ಒಂದೇ ದಿನ ಇಬ್ಬರು ಬಾಲಕಿಯರ ನಿಗೂಢ ಸಾವು..!

ಒಂದೇ ದಿನ ಇಬ್ಬರು ಬಾಲಕಿಯರ ನಿಗೂಢ ಸಾವು..!

ಬೆಂಗಳೂರು, ಮೇ.7, ನ್ಯೂಸ್ ಎಕ್ಸ್ ಪ್ರೆಸ್: ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಇಂದು ನಿಗೂಢವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ರಾಜಗೋಪಾಲನಗರದಲ್ಲಿ ಜ್ಯೋತಿ(12) ಸಂಪ್‍ನಲ್ಲಿ ಮುಳುಗಿ ಮೃತಪಟ್ಟಿದ್ದು, ಬಾಗಲಗುಂಟೆಯ ಮಲ್ಲಸಂದ್ರದಲ್ಲಿ ಪೂಜಾ (11) ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

ಸಂಪ್‍ನಲ್ಲಿ ಜ್ಯೋತಿ ಶವ :ರಾಜಗೋಪಾಲ ನಗರದಲ್ಲಿ ಅಲ್ಪನಾಥ್ ಎಂಬುವರ ಮನೆಯಲ್ಲಿ ಮನೆಗೆಲಸ ಮಾಡುತ್ತಿದ್ದ ಬಾಲಕಿ ಜ್ಯೋತಿ ಇಂದು ಬೆಳಗ್ಗೆ 9 ಗಂಟೆಗೆ ಮನೆ ಸಂಪ್‍ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಜ್ಯೋತಿಯ ಸಾವಿನ ಬಗ್ಗೆ ಫೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಸಂಪ್‍ನಲ್ಲಿ ಆರೇಳು ಅಡಿಯಷ್ಟು ಮಾತ್ರ ನೀರಿದ್ದು, ಜ್ಯೋತಿ ಸಂಪ್‍ಗೆ ಬಿದ್ದಿದ್ದನ್ನು ಆಕೆಯ ತಂಗಿ ನೋಡಿ ಕಿರುಚಾಡಿದ್ದಾಳೆ. ಆದರೆ ಮನೆ ಮಾಲೀಕ ಆ ರೀತಿ ಮಾಡದೆ ಬಾಲಕಿಯನ್ನು ರಕ್ಷಣೆ ಮಾಡಲು ಬಂದ ಸಂಬಂಧಿಕರಿಗೂ ಅವಕಾಶ ಕೊಡದೆ ಅಡ್ಡ ನಿಂತಿದ್ದ ಎಂದು ಜ್ಯೋತಿ ಅವರ ಚಿಕ್ಕಪ್ಪ ಮಹದೇವ್ ಆರೋಪಿಸಿದ್ದಾರೆ. ಬೆಳಗ್ಗೆ 7.30ಕ್ಕೆ ಜ್ಯೋತಿ ಅಲ್ಪನಾಥ್ ಮನೆಗೆ ಕೆಲಸಕ್ಕೆ ಹೋಗಿದ್ದಳು. ಆಕೆ ಸಂಪ್‍ಗೆ ಹೇಗೆ ಬಿದ್ದಳು ಎಂಬುದು ಗೊತ್ತಿಲ್ಲ. ನಮಗೆ ಮಾಹಿತಿ ತಿಳಿದ ತಕ್ಷಣ ರಕ್ಷಿಸಲು ಪ್ರಯತ್ನಿಸಿದೆವು. ಆದರೆ ಮನೆ ಮಾಲೀಕ ಅವಕಾಶ ಕೊಡಲಿಲ್ಲ. ಸ್ಥಳೀಯರು ಹೆಚ್ಚು ಜನ ಸೇರಿ ಬಲವಂತವಾಗಿ ಒಳನುಗ್ಗಿ ನೋಡಿದಾಗ ಜ್ಯೋತಿ ಸಾವನ್ನಪ್ಪಿದ್ದಳು. ಬಡವರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ. ಮನೆ ಮಾಲೀಕನನ್ನು ಬಂಧಿಸಿ ಕ್ರಮಕೈಗೊಳ್ಳಲೇಬೇಕೆಂದು ಒತ್ತಾಯಿಸಿದ್ದಾರೆ. ಜ್ಯೋತಿ ಇನ್ನೊಬ್ಬ ಸಂಬಂಧಿ ಮಾತನಾಡಿ, ಅಲ್ಪನಾಥ್ ಹೊಸ ಮನೆ ಕಟ್ಟಿಸಿದ್ದು, ಅದಕ್ಕೊಂದು ನರ ಬಲಿ ಕೊಡಬೇಕು ಎಂದು ಹೇಳುತ್ತಿದ್ದರು. ಅದನ್ನು ನಾವು ತಮಾಷೆಯಾಗಿ ತೆಗೆದುಕೊಂಡಿದ್ದೆವು. ಈಗ ಜ್ಯೋತಿ ಅಸಹಜ ಸಾವು ನೋಡಿದರೆ ಉದ್ದೇಶಪೂರ್ವಕವಾಗಿಯೇ ಆಕೆಯ ಸಾವಿಗೆ ಅವಕಾಶ ಮಾಡಿಕೊಟ್ಟಂತಿದೆ ಎಂದು ಆರೋಪಿಸಿದ್ದಾರೆ. ಜ್ಯೋತಿಯವರ ತಾಯಿಯ ರೋದನ ಮುಗಿಲುಮುಟ್ಟಿತ್ತು. ಅವರೂ ಕೂಡ ಮನೆ ಮಾಲೀಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಮಾಲೀಕ ಅಲ್ಪನಾಥ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಆತ ನೀಡಿರುವ ಹೇಳಿಕೆಯಲ್ಲಿ ನಾನು ನೋಡುವ ವೇಳೆಗಾಗಲೇ ಬಾಲಕಿ ಮೃತಪಟ್ಟಿದ್ದಳು. ಹಾಗಾಗಿ ಪೊಲೀಸರೇ ಬಂದು ಶವ ಹೊರತೆಗೆಯಲಿ ಎಂಬ ಕಾರಣಕ್ಕಾಗಿ ಬಾಗಿಲು ತೆರೆಯಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಪ್ರಕರಣದಲ್ಲಿ ನರಬಲಿ ಅಥವಾ ಕೊಲೆಯಾಗಿರುವ ಯಾವುದೇ ಕುರುಹುಗಳಿಲ್ಲ. ಮನೆ ಮಾಲೀಕನ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಆದರೂ ಪ್ರಕರಣವಾಗಿ ಗಂಭೀರವಾಗಿ ಪರಿಗಣಿಸಿ ವಿಚಾರಣೆಯನ್ನು ತೀವ್ರಗೊಳಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಯಚೂರು ಮೂಲದ ಪಾರ್ವತಮ್ಮ ಮತ್ತು ಬುಗ್ಗಪ್ಪ ಅವರ ಮಗಳಾದ ಜ್ಯೋತಿ ಅಲ್ಪನಾಥ್ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದಳು ಎಂದು ಹೇಳಲಾಗಿದೆ. ಪ್ರಕರಣವನ್ನು ಮಲ್ಲೇಶ್ವರಂನ ಎಸಿಪಿ ಧನಂಜಯ್ ಅವರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಿದರು. ಯಶವಂತಪುರ ಮತ್ತು ಮಲ್ಲೇಶ್ವರಂ ಉಪವಿಭಾಗದ ಪೊಲೀಸರು ಪ್ರಕರಣವನ್ನು ನಾನಾ ದಿಕ್ಕುಗಳಿಂದಲೂ ವಿಚಾರಣೆಗೆ ಒಳಪಡಿಸಿದ್ದಾರೆ.

ಹನ್ನೊಂದು ವರ್ಷದ ಪೂಜಾ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, ಆಕೆಯ ಕತ್ತಿನ ಸುತ್ತ ಗಾಯವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಬಾಗಲಗುಂಟೆ ಮಲ್ಲಸಂದ್ರದಲ್ಲಿ ತಳ್ಳುವ ಗಾಡಿಯಲ್ಲಿ ಗೋಬಿಮಂಚೂರಿ ವ್ಯಾಪಾರ ಮಾಡುತ್ತಿದ್ದ ರಂಗೇಗೌಡ-ಶಾರದಾ ದಂಪತಿ ಪುತ್ರಿಯಾದ ಪೂಜಾ ಬಿಎನ್‍ಆರ್ ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಳು. ನಿನ್ನೆ ಸಂಜೆ ತಂದೆಯ ಬಳಿ ಬಂದು 50 ರೂ. ಪಡೆದುಕೊಂಡು ಹೋಗಿದ್ದಾಳೆ. ಊಟ ಮಾಡಿಕೊಂಡು ಮನೆಯಲ್ಲೇ ಇರುವುದಾಗಿ ಹೇಳಿದ್ದ ಪೂಜಾ, ಇದ್ದಕ್ಕಿದ್ದಂತೆ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಗೋಬಿ-ಮಂಚೂರಿ ವ್ಯಾಪಾರ ಮುಗಿಸಿ ರಾತ್ರಿ 9.30ರಲ್ಲಿ ದಂಪತಿ ಮನೆಗೆ ಬಂದಾಗ ಪ್ರಕರಣ ಬಯಲಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos