ಅಧಿಕಾರಗಳ ನಿರ್ಲಕ್ಷ್ಯೆ ಜನರ ಪರದಾಟ!

ಅಧಿಕಾರಗಳ ನಿರ್ಲಕ್ಷ್ಯೆ ಜನರ ಪರದಾಟ!

ದೇವನಹಳ್ಳಿ, ಸೆ.25: ರೈಲ್ವೆ ಇಲಾಖೆಯು ಅವೈಜ್ಞಾನಿಕವಾಗಿ ರೈಲ್ವೆ ಅಂಡರ್‌ಪಾಸ್ ಮಾಡಿದ್ದು, ನೆನ್ನೆ ರಾತ್ರಿ ಬಿದ್ದ ಮಳೆಯಿಂದಾಗಿ ಅಂಡರ್‌ಪಾಸ್‌ನಲ್ಲಿ ಓಡಾಡಲು ಅವ್ಯವಸ್ಥೆಯಾಗಿದ್ದು ಕೂಡಲೇ ಮೇಲ್ಸೇತುವೆ ನಿರ್ಮಾಣಮಾಡಿ ಸುತ್ತಮುತ್ತಲ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು ಎಂದು ಯರ್ತಿಗಾನ ಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-7 ರಿಂದ ಕನ್ನಮಂಗಲ ಗೇಟ್ ನಿಂದ ಯರ್ತಿಗಾನ ಹಳ್ಳಿ ಹೋಗುವ ರಸ್ತೆಯಲ್ಲಿ ರೈಲ್ವೆ ಇಲಾಖೆಯು ಅಂಡರ್‌ಪಾಸ್ ನಿರ್ಮಾಣ ಮಾಡಿದ್ದು, ಈ ರಸ್ತೆಯಿಂದ ಯರ್ತಿಗಾನ ಹಳ್ಳಿ ಮಾರ್ಗವಾಗಿ ಮಲ್ಲೇನ ಹಳ್ಳಿ, ಮುತ್ತಕದ ಹಳ್ಳಿ, ಚಿಕ್ಕನ ಹಳ್ಳಿ, ಮೈಲನ ಹಳ್ಳಿ, ಬಾಗಲೂರು ಮಾರ್ಗವಾಗಿ ಬೆಂಗಳೂರಿಗೆ ಸಂಪರ್ಕ ರಸ್ತೆಯಾಗಿದೆ.

ಹೆಚ್ಚಿನ ಮಳೆಯಾದರೆ ಅಂಡರ್‌ಪಾಸಿನಲ್ಲಿ ಹೆಚ್ಚು ನೀರು ತುಂಬುವುದರಿಂದ ಜನ ಓಡಾಡಲು ಪರದಾಡುವಂತಾಗಿದೆ. ಕೂಡಲೇ ರೈಲ್ವೆ ಇಲಾಖೆ ಅಂಡರ್‌ಪಾಸ್ ಬದಲು ಮೇಲ್ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುರಿಯುತ್ತಿರುವ ಮಳೆಯಿಂದಾಗಿ ಅಂಡರ್‌ಪಾಸನಲ್ಲಿ ಗ್ರಾಮಸ್ಥರು ಓಡಾಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯಾಗಿದ್ದು, ದೇವನಹಳ್ಳಿ , ಯಲಹಂಕ ಹಾಗೂ ಶಾಲಾ ವಾಹನಗಳು, ಖಾಸಗಿ ವಾಹನಗಳು, ದ್ವಿಚಕ್ರ ವಾಹನ ಸವಾರರು, ಕೂಲಿ ಕಾರ್ಮಿಕರು ಗ್ರಾಮೀಣ ಪ್ರದೇಶದ ರೈತಾಪಿ ಜನ ಸಂಚರಿಸಲು ಬಳಸುವ ರಸ್ತೆಯಲ್ಲಿ ರೈಲ್ವೆ ಇಲಾಖೆ ಅಂಡರ್‌ಪಾಸ್ ನಿರ್ಮಿಸಿರುವುದರಿಂದ ಮಳೆಯ ನೀರು ತುಂಬುವುದರಿಂದ ಯಾರೂ ಸಹ ಓಡಾಡಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕದಲ್ಲೇ ಇರುವುದರಿಂದ ದಿನ ನಿತ್ಯ ಸುಮಾರು ಒಂದು ಸಾವಿರಕ್ಕೂ ಹೆಚ್ಚಿನ ವಾಹನಗಳು ಸಂಚರಿಸುತ್ತವೆ. ದೇವನಹಳ್ಳಿ ಹಾಗೂ ಇನ್ನಿತರೆ ಕಡೆಗಳಲ್ಲಿ ಹೋಗಬೇಕಾದರೆ ದೊಡ್ಡ ಜಾಲ ವನ್ನು ಸುತ್ತುವರೆದು 7 ರಿಂದ 8 ಕಿ.ಲೋ ನಷ್ಟು ಹೆಚ್ಚುವರಿಯಾಗಿ ಸುತ್ತು ಹಾಕಿಕೊಂಡು ಬರಬೇಕಾಗುವುದು ಎಂದು ಗ್ರಾಮಸ್ಥರು ಹೇಳುತ್ತಾರೆ.

ಗ್ರಾಪಂ ಉಪಾಧ್ಯಕ್ಷರ ಹೇಳಿಕೆ : ರೈಲ್ವೆ ಅಧಿಕಾರಿಗಳು ಅವೈಜ್ಞಾನಿಕವಾಗಿ ಅಂಡರ್‌ಪಾಸ್‌ಗಳನ್ನು ಮಾಡಿದ್ದು, ಒಂದು ವಾಹನ ಬಂದರೆ ಇನ್ನೊಂದು ವಾಹನ ಬರುವುದು ಸಹ ಕಷ್ಟವಾಗುತ್ತದೆ. ಸರಿಯಾದ ರೀತಿಯಲ್ಲಿ ಕಾಮಗಾರಿ ಸಹ ಮಾಡಿಲ್ಲ. ರೈಲ್ವೇ ಅಧಿಕಾರಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನ ವಾಗಲಿಲ್ಲ. ಬೆಳಿಗ್ಗೆ ಶಾಲಾ ವಾಹನಗಳು ಗ್ರಾಮಕ್ಕೆ ಬರುವುದು ಆದರೆ 1.5 ಕಿ.ಲೋ ವರೆಗೆ ಮಕ್ಕಳು ನಡೆದುಕೊಂಡು ಬಂದು ಶಾಲಾ ವಾಹನವನ್ನು ಹತ್ತುವಂತೆ ಆಗಿದೆ. ಹಾಲು ಡೈರಿ ವಾಹನವು ಸಹ ಕಷ್ಟ ಪಟ್ಟಿಕೊಂಡು ಬಂದಿದೆ. ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ 12 ಅಡಿಗಳಷ್ಟು ನೀರು ನಿಂತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ. ಇದೇ ರೀತಿ ಮುಂದುವರಿದರೆ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಅಣೇಶ್ವರ ಗ್ರಾಪಂ ಉಪಾಧ್ಯಕ್ಷ ಯರ್ತಿಗಾನ ಹಳ್ಳಿ ಶಿವಣ್ಣ ಎಚ್ಚರಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos