ಮಕ್ಕಳ ಆಟಿಕೆಗಳಿಗೂ ವಯಸ್ಕರ ಕಾಟ

ಮಕ್ಕಳ ಆಟಿಕೆಗಳಿಗೂ ವಯಸ್ಕರ ಕಾಟ

ಚಾಮರಾಜಪೇಟೆ, ನ. 05: ಲಾಲನೆ ಪಾಲನೆಯ ಜೊತೆ ಪ್ರೀತಿ ತೋರುವವರು ಹಾಗೂ ಆಟಿಕೆಗಳೆಂದರೆ ಮಕ್ಕಳಿಗೆ ಪಂಚ ಪ್ರಾಣ. ಆದರೆ ನಗರದ ಕಲ್ಯಾಣಮ್ಮ ಮಕ್ಕಳ ಕೂಟದ ಪಾರ್ಕ್ನಲ್ಲಿನ ಚಿತ್ರಣವೇ ಬೇರೆಯಾಗಿದೆ. ಸ್ವಚ್ಚ ಪರಿಸರದ ನಡುವೆ ಮಕ್ಕಳು ಆಟವಾಡಲೆಂದು ಅಳವಡಿಸಿರುವ ಒಂದಷ್ಟು ಆಟಿಕೆಗಳು ವಯಸ್ಕರ ಆಟದ ವಸ್ತುಗಳಾಗಿವೆ.

ಚಾಮರಾಜಪೇಟೆಯಲ್ಲಿರುವ ಆರ್ ಮೈದಾನದಲ್ಲಿ ಮಕ್ಕಳಿಗಿಂತ ವಯಸ್ಕರ ಕುಚೇಷ್ಟೆಗೇ ಈ ಆಟಿಕೆಗಳು ಬಳಕೆ ಆಗುತ್ತಿವೆ. ಮಕ್ಕಳಿಗಾಗಿಯೇ ವಿಶೇಷವಾಗಿ ಮೀಸಲಾಗಿರುವ ಉಯ್ಯಾಲೆ, ಜಾರುಬಂಡೆ, ಬೈಸಿಕಲ್ ಸೇರಿದಂತೆ ಹಲವು ಆಟದ ಪರಿಕರಗಳಲ್ಲಿ ವಯಸ್ಕರೇ ಆಡುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಮಕ್ಕಳ ಮನೋಲ್ಲಾಸಕ್ಕೆ ಈ ಆಟಿಕೆಗಳನ್ನು ಸಂರಕ್ಷಿಸಬೇಕಾದ ವಯಸ್ಕರೇ ಇದರಲ್ಲಿ ಆಟವಾಡಿದರೆ ಹೇಗೆ?

ಪುಟ್ಟ ಮಕ್ಕಳಿಗೆಂದು ಹಾಕಲಾದ ಈ ಆಟಿಕೆಗಳಲ್ಲಿ ವಯಸ್ಕರು ಆಡಿದರೆ ಅವು ತಡೆಯುತ್ತವೆಯೇ? ವಯಸ್ಕರ ಕುಚೇಷ್ಟೆಯ ಆಟಕ್ಕೆ ಆಟಿಕೆಗಳು ಬಳಸದ ಸ್ಥಿತಿ ತಲುಪಿದ್ದರೂ, ಇವುಗಳ ರಕ್ಷಣಾ ಕಾರ್ಯಕ್ಕೆಂದು ನೇಮಕವಾಗಿರುವ ಸಿಬ್ಬಂದಿ ಮಾತ್ರ ಏನೂ ಗೊತ್ತಿಲ್ಲದಂತೆ ನಿರ್ಲಕ್ಷ್ಯ ತೋರುತ್ತಿದೆ.

ನಿರ್ವಹಣೆಯಲ್ಲಿ ಅಲಸ್ಯ

ಮಕ್ಕಳ ಆರೋಗ್ಯ ಹಾಗೂ ಉತ್ತಮ ಪರಿಸರ ರಕ್ಷಣೆಗಾಗಿ ನಿರ್ಮಿಸಿದ ಪಾರ್ಕ್ ನಿರ್ವಹಣೆಯಲ್ಲಿ ಅಲಕ್ಷ್ಯ ತೋರಲಾಗುತ್ತಿದೆ. ಮಕ್ಕಳ ಆಟಕ್ಕೆ ಬಳಸುವ ಕಬ್ಬಿಣದ ಜಾರು ಬಂಡೆಗಳು ಮುರಿದಿವೆ, ಕೆಲವು ಸವೆದಿದ್ದು, ಅಂಚಿನ ಭಾಗ ಮೊನಚಾಗಿರುವುದರಿಂದ ಮಕ್ಕಳಿಗೆ ತಗುಲಿ ಗಾಯಗೊಳ್ಳುತ್ತಿರುವುದು ದಿನನಿತ್ಯದ ದೃಶ್ಯವಾಗಿವೆ.

ಮಕ್ಕಳ ಆಟಕ್ಕೆ ಬಳಕೆಗೆ ಬಾರದೇ ಇರುವ ಉಯ್ಯಾಲೆಗಳ ಸರಪಳಿ ಕಿತ್ತು ನಿರುಪಯುಕ್ತವಾಗಿದೆ. ಅಲ್ಲದೆ, ಆಟಿಕೆಗಳು ಬಳಸದಂತೆ ಬೀಗ ಹಾಕಲಾಗಿದೆ. ವಾಯು ವಿಹಾರಿಗಳು ವಿಶ್ರಮಿಸಲು ಹಾಕಿರುವ ಕಲ್ಲಿನ ಬೆಂಚು ಮತ್ತು ಸಿಮೆಂಟ್ ಆಸನಗಳು ಮುರಿದು ಬಿದ್ದಿವೆ.

ವ್ಯಾಯಾಮ ಸಲಕರಣೆಗಳು ಬಳಕೆಯ ಸ್ಥಿತಿಯಲ್ಲಿಲ್ಲ, ಬಹಳ ದಿನಗಳಿಂದ ಮೈದಾನ ಸ್ವಚ್ಚಗೊಳಿಸದೆ ಕಸ ಮತ್ತು ಅನುಪಯುಕ್ತ ತ್ಯಾಜ್ಯದಿಂದ ಇಡೀ ಪರಿಸರ ತುಂಬಿ ಹೋಗಿದೆ. ಪಾರ್ಕ್ಗೆ ಬರುವ ಜನರ ಬೇಜವಾಬ್ದಾರಿಯಿಂದಾಗಿ ಮಕ್ಕಳಿಗಾಗಿ ತರುವ ತಿಂಡಿ-ತಿನಿಸುಗಳ ಪ್ಲಾಸ್ಟಿಕ್ ಕವರ್, ನೀರಿನ ಬಾಟಲಿಗಳು ಎಲ್ಲಿಬೇಕೆಂದರಲ್ಲಿ ಬಿದ್ದಿದ್ದು, ಸ್ವಚ್ಛತೆಯೂ ಇಲ್ಲವಾಗಿದೆ.

ವಾರಾಂತ್ಯ ಬಂದರೆ ಇಲ್ಲಿ ಮಕ್ಕಳೇ ತುಂಬಿರುತ್ತಾರೆ. ಬೆಳಗ್ಗೆ ಮತ್ತು ಸಂಜೆ ಅಲ್ಲದೆ, ಪ್ರತಿನಿತ್ಯ ನೂರಾರು ಮಕ್ಕಳು ಪಾರ್ಕ್ಗೆ ಬರುತ್ತಾರೆ.

ಆದರೆ, ಇಲ್ಲಿ ಸ್ವಚ್ಚತೆ ಹಾಗೂ ಮಕ್ಕಳ ಆಟಿಕೆಗಳನ್ನು ಸರಿಪಡಿಸುವಲ್ಲಿ ಸಂಬಂಧಪಟ್ಟವರು ಮುಂದಾಗದಿರುವುದು ನಾಚಿಕೆ ಗೇಡಿನ ಸಂಗತಿ.

ಕಸದ ಸಮಸ್ಯೆ

ಪಾರ್ಕ್ ಒಳಗೆ ಕಸ ಸಾಗಿಸುವ ಆಟೋಗಳನ್ನೂ ನಿಲ್ಲಿಸಲು ಅವಕಾಶ ಕಲ್ಪಿಸಿರುವುದು ಸಮಸ್ಯೆ ಮತ್ತಷ್ಟು ಜಟಿಲಗೊಳ್ಳಲು ಕಾರಣವಾಗಿದೆ. ಕಸ ಸಾಗಿಸುವ ಆಟೋಗಳಿಂದ ಬರುವ ದುರ್ವಾಸನೆ ಪಾರ್ಕ್ಗೆ ಬರುವ ವಾಯು ವಿಹಾರಿಗಳು ಮತ್ತು ಮಕ್ಕಳಿಗೆ ಅಸಹ್ಯ ಅನ್ನಿಸುವುದಲ್ಲದೆ, ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಕಾಡುತ್ತಿದೆ. ಜೊತೆಯಲ್ಲಿ ಸ್ವಚ್ಚತೆ ಇಲ್ಲದೆ ಸೊಳ್ಳೆಗಳ ಆವಾಸ ಸ್ಥಾನವಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos