ಕುಟುಂಬ ಹರಿದು ಹಂಚಿ ಹೋಗ್ಯಾತ್ರಿ……!

  • In State
  • August 10, 2020
  • 350 Views
ಕುಟುಂಬ ಹರಿದು ಹಂಚಿ ಹೋಗ್ಯಾತ್ರಿ……!

ಲಿಂಗಸುಗೂರು: ಅಧಿಕಾರಿಗಳ ಸುಳ್ಳು ಭರವಸೆಯಿಂದಾಗಿ ನಮ್ಮ ಬದುಕು ಕಳೆದುಕೊಂಡಿವ್ರೀ… ಪ್ರತಿವರ್ಷ ತಾಲ್ಲೂಕಿನ ಅಧಿಕಾರಿಗಳು ಹಾಂಗ ಬಂದು ಇಂಗ ಹೋಗುತ್ತಾರೀ… ಕಷ್ಟಾನೋ… ಸುಖಾನೋ… ನಮ್ಮಪಾಡ್ಗಿ ನಾವು ನಮ್ಮ ತುಂಬು ಕುಟುಂಬದ ಜೊತೆ ಚೆಂದಾಗಿರುತ್ತಿದ್ದಿವಿರೀ… ಸರ್ಕಾರದವ್ರ ಮಾತು ಕೇಳಿ ನಮ್ಮ ಕುಟುಂಬ ಹರಿದು ಹಂಚಿ ಹೋಗ್ಯಾತ್ರೀ… ಅದೇನೋ ಬ್ರೀಡ್ಜ್ ಮಾಡುತ್ತೀವಿ ಎಂದು ಹೇಳ್ತಾರೀ ಅದು ಯಾವಾಗ ಮಾಡುತ್ತಾರೋ ಗೊತ್ತಿಲ್ಲ. ನಾವು ಮಾದ್ರು ಅನುಕೊಂಡು ಇಲ್ಲಿವರೆಗೂ ಮಾತನಾಡಸಕ ಬಂದಿಲ್ಲ ನೋಡ್ರೀ ಎಂದು ಮಾದರಗಡ್ಡಿ ಮಲ್ಲಪ್ಪ, ಮಾದರ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸವಸಾಗರ ಜಲಾಶಯ ಭರ್ತಿಯಾಗಿ ಕೃಷ್ಣಾ ನದಿಗೆ ೧.೮೦ ಲಕ್ಷ ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ. ಪರಿಣಾಮವಾಗಿ ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಾದ ಕರಕಲಗಡ್ಡಿ, ಮಾದರಗಡ್ಡಿ, ಹೊಂಕಮ್ಮನಗಡ್ಡಿ ತಾಲೂಕಿನ ಸಂಪರ್ಕ ಕಡಿದುಕೊಂಡಿವೆ. ನಡುಗಡ್ಡೆಯಲ್ಲಿ ವಾಸಿಸುವ ಪರಿಶಿಷ್ಟ ಕುಟುಂಬಗಳು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಕರಕಲಗಡ್ಡಿಯಲ್ಲಿ ೪ ಜನ ಮತ್ತು ಮಾದರಗಡ್ಡಿಯಲ್ಲಿ ೩ ಮಾದಿಗ ಕುಟುಂಬದ ೧೪ ಜನರು ನಡುಗಡ್ಡೆಯಲ್ಲಿ ಉಳಿದುಕೊಂಡಿದ್ದಾರೆ.

ಕೇವಲ ಪ್ರವಾಹ ಸಂದರ್ಭದಲ್ಲಿ ಮಾತ್ರ ತಾಲೂಕು ಆಡಳಿತಕ್ಕೆ ನಡುಗಡ್ಡೆಯ ಜನರು ನೆನಪಾಗುತ್ತಾರೆ. ಆದರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದಾರೆಯೇ ಹೊರತು ಯಾವುದೇ ಕ್ರಮಕೈಗೊಂಡಿಲ್ಲ. ಇದು ಕೇವಲ ಒಂದು ವರ್ಷದಲ್ಲ, ಪ್ರತಿವರ್ಷ ಈ ಬವಣೆ ನಡುಗಡ್ಡೆಯ ಜನರಿಗೆ ತಪ್ಪಿದ್ದಲ್ಲ.

ಕಳೆದವರ್ಷ ಪ್ರವಾಹ ಸಂದರ್ಭದಲ್ಲಿ ತಾಲೂಕು ಆಡಳಿತ ಎನ್‌ಡಿಆರ್‌ಎಫ್, ಆಗ್ನಿಶಾಮಕದಳ, ಪೊಲೀಸ್ ಸಿಬ್ಬಂದಿ ಸಹಯೋಗದಲ್ಲಿ ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗಿ ಶಾಲೆಯೊಂದರ ಗಂಜಿ ಕೇಂದ್ರದಲ್ಲಿ ಬಿಟ್ಟಿದ್ದರು. ಕಳೆದ ವರ್ಷದಲ್ಲಿ ಹಾಳಾದ ಮನೆ, ಬೆಳೆ ಹಾಗೂ ನದಿಯಲ್ಲಿ ಕೊಚ್ಚಿಕೊಂಡು ಹೋದ ಜಾನುವಾರುಗಳಿಗೆ ನಷ್ಟ ಪರಿಹಾರ ಕೊಡುವುದಕ್ಕೆ ತಾಲೂಕು ಆಡಳಿತಕ್ಕೆ ಸಾಧ್ಯವಾಗಿಲ್ಲ.

 

ಫ್ರೆಶ್ ನ್ಯೂಸ್

Latest Posts

Featured Videos