದ್ಯಾರ್ಥಿಗಳು ಒಳ್ಳೆ ಕುರಿ ಮಂದೆ ಬಂದ ಹಾಗೆ ಬಂದು ಒಂದೆ ಸಮನೆ ನುಗ್ಗುತ್ತಾರೆ. ಬ್ಯಾಗ್ ಗಳನ್ನು ಕೈಯಲ್ಲಿಡಿಯಲ್ಲ ಬೇರೆ ಪ್ರಯಾಣಿಕರಿಗೆ ಕಿರಿ ಕಿರಿ ಮಾಡುತ್ತಾರೆ. ನಾಗರಿಕತೆಯ ಜೊತೆಗೆ ದೊಡ್ಡವರ ಜೊತೆಯಲ್ಲಿ ಸೌಜನ್ಯ ತೋರಿ ಎಂದು ಹಲವು ಬಾರಿ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಮಹಿಳಾ ನಿರ್ವಾಹಕಿ ನೂರುನ್ನಿಸಾ ತಬಸುಮಾ ಹೇಳಿದರು.

ಪ್ರತಿ ತಂಗುದಾಣದಲ್ಲೂ ನಿಲ್ಲಿಸಿ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ಎಂಬ ಭೇದ ಭಾವ ತೋರದೆ ಹತ್ತಿಸಿಕೊಳ್ಳಬೇಕೆಂಬ ನಿಯಮವನ್ನು ಚಾಲಕ ಮತ್ತು ನಿರ್ವಾಹಕರು ಪಾಲನೆ ಮಾಡುವಂತೆ ಸೂಚಿಸಲಾಗಿದೆ. ಆದರೂ ದೂರುಗಳು ಬರುತ್ತಿವೆ. ನಿಲ್ದಾಣಗಳಲ್ಲಿ ನಿಲ್ಲಿಸದ ಹಿಂದೆ ಮುಂದೆ ಹಾಗೂ ದೂರ ಹೋಗಿ ನಿಲ್ಲಿಸುವ ಬಸ್ಸುಗಳ ನಂಬರ್‌ಗಳನ್ನು ಬಿಎಂಟಿಸಿ ಕಚೇರಿಗೆ ನೀಡಿದ ಕೂಡಲೇ ನಿರ್ವಾಹಕ ಮತ್ತು ಚಾಲಕರ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು.

ಕಾಲೇಜುಗಳ ಬಳಿಯಿರುವ ನಿಲ್ದಾಣಗಳಲ್ಲಿ ಬಸ್ಸುಗಳನ್ನು ಸರಿಯಾಗಿ ನಿಲ್ಲಿಸುವುದಿಲ್ಲ. ಮಾರುದ್ದ ಹಿಂದೆ ಅಥವಾ ಮುಂದೆ ಹೋಗಿ ನಿಲ್ಲಿಸುತ್ತಾರೆ. ಬಸ್ಸು ಚಲಿಸುವ ವೇಳೆಯಲ್ಲಿ ನಾವು ಇಳಿಯುವ ಸ್ಥಳ ಬರುತ್ತಿದ್ದಂತೆ ಇಳಿಯಲು ಸೂಚಿಸುತ್ತಾರೆ. ಬಸ್ಸುಗಳು ಚಲಿಸುವ ವೇಳೆ ಓಡಿ ಹೋಗಿ ಹತ್ತಬೇಕಾಗುತ್ತಿದೆ ಎಂದು ಶೇಷಾದ್ರಿಪುರಂ ಕಾನೂನು ವಿದ್ಯಾಲಯದ ಅನೂಪ್ ಎನ್ನುವ ವಿದ್ಯಾರ್ಥಿ ತಿಳಿಸಿದರು.

ಟಾರ್ಗೆಟ್ ಮುಟ್ಟುವುದು ಅನಿವಾರ್ಯ

 ನಮಗೆ ದಿನಕ್ಕೆ ಇಂತಿಷ್ಟು ಅಂತ  ಟಾರ್ಗೆಟ್ ನೀಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡರೆ ಟಾರ್ಗೆಟ್ ತಲುಪಲು ಸಾಧ್ಯವಿಲ್ಲ. ಟಿಕೆಟ್ ಖರೀದಿಸಿ ಪ್ರಯಾಣಿಸುವವರಿದ್ದಲ್ಲಿ ಮಾತ್ರ  ನಾವು ನಮಗೆ ನೀಡಿರುವ ಗುರಿ ಮುಟ್ಟಲು ಸಾಧ್ಯ. ನಮಗೆ ಬಿಎಂಟಿಸಿ ನೀಡಿರುವ ಗುರಿಯನ್ನು ವಾಪಸ್ ಪಡೆದರೆ ನಾವು ಯಾವುದೇ ಪ್ರಯಾಣಿಕರಿರಲಿ ವಿದ್ಯಾರ್ಥಿಗಳಿರಲಿ ಹತ್ತಿಸಿಕೊಂಡು ಬರುತ್ತೇವೆ ಎಂದು ಹೆಸರೇಳಲಿಚ್ಛಿಸದ ನಿರ್ವಾಹಕರೊಬ್ಬರು ಹೇಳಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos