ತಪ್ಪು ಮಾಡಿದ್ದಕ್ಕೆ ಪರಿಣಾಮ ಎದುರಿಸಲೇಬೇಕು: ಉಗ್ರರಿಗೆ ಮೋದಿ ವಾರ್ನಿಂಗ್

ತಪ್ಪು ಮಾಡಿದ್ದಕ್ಕೆ ಪರಿಣಾಮ ಎದುರಿಸಲೇಬೇಕು: ಉಗ್ರರಿಗೆ ಮೋದಿ ವಾರ್ನಿಂಗ್

ಉಗ್ರರ ದಾಳಿ ಹಿಂದೆ ಯಾರೇ ಇದ್ದರೂ ಅವರು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ನೀಡುತ್ತೇವೆ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.

ಮೇಕ್ ಇನ್ ಇಂಡಿಯಾ ಅಡಿ ಅಭಿವೃದ್ಧಿ ಪಡಿಸಲಾದ ವೇಗದ ವಂದೇಭಾರತ್ ಎಕ್ಸ್ ಪ್ರೆಸ್ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು, ನೀವು ದೊಡ್ಡ ತಪ್ಪು ಮಾಡಿದ್ದೀರಿ. ಈ ತಪ್ಪು ಮಾಡಿದ್ದಕ್ಕೆ ನೀವು ಪರಿಣಾಮ ಎದುರಿಸಲೇಬೇಕು ಎಂದು ಹೇಳಿ ಉಗ್ರರಿಗೆ ಕಠಿಣ ಸಂದೇಶ ರವಾನಿಸಿದ್ದಾರೆ.

ಈ ಸಮಯ ಬಹಳ ಭಾವುಕವಾಗಿದೆ. ಪಕ್ಷ ಅಥವಾ ವಿಪಕ್ಷ ಎಂಬ ರಾಜನೀತಿಯಿಂದ ದೂರವಿದ್ದು, ಈ ದಾಳಿಯಿಂದ ದೇಶ ಒಂದಾಗಿ ನಿಂತು ಹೋರಾಟ ಮಾಡುತ್ತಿದೆ. ದೇಶ ಈಗ ಒಂದಾಗಿದೆ. ಒಳಸಂಚು ಮಾಡಿ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಹತ್ತಿರದ ದೇಶ ಕನಸು ಕಂಡಿದ್ದರೆ ಅದನ್ನು ಬಿಟ್ಟು ಬಿಡುವುದು ಒಳ್ಳೆಯದು. ಏಕೆಂದರೆ ಈ ಕನಸು ಎಂದಿಗೂ ನನಸಾಗಲು ಸಾಧ್ಯವಿಲ್ಲ ಎಂದು ಗುಡುಗಿದರು

ನಮ್ಮ ಸುರಕ್ಷತಾ ಪಡೆಗೆ ನಾವು ಎಲ್ಲಾ ಸ್ವಾತಂತ್ರ್ಯ ನೀಡಿದ್ದೇವೆ. ನಮಗೆ ನಮ್ಮ ಸೈನಿಕರ ಶೌರ್ಯದ ಹಾಗೂ ಅವರ ಧೈರ್ಯದ ಬಗ್ಗೆ ನಂಬಿಕೆ ಇದೆ. ನಮ್ಮ ಹೋರಾಟವನ್ನು ಹೆಚ್ಚು ಮಾಡುವುದಕ್ಕೆ ದೇಶಭಕ್ತರು ಸರಿಯಾದ ಮಾಹಿತಿಯನ್ನು ನಮ್ಮ ಏಜೆನ್ಸಿಯನ್ನು ಕಳುಹಿಸಿಕೊಡುತ್ತಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

ದೇಶಕ್ಕೆ ನಾನು ಭರವಸೆ ನೀಡುತ್ತೇನೆ. ಈ ದಾಳಿ ಹಿಂದೆ ಯಾವ ಶಕ್ತಿ ಇದ್ದರೂ, ಯಾರೇ ಇದ್ದರೂ ಅವರು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆ ನೀಡುತ್ತೇವೆ. ಈ ಸಮಯದಲ್ಲಿ ನಮ್ಮನ್ನು ನೆನಪಿಸಿಕೊಳ್ಳುತ್ತಿರುವವರ ಭಾವನೆಯನ್ನು ನಾನು ಅರ್ಥ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ತಾನು ನಿರ್ಮಿಸಿದ ದಾರಿಯಲ್ಲಿ ಪಾಕಿಸ್ತಾನ ಕೇವಲ ದಾಳಿ ನೋಡುತ್ತಾ ಬಂದಿದ್ದರೆ, ನಾವು ನಿರ್ಮಿಸಿದ ದಾರಿಯಲ್ಲಿ ಕೇವಲ ಅಭಿವೃದ್ಧಿ ನೋಡುತ್ತಾ ಬಂದಿದ್ದೇವೆ. ಭಾರತದ 130 ಕೋಟಿ ಜನರು ಸೇರಿ ಈ ರೀತಿಯ ದಾಳಿಗೆ ಸರಿಯಾದ ಉತ್ತರ ನೀಡುತ್ತಾರೆ ಎಂದರು.

ದೊಡ್ಡ ದೊಡ್ಡ ದೇಶಗಳು ಈ ದಾಳಿಯನ್ನು ಖಂಡಿಸಿದ್ದು, ಭಾರತದ ಜೊತೆಯಲ್ಲಿರುತ್ತೇವೆ ಎಂದು ಹೇಳಿವೆ. ನಮಗೆ ಬೆಂಬಲ ಸೂಚಿಸಿದ ಆ ಎಲ್ಲ ದೇಶಗಳಿಗೆ ನಾನು ಅಭಾರಿ ಆಗಿದ್ದೇನೆ. ಈ ಭಯೋತ್ಪಾದಕ ಶಕ್ತಿಯನ್ನು ನಾಶಗೊಳಿಸಲು ಎಲ್ಲ ದೇಶಗಳು ಒಂದಾಗಿ ಹೋರಾಟ ಮಾಡಲೇಬೇಕಾಗಿದೆ. ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲ ದೇಶಗಳು ಒಂದಾದರೆ ಈ ಭಯೋತ್ಪಾದನೆ ಒಂದು ಕ್ಷಣ ಕೂಡ ಇರಲು ಸಾಧ್ಯವಿಲ್ಲ ಎಂದು ಹೇಳಿದರು.

ಪುಲ್ವಾಮ ದಾಳಿಯಿಂದ ಇಡೀ ದೇಶದ ಜನತೆಯ ಮನಸ್ಥಿತಿ ದುಃಖ ಹಾಗೂ ಆಕ್ರೋಶಗೊಂಡಿದ್ದಾರೆ. ನಮ್ಮ ವೀರ ಯೋಧರು ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ದೇಶಕ್ಕಾಗಿ ಜೀವ ಕೊಡುವ ಯೋಧರು ಕೇವಲ ಎರಡು ಕನಸುಗಳಿಗೆ ತಮ್ಮ ಜೀವವನ್ನು ತ್ಯಾಗ ಮಾಡುತ್ತಾರೆ. ಮೊದಲು ದೇಶದ ಸುರಕ್ಷತೆ ಹಾಗೂ ದೇಶದ ಸಂವೃದ್ಧಿ. ಈ ಎರಡು ಕನಸಿಗೆ ದೇಹ ತ್ಯಾಗ ಮಾಡಿದ ವೀರ ಯೋಧರ ಆತ್ಮಗಳಿಗೆ ನಾನು ನಮನ ಮಾಡುತ್ತೇನೆ. ಅವರ ಆಶೀರ್ವಾದ ತೆಗೆದುಕೊಂಡು ಮತ್ತೊಮ್ಮೆ ಭರವಸೆ ನೀಡುತ್ತೇನೆ. ಈ ಎರಡು ಕನಸು ಕಂಡು ಹುತಾತ್ಮರಾದ ಯೋಧರ ಕನಸನ್ನು ನನಸು ಮಾಡುತ್ತೇವೆ ಎಂದು ಮೋದಿ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos