2032 ವೇಳೆಗೆ ರಾಜ್ಯದಲ್ಲಿ 1 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆ: ಎಂ.ಬಿ. ಪಾಟೀಲ್‌

2032 ವೇಳೆಗೆ ರಾಜ್ಯದಲ್ಲಿ 1 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆ: ಎಂ.ಬಿ. ಪಾಟೀಲ್‌

ಬೆಂಗಳೂರು: ರಾಜ್ಯವನ್ನು 2032ರ ವೇಳೆಗೆ 1 ಟ್ರಿಲಿಯನ್ ಡಾಲರ್ ಗಾತ್ರದ ಆರ್ಥಿಕತೆಯನ್ನು ಬೆಳೆಸುವ ಹೆಗ್ಗುರಿಯನ್ನು ಸರ್ಕಾರ ಇಟ್ಟುಕೊಂಡಿದ್ದು, ಇದಕ್ಕಾಗಿ ಉದ್ಯಮ ವಲಯದಲ್ಲಿ ಅಸಾಂಪ್ರದಾಯಿಕ ಕ್ಷೇತ್ರಗಳತ್ತ ಗಮನಹರಿಸಲಾಗುತ್ತಿದೆ. ಇದರಿಂದ ಹೂಡಿಕೆಯ ಅಗಾಧ ಹರಿವಿನ ಜತೆಗೆ ಉದ್ಯೋಗಾವಕಾಶ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಹೇಳಿದ್ದಾರೆ.

ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಜರುಗಿದ ‘ಗ್ಲೋಬಲ್ ಬಿಝಿನೆಸ್ ಫೋರಂ’ನ 54ನೇ ಜಾಗತಿಕ ವ್ಯಾಪಾರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರಿ ಮತ್ತು ಖಾಸಗಿ ವಲಯದ ಉತ್ಪಾದಕರಿಗೆ ಸರಕಾರದ ವತಿಯಿಂದ ಭೂಮಿ ಮತ್ತು ಇನ್ನಿತರ ಮೂಲಸೌಲಭ್ಯಗಳನ್ನು ಸುಗಮವಾಗಿ ಒದಗಿಸಲಾಗುವುದು. ಬೆಂಗಳೂರನ್ನು ಹೊರತುಪಡಿಸಿದ ಪ್ರದೇಶಗಳಲ್ಲಿ ಕೈಗಾರಿಕಾ ಕ್ರಾಂತಿ 4.0ಯನ್ನು ನನಸುಗೊಳಿಸಲು ಸಾವಿರಾರು ಎಕರೆ ಪ್ರದೇಶಗಳಲ್ಲಿ ಕೈಗಾರಿಕಾ ಪಾರ್ಕುಗಳನ್ನು ಸರಕಾರವು ಅಭಿವೃದ್ಧಿ ಪಡಿಸುತ್ತಿದೆ. ಉದ್ಯಮಿಗಳು ಪ್ಲಗ್ ಅಂಡ್ ಪ್ಲೇ ಮಾದರಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡು, ಉದ್ಯಮಗಳನ್ನು ಬೆಳೆಸಬಹುದು. ಈ ಎಲ್ಲ ಜಾಗಗಳಿಗೆ ಬಂದರು, ರೈಲು ಮತ್ತು ವೈಮಾನಿಕ ಸಂಪರ್ಕಗಳನ್ನು ಒದಗಿಸಿ ಪೂರೈಕೆ ಸರಪಳಿಯನ್ನು ಆಧುನೀಕರಣಗೊಳಿಸಲಾಗುವುದು ಎಂದರು.

ಭಾರತದಲ್ಲಿ ಎರಡನೇ ಬಾರಿಗೆ ಹಾಗೂ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಈ ಸಮಾವೇಶವನ್ನು ನ್ಯೂಯಾರ್ಕಿನ ವರ್ಲ್ಡ್ ಟ್ರೇಡ್ ಸೆಂಟರ್ಸ್ ಅಸೋಸಿಯೇಶನ್ ಮತ್ತು ಬೆಂಗಳೂರಿನ WTC ಸಂಯುಕ್ತವಾಗಿ ಏರ್ಪಡಿಸಿದ್ದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ನ್ಯೂಯಾರ್ಕ್ ಡಬ್ಲ್ಯುಟಿಸಿ ಅಧ್ಯಕ್ಷ ಜಾನ್ ಡ್ರೀವ್, ಡಿಲೈಟ್ ಸಿಇಒ ರೋಮಲ್ ಶೆಟ್ಟಿ, ಬ್ರಿಗೇಡ್ ಗ್ರೂಪ್ ಕಾರ್ಯ ನಿರ್ವಾಹಕ ಅಧ್ಯಕ್ಷ ಎಂ ಆರ್ ಜಯಶಂಕರ್, ಜಂಟಿ ವ್ಯವಸ್ಥಾಪಕ ನಿರ್ದೇಶಕ ನಿರೂಪ್ ಶಂಕರ್, ಬೆಂಗಳೂರು ಡಬ್ಲ್ಯುಟಿಸಿ ವ್ಯವಸ್ಥಾಪಕ ನಿರ್ದೇಶಕ ವಿನೀತ್ ವರ್ಮಾ ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos