ನಿತ್ಯ 5000 ಕೋವಿಡ್‌ ಪರೀಕ್ಷೆ: ಆರೋಗ್ಯ ಸಚಿವ

ನಿತ್ಯ 5000 ಕೋವಿಡ್‌ ಪರೀಕ್ಷೆ: ಆರೋಗ್ಯ ಸಚಿವ

ಬೆಂಗಳೂರು: ನೆರೆಯ ಕೇರಳದಲ್ಲಿ ಕೋವಿಡ್-19 ಜೆಎನ್.1 ರೂಪಾಂತರಿ ಪತ್ತೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತೆ ಹಾಗೂ ಪೂರ್ವಭಾವಿ ಕ್ರಮಗಳ ಕುರಿತು ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ರಾಜ್ಯದಲ್ಲಿ ಕೊರೋನಾ ಪರೀಕ್ಷೆಯ ಸಂಖ್ಯೆಯನ್ನು ಡಿ.23 ರಿಂದ ನಿತ್ಯ 5 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೊರೋನಾ ಪ್ರಕರಣಗಳು ಹೆಚ್ಚುವ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಿನ್ನೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಈ ಸೂಚನೆ ನೀಡಿದರು. ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಸೂಕ್ತ ರೀತಿಯ ವ್ಯವಸ್ಥೆ ಮಾಡಿಕೊಳ್ಳಬೇಕು. ಆಕ್ಸಿಜನ್‌, ವೆಂಟಿಲೇಟರ್‌, ಐಸಿಯು ಹಾಸಿಗೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಬೇಕು, ವೈರಲ್ ಟ್ರಾನ್ಸಪೋರ್ಟ್ ಮಿಡಿಯಾ ಖರೀದಿ ನಡೆಸುವಂತೆಯೂ ಈ ವೇಳೆ ಅವರು ಸೂಚನೆ ನೀಡಿದರು.

ಹೊರರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದವರಲ್ಲಿ ಕೊರೋನಾ ಲಕ್ಷಣಗಳಿದ್ದರೆ ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕು. ಕೊರೋನಾ ತೀವ್ರತೆಯನ್ನು ತಿಳಿಯಲು ಪರೀಕ್ಷೆಯ ಪ್ರಮಾಣ ಹೆಚ್ಚಿಸಬೇಕು. ಎಲ್ಲ ಸರ್ಕಾರಿ ಆಸ್ಪತ್ರೆ ಸೇರಿದಂತೆ ಆರೋಗ್ಯ ಇಲಾಖೆಯಿಂದ ಕೊರೋನಾ ಪರೀಕ್ಷೆ ನಡೆಸುವಲ್ಲಿಗೆ ಸಮರ್ಪಕವಾಗಿ ಆರ್‌ಟಿಪಿಸಿಆರ್‌ ಪರೀಕ್ಷಾ ಕಿಟ್‌ಗಳನ್ನು ಸರಬರಾಜು ಮಾಡಬೇಕು. ಉಸಿರಾಟದ ಸಮಸ್ಯೆ, ಇನ್‌ಫ್ಲೂಯೆನ್ಜಾ ರೀತಿಯ ಅನಾರೋಗ್ಯ ಹೊಂದಿರುವವರನ್ನು ಕಡ್ಡಾಯವಾಗಿ ಕೊರೋನಾ ಪರೀಕ್ಷೆಗೊಳಪಡಿಸಬೇಕು ಎಂದು ದಿನೇಶ್‌ ಗುಂಡೂರಾವ್‌ ಸೂಚಿಸಿದರು. ಸಭೆಯಲ್ಲಿ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್‌, ಆಯುಕ್ತ ಡಿ. ರಂದೀಪ್‌ ಇತರರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos