ಬರದ ನಾಡಿಗೆ ಬೆಲೆಕುಸಿತದ ಬರೆ

ಬರದ ನಾಡಿಗೆ ಬೆಲೆಕುಸಿತದ ಬರೆ

ಪಾವಗಡ :ಅತ್ಯಂತ ಕಡಿಮೆ ಮಳೆ ಬೀಳುವ, ಅಪ್ಪಟ ಬಯಲುಸೀಮೆ ಸದಾ ಬರಪೀಡಿತ ತಾಲ್ಲೂಕು ಎಂದೇ ಹಣೆಪಟ್ಟಿ. ಬೇಸಿಗೆ ಕಾಲದಲ್ಲಿ ಜನ- ಜಾನುವಾರುಗಳು ಕುಡಿಯುವ ನೀರಿಗೂ ತತ್ವಾರ ಪಡುವ ದುಸ್ಥಿತಿ ಇಲ್ಲಿನದು. ಇಂತಹ ಬಿಸಿಲ ಪ್ರದೇಶದಲ್ಲಿ ಹೇಳಿಕೊಳ್ಳುವ ಯಾವುದೇ ನೀರಾವರಿ ಯೋಜನೆಗಳೂ ಇಲ್ಲ. ಬಡವರ ಬದಾಮಿ ಎಂದೇ ಪ್ರಸಿದ್ಧವಾದ ಶೇಂಗಾ ಬೆಲೆ ಭಾರೀ ಕುಸಿತ ಕಂಡಿದ್ದು, ಅತಿವೃಷ್ಟಿ ಮತ್ತು ಅನಾವೃಷ್ಟಿಗಳ ನಡುವೆ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮೊದಲೇ ದರ ಕುಸಿತದ ಚಿಂತೆಯಲ್ಲಿರುವ ನಡುವೆ ಜಿಎಸ್‌ಟಿ ನೆಪ ಮಾಡಿಕೊಂಡ ವ್ಯಾಪಾರಸ್ಥರು ಕಡಿಮೆ ದರದಲ್ಲಿ ಶೇಂಗಾ ಖರೀದಿಗೆ ಮುಂದಾಗುತ್ತಿರುವುದು ರೈತರಲ್ಲಿ ಅಸಮಾಧಾನ ಉಂಟುಮಾಡಿದೆ. ಆದ್ದರಿಂದ ಉತ್ತಮ ಬೆಲೆ ಬರುವ ನಿರೀಕ್ಷೆ ಇಟ್ಟುಕೊಂಡ ರೈತರು ಶೇಂಗಾ ಮಾರಾಟಕ್ಕೆ ನಿರಾಸಕ್ತಿ ವಹಿಸುತ್ತಿದ್ದು, ಶೇಂಗಾ ಬೆಳೆಯ ಬೆಲೆಯೂ ಇಳಿಕೆ ಕಂಡಿದೆ.
ದಿಢೀರ್ ಕುಸಿತಕ್ಕೆ ಕಾರಣ
ಪಾವಗಡ ಎಪಿಎಂಸಿ ಮಾರುಕಟ್ಟೆಯಲ್ಲಿ ಶೇಂಗಾ ವ್ಯಾಪಾರ ವಹಿವಾಟು ಸ್ತಬ್ಧವಾಗಿರುವುದು ರೈತರ ಚಿಂತೆ ಹೆಚ್ಚುವಂತೆ ಮಾಡಿದೆ. ದೇಶದ ಬೇರೆ ಬೇರೆ ರಾಜ್ಯದಲ್ಲಿ ಶೇಂಗಾ ಬೆಳೆಯುವುದರಿಂದ ಬೆಲೆಯಲ್ಲಿ ವ್ಯತ್ಯಾಸವಾಗುವುದು ಸಹಜ. ಶೇಂಗಾ ಬೇಡಿಕೆ ಕಡಿಮೆ ಆಗಿರುವುದರಿಂದ ರಾಜ್ಯದಲ್ಲಿ ಶೇಂಗಾ ಬೆಲೆ ಕುಸಿತ ಕಂಡಿದೆ.
ಆಂಧ್ರಪ್ರದೇಶದಲ್ಲಿ ಶೇಂಗಾ ಬೆಳೆ ಮಾರುಕಟ್ಟೆಗೆ ಬಂದಿದ್ದು, ರಾಜ್ಯದ ರೈತರಿಗೆ ಪೈಪೋಟಿವೊಡ್ಡಿದೆ. ಅಲ್ಲದೆ, ಹೆಚ್ಚಿನ ಸಂಖ್ಯೆಯ ವ್ಯಾಪಾರಸ್ಥರು ಆಂಧ್ರದಿಂದಲೇ ಖರೀದಿ ಮಾಡುತ್ತಿರುವುದು ರಾಜ್ಯದಲ್ಲಿ ಬೆಲೆ ದಿಢೀರ್ ದರ ಕುಸಿತ ಕಂಡಿದೆ ಎನ್ನುತ್ತಾರೆ ರೈತರು
ರೈತರಲ್ಲಿ ಆತಂಕ
ಕಳೆದ ವರ್ಷ ಕ್ವಿಂಟಾಲ್ ಶೇಂಗಾ ೫,೮೦೦-೬,೧೦೦ ರೂ.ವರೆಗೆ ಮಾರಾಟವಾಗಿತ್ತು. ಆದರೆ ಈ ವರ್ಷ ೩,೮೦೦-೪,೦೦೦ ರೂ. ಮಾರಾಟವಾಗುತ್ತಿದ್ದು, ಸರಿಸುಮಾರು ಅರ್ಧದಷ್ಟು ಬೆಲೆ ವ್ಯತ್ಯಾಸವಾಗಿದೆ. ಶೇಂಗಾ ಬೆಳೆ ನೆಚ್ಚಿಕೊಂಡ ರೈತರು ಗೊಬ್ಬರ, ಕೃಷಿ ಕಾರ್ಮಿಕರ ಖರ್ಚು ಹಾಗೂ ರಾಸಾಯನಿಕ ಸಿಂಪಡನೆಗೆ ಸಾಲ ಮಾಡಿಕೊಂಡಿದ್ದು, ಬೆಲೆ ಕುಸಿತದಿಂದ ಕಂಗೆಡುವಂತೆ ಮಾಡಿದೆ.
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಈ ಬಾರಿ ರೈತರು ಕಷ್ಟಪಟ್ಟು ಶೇಂಗಾ ಬೆಳೆದಿದ್ದಾರೆ. ಗುಣಮಟ್ಟದ ಶೇಂಗಾ ಇದ್ದರೂ ಬೆಲೆ ಕಡಿಮೆಯಾಗಿದೆ. ರೈತರು ಬೆಳೆ ಬಂದಾಗ ಮಾರುಕಟ್ಟೆಯಲ್ಲಿ ದಿಢೀರ್ ಬೆಲೆ ಕುಸಿತಗೊಳ್ಳುವುದು ಏಕೆ?, ಮೊದಲೇ ತಾಲ್ಲೂಕಿನ ರೈತರು ಬರಗಾಲದಿಂದ ಬೇಸತ್ತು ಹೋಗಿದ್ದೇವೆ. ಸರಕಾರ ಬೆಂಬಲ ಬೆಲೆ ನೀಡಿ ಶೇಂಗಾ ಖರೀದಿಸದಿದ್ದರೆ ರೈತರ ಬದುಕು ಬೀಳಲಿದೆ ಎನ್ನುತ್ತಾರೆ ತಾಲೂಕಿನ ರೈತರು
ರಾಶಿ ಕಡಿಮೆ, ಬಣವೆ ಜಾಸ್ತಿ,
ಶೇಂಗಾ ಬೆಲೆ ಕಡಿಮೆಯಾಗಿದ್ದರಿಂದ ಈ ಬಾರಿ ರೈತರು ಶೇಂಗಾ ಹರಿದು ರಾಶಿ ಮಾಡುವ ಗೋಜಿಗೆ ಹೋಗುತ್ತಿಲ್ಲ. ಈ ಬಾರಿ ಶೇಂಗಾ ಬೆಳೆ ಬಂಪರ್ ಆಗಿ ಬಂತು. ಮೊದಲಿಗೆ ಉತ್ತಮವಾಗಿದ್ದ ಶೇಂಗಾ ಬೆಲೆ ಈಗ ಏಕಾಏಕಿ ಕುಸಿದಿರು­ವುದು ಆತಂಕಕ್ಕೆ ತಳ್ಳಿದೆ. ಬಿತ್ತನೆಗೆ ಮಾಡಿದ ವೆಚ್ಚವೂ ಕೈಗೆಟುಕದೆ ರೈತ ತತ್ತರಿಸಿದ್ದಾನೆ. ತಾಲ್ಲೂಕಿನಲ್ಲಿ ಶೇಂಗಾ ಬೆಳೆಯನ್ನು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಬೆಳೆಯಲಾಗುತ್ತಿದೆ.
ಖರೀದಿ ಕೇಂದ್ರ ಇಲ್ಲ
ಸರ್ಕಾರ ತೊಗರಿ ಮತ್ತು ಭತ್ತಕ್ಕೆ ನೀಡುವ ಬೆಂಬಲ ಬೆಲೆಯಂತೆ ಶೇಂಗಾಕ್ಕೂ ೪೨೦೦ ಬೆಂಬಲ ಬೆಲೆ ಘೋಷಣೆ ಮಾಡಿದೆ. ಇತರೆ ಜಿಲ್ಲೆ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಸ್ಥಾಪಿಸಿದೆ. ಆದರೆ ತಾಲ್ಲೂಕಿನಲ್ಲಿ ಇದುವರೆಗೂ ಖರೀದಿ ಕೇಂದ್ರ ಆರಂಭಿಸಿಲ್ಲ.
ಬೆಲೆ ಕುಸಿತದ ಕಾರಣ ಶೇಂಗಾ ಮಾರಾಟ ಮಾಡದೆ ಗೋದಾಮಿನಲ್ಲಿಡಲು ಕೂಡ ಪಾವಗಡ, ತಾಲ್ಲೂಕಿನಲ್ಲಿ ವ್ಯವಸ್ಥೆಯೇ ಇಲ್ಲವಾಗಿದೆ. ಮನೆಗಳಲ್ಲಿ ಸಣ್ಣ ಕೊಠಡಿಗಳಲ್ಲಿ ತುಂಬಿಟ್ಟಿರುವ ಶೇಂಗಾವೂ ಬೂಸ್ಟ್ ಹಿಡಿಯ ತೊಡಗಿರುವ ಕಾರಣ ರೈತರು ಅಡಕತ್ತರಿಗೆ ಸಿಲುಕಿದ್ದಾರೆ. ಈ ನಡುವೆ ಊರು, ಊರಿಗೆ ತೆರಳಿ ಶೇಂಗಾ ಖರೀದಿಸಿದ್ದ ಸಣ್ಣ ಮಾರಾಟಗಾರರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿದ್ದು ಊರು ಬಿಡುವ ಪರಿಸ್ಥಿತಿಯನ್ನು ಅವರೂ ಎದುರಿಸುವಂತಾಗಿದೆ

ಫ್ರೆಶ್ ನ್ಯೂಸ್

Latest Posts

Featured Videos