ಯಡಿಯೂರಪ್ಪ ಮನೆಯಲ್ಲಿ 200-300 ಕೋಟಿ: ಐಟಿ ದಾಳಿಗೆ ಆಗ್ರಹ!

ಯಡಿಯೂರಪ್ಪ ಮನೆಯಲ್ಲಿ 200-300 ಕೋಟಿ: ಐಟಿ ದಾಳಿಗೆ ಆಗ್ರಹ!

ಬೆಂಗಳೂರು, ಏ. 10, ನ್ಯೂಸ್ ಎಕ್ಸ್ ಪ್ರೆಸ್: ಯಡಿಯೂರಪ್ಪ ಮನೆಯಲ್ಲಿ 200 ರಿಂದ 300 ಕೋಟೆ ಇಟ್ಟುಕೊಂಡು ಆಪರೇಷನ್​ ಕಮಲ ಮಾಡುತ್ತಿದ್ದಾರೆ. ಆದರೆ, ಇವರ ಮನೆ ಮೇಲೆ ಮಾತ್ರ ಐಟಿ ದಾಳಿ ನಡೆಯುವುದಿಲ್ಲ ಏಕೆ ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​, ಯಡಿಯೂರಪ್ಪ ಮನೆಯಲ್ಲಿ 200-300 ಕೋಟಿ ಹಣ ಇಟ್ಟಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ. ನಗರದ ಬಾಪೂಜಿ ಮೈದಾನದಲ್ಲಿ ಮೈತ್ರಿ ಅಭ್ಯರ್ಥಿ ಮಂಜಪ್ಪ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಇತ್ತೀಚೆಗೆ ದೇಶದೆಲ್ಲೆಡೆ ವಿರೋಧ ಪಕ್ಷಗಳ ನಾಯಕರು ಹಾಗೂ ಆಪ್ತರ ಮನೆ ಮೇಲೆ ಐಟಿ ದಾಳಿಯಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದರು. ಮೋದಿಯವರು ಉದ್ಯೋಗ ಸೃಷ್ಠಿ ಮಾಡಿದ್ದೇನೆ ಮತ ನೀಡಿ ಎಂದು ಕೇಳುತ್ತಿಲ್ಲ. ಬದಲಿಗೆ  ಪಾಕ್ ಮೇಲೆ ಯುದ್ದ ಮಾಡಿದ್ದೇವೆ ಗೆಲ್ಲಿಸಿ ಎನ್ನುತ್ತಿದ್ದಾರೆ. ಪುಲ್ವಾಮಾ ಘಟನೆ ಭಾಷಣದಲ್ಲಿ ಬಳಕೆ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ  ಬಹಿರಂಗವಾಗಿ ಎಚ್ಚರಿಕೆ ನೀಡಿದ್ದರೂ,  ವೇದಿಕೆ ಮೇಲೆ ಮೋದಿ ಈ ವಿಷಯ ಪ್ರಸ್ತಾಪಿಸುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಏನು ಕ್ರಮ ಕೈ ಗೊಂಡಿದೆ ಎಂದು ವಾಗ್ದಾಳಿ ನಡೆಸಿದರು. ಮೈಸೂರಿನ ಪ್ರಚಾರ ಸಮಾವೇಶದಲ್ಲಿ ಭಾಗಿಯಾದ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮೈಸೂರು ಅಭ್ಯರ್ಥಿಯಾಗಲಿ ಅಥವಾ ವೇದಿಕೆ ಮೇಲಿದ್ದ ಚಾಮರಾಜನಗರ ಅಭ್ಯರ್ಥಿ ಹೆಸರನ್ನು ಹೇಳಲಿಲ್ಲ. ಬದಲಿಗೆ ಪ್ರಧಾನಿಗಳು ಸುಮಲತಾ ಅವರಿಗೆ ಬೆಂಬಲ ನೀಡಿದರು. ಪ್ರಧಾನಿ ಅವರ ಹೇಳಿಕೆಯಿಂದಲೇ ಸುಮಲತಾ ಬಿಜೆಪಿ ಅಭ್ಯರ್ಥಿ ಎಂಬುದು ಸ್ಪಷ್ಟವಾಗಿದೆ ಪ್ರಧಾನಿ ಬೆಂಬಲ ನೀಡಿದರೂ ಮಂಡ್ಯದಲ್ಲಿ ನಿಖಿಲ್​ ಕುಮಾರಸ್ವಾಮಿ ಭಾರೀ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದಾಯ ತೆರಿಗೆ ಇಲಾಖೆ ರಾಜ್ಯದಲ್ಲಿ ಬಿಜೆಪಿ ಶಾಖೆಯಂತೆ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಆದಾಯ ತೆರಿಗೆ ಇಲಾಖೆ ಬಳಕೆ ಮಾಡಲಾಗುತ್ತಿದೆ. ಏರ್ ಸ್ಟೈಕ್ ಅನ್ನು ಚುನಾವಣೆ ವಿಚಾರವಾಗಿ ಮೋದಿ ಬಳಕೆ ಮಾಡುತ್ತಿದ್ದಾರೆ. ಬಿಜೆಪಿ ದೇಶದ ಸ್ವತಂತ್ರ ಸಂಸ್ಥೆಗಳನ್ನು ಸರ್ವನಾಶ ಮಾಡಿದ್ದಾರೆ ಎಂದು ಆರೋಪ ಮಾಡಿದರು. ರಾಹುಲ್​ ವಯನಾಡು ಸ್ಪರ್ಧೆ ಕುರಿತು ಸಮರ್ಥನೆ ನೀಡಿದ ಅವರು, ಅವರು ಯಾರಿಗೂ ಹೆದರಿ ಹೋಗಿಲ್ಲ. ಎರಡೂ ಕಡೆ ಕೂಡ ರಾಹುಲ್​ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos