ಸೀಬೆ ಹಣ್ಣಿನಲ್ಲಿ ಔಷಧಿ ಗುಣ

ಸೀಬೆ ಹಣ್ಣಿನಲ್ಲಿ ಔಷಧಿ ಗುಣ

ಬೆಂಗಳೂರು, ನ. 4 : ಸೀಬೆ ಎಂದರೆ ಎಲ್ಲರಿಗೂ ಇಷ್ಟ. ಈ ಹಣ್ಣು ರುಚಿಯಾಗಿರುತ್ತದೆ. ಸೀಬೆಗೆ ಇನ್ನೊಂದು ಹೆಸರು ಪೇರಲ. ಮಾಗಿದಾಗ ವಿಶಿಷ್ಟ ಪರಿಮಳ ಹರಡುತ್ತದೆ. ಇದು ನೋಡಲೂ ಸಹ ಆಕರ್ಷಕವಾಗಿರುತ್ತದೆ. ಶ್ರಾವಣ ಬಂತು ಎಂದರೆ ಎಲ್ಲಿ ನೋಡಿದರೂ ಸೀಬೆಯೇ. ದೋರೆಗಾಯಿ ಇದ್ದಾಗ ಸೀಬೆಯಲ್ಲಿ ಸಿಹಿ, ಹುಳಿ ಮತ್ತು ಒಗರು ಮಿಳಿತಗೊಂಡಿದ್ದು ತಿನ್ನಲು ಬಲು ರುಚಿಯಾಗಿರುತ್ತದೆ.
ಸೀಬೆಗೆ ಸಂಸ್ಕೃತದಲ್ಲಿ ಅಮೃತಫಲಂ ಎಂದರೆ, ಹಿಂದಿಯಲ್ಲಿ ಅಮೃದ್, ತೆಲುಗಿನಲ್ಲಿ ಜಾಮ, ತಮಿಳಿನಲ್ಲಿ ಕೊಯ್ಯಾಪಳಂ ಹಾಗೂ ಇಂಗ್ಲಿಷ್ನಲ್ಲಿ ಗೇವಾ ಎಂದು ಕರೆಯುತ್ತಾರೆ. ಸೀಬೆ, ಮಿರ್ಟೀಸೀ ಕುಟುಂಬಕ್ಕೆ ಸೇರಿದ ಮಧ್ಯಮ ಗಾತ್ರದ ಮರ. ಇದರ ಸಸ್ಯನಾಮ ‘ಪ್ಸಿಡಿಯಂ ಗಯಜಾವ’ ಎಂದು. ಸೀಬೆ ಹಣ್ಣಿನಲ್ಲಿ ಶರೀರಕ್ಕೆ ಅಗತ್ಯವಿರುವ ವಿವಿಧ ಪೋಷಕಾಂಶಗಳು ಸಾಕಷ್ಟಿವೆ. ಹಣ್ಣು ದೊರೆಯುವ ಅವಧಿಯಲ್ಲಿ ಯಥೇಚ್ಛವಾಗಿ ಬಳಸಿ ಲಾಭ ಹೊಂದಬೇಕು. ಅತ್ಯಧಿಕ ಔಷಧೀಯ ಗುಣವಿರುವ ಇದು ಹಿತ್ತಲಗಿಡ. ಇದರ ಬೆಲೆಯೂ ಕಡಿಮೆಯಿದ್ದು, ಆರೋಗ್ಯಕ್ಕೆ ಹೆಚ್ಚು ಉಪಯುಕ್ತ.
ಹಸಿರು ಕಾಯಿ ಒಗರಾಗಿರುತ್ತದೆ. ದೋರೆಗಾಯಿ ಹೆಚ್ಚು ರುಚಿಯಾಗಿರುತ್ತದೆ. ಅಧಿಕ ಪ್ರಮಾಣದ ಶರ್ಕರ ಪಿಷ್ಟಗಳ ಜೊತೆಗೆ ಪ್ರೋಟೀನು, ಸುಣ್ಣ, ರಂಜಕ, ಕಬ್ಬಿಣ ಹಾಗೂ ಕ್ಯಾಲೊರಿ ಸತ್ವಗಳಿರುತ್ತವೆ. ‘ಸಿ’ ಅನ್ನಾಂಗದ ಜೊತೆಗೆ ಇತರ ಅನ್ನಾಂಗಗಳು ಸ್ವಲ್ಪ ಮಟ್ಟಿಗೆ ಇರುತ್ತದೆ. ದೋರೆಗಾಯಿಗಳಲ್ಲಿ ಅಧಿಕ ಪೆಕ್ಟಿನ್ ಅಂಶವಿರುತ್ತದೆ.
ಸೀಬೆಹಣ್ಣನ್ನು ರುಚಿಗೋಸ್ಕರ ಇಲ್ಲವೇ ಆಹಾರವಾಗಿ ಬಳಸುವುದು ಮಾತ್ರವಲ್ಲ, ಅದು ಉತ್ತಮ ಔಷಧಿಯ ಗುಣ ಸಹ ಹೊಂದಿದೆ. ಅಧಿಕ ಪ್ರಮಾಣದ ಪ್ರೋಟೀನು ಇರುವ ಕಾರಣ ಮಾಂಸಖಂಡಗಳನ್ನು ಬಲಪಡಿಸಬಲ್ಲದು. ನಾರಿನ ಅಂಶ ಅಧಿಕವಿರುವ ಕಾರಣ ತಿಂದ ಆಹಾರ ಕರುಳುಗಳಲ್ಲಿ ಸುಲಭವಾಗಿ ಚಲಿಸುವಂತೆ ಮಾಡಬಲ್ಲದು. ಆದ್ದರಿಂದ ಮಲಬದ್ಧತೆಗೆ ಇದು ದಿವ್ಯೌಷಧ. ಈ ಉದ್ದೇಶಕ್ಕಾಗಿ ರಾತ್ರಿ ಊಟದ ನಂತರ ಪ್ರತಿ ನಿತ್ಯ ಒಂದೆರೆಡು ಹಣ್ಣುಗಳನ್ನು ತಿಂದಲ್ಲಿ ಮುಂಜಾನೆ ಸುಖ ವಿರೇಚನ ಸಾಧ್ಯ.

ಫ್ರೆಶ್ ನ್ಯೂಸ್

Latest Posts

Featured Videos