ಬೇಡವೆಂದರೂ ಮನೆಯಲ್ಲಿ 5 ಕೋಟಿ ಇಟ್ಟು ಹೋದರು !?

ಬೇಡವೆಂದರೂ ಮನೆಯಲ್ಲಿ 5 ಕೋಟಿ ಇಟ್ಟು ಹೋದರು !?

ಬೆಂಗಳೂರು, ಜು. 19: ನಾನು ಅಂಥವನಲ್ಲ, ಬೇಡವೆಂದರೂ ಮನೆಯಲ್ಲಿ 5 ಕೋಟಿ ಇಟ್ಟು ಹೋದರು. ಇವತ್ತು ಯಾವ್ಯಾವ ಶಾಸಕರಿಗೆ ಎಷ್ಟು ಹಣ ಕೊಟ್ಟಿದ್ಧಾರೆ ಎಂಬ ಮಾಹಿತಿ ನನ್ನಲ್ಲಿದೆ ಎಂದು ಸದನದಲ್ಲಿ ಶ್ರೀನಿವಾಸಗೌಡ ಹೇಳಿದರು.

ವಿಶ್ವಾಸಮತ ಯಾಚನೆ ಗೊತ್ತುವಳಿಯ ಮೇಲಿನ ಚರ್ಚೆಯ ವೇಳೆ ಶಾಸಕರ ಖರೀದಿ ವಿಚಾರ ಸಾಕಷ್ಟು ಗದ್ದಲಕ್ಕೆ ಕಾರಣವಾಯಿತು. ಮುಖ್ಯಮಂತ್ರಿಗಳು ಸುದೀರ್ಘವಾಗಿ ಮಾತನಾಡುವ ಸಂದರ್ಭದಲ್ಲಿ ಬಿಜೆಪಿಯವರಿಂದ ಶಾಸಕರ ಖರೀದಿಯಾಗುತ್ತಿರುವುದನ್ನು ಪ್ರಸ್ತಾಪಿಸಿದರು. ಶಾಸಕರಿಗೆ 30-40 ಕೋಟಿ ಆಫರ್ ಕೊಡುತ್ತಾರೆ ಎಂದು ಸಿಎಂ ಟೀಕಿಸುತ್ತಿದ್ದ ವೇಳೆ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಅವರು ಮಧ್ಯಪ್ರವೇಸಿದರು. ತಮಗೂ 5 ಕೋಟಿ ರೂ ಕೊಡಲು ಮುಂದೆ ಬಂದಿದ್ದರು ಎಂದು ಹೇಳಿದರು.

ಕೋಲಾರ ಶಾಸಕರ ಶ್ರೀನಿವಾಸಗೌಡರ ಈ ಹೇಳಿಕೆಯ ಬಳಿಕ ಕಾಂಗ್ರೆಸ್ ಸದಸ್ಯರು ಬಿಜೆಪಿಯವನ್ನು ಕೆಣಕಿದರು. ಇದು ಬಿಜೆಪಿಯವರಿಗೆ ಕೋಪ ತರಿಸಿತು. ಇದೆಲ್ಲವೂ ದಾಖಲೆಗಳ ಮೇಲೆ ಹೋಗಲಿ. ನಾವು ಕಾನೂನಿಗೆ ಹೋಗುತ್ತೇವೆ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಆಕ್ಷೇಪಿಸಿದರು. ಆ ಬಳಿಕ ಶ್ರೀನಿವಾಸ ಗೌಡ ಅವರು ಎದ್ದು ನಿಂತು ತಮಗೆ ಆಮಿಷ ಒಡ್ಡಿದವರ ಹೆಸರು ಮತ್ತು ಘಟನೆಯನ್ನು ವಿವರಿಸಿದರು.

ಅಶ್ವತ್ಥ ನಾರಾಯಣ, ಸಿ.ಪಿ. ಯೋಗೇಶ್ವರ್, ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನನ್ನ ಮನೆಗೆ ನೇರವಾಗಿ ಬಂದು 5 ಕೋಟಿ ಕೊಟ್ಟರು. ನಾನು ಆ ಥರ ಇಲ್ಲ. ನಾನು ತಗೊಳ್ಳಲ್ಲ ಅಂದರೂ ಇಟ್ಟು ಹೋದ್ರು. ಇವತ್ತು 30 ಕೋಟಿ ಕೊಡ್ತೀವಿ ಬರ್ತೀರಾ ಅಂತ ಕೇಳ್ತಾರೆ. ಇವತ್ತು ಶಾಸಕರಿಗೆ ಬೆಲೆ ಇಲ್ಲದಂತಾಗಿದೆ. ಇವತ್ತು ಯಾವ್ಯಾವ ಶಾಸಕರಿಗೆ ಎಷ್ಟು ಕೊಟ್ಟಿದ್ದಾರೆ ಎಂಬ ಮಾಹಿತಿ ನನಗಿದೆ. ನನಗೆ ದುಡ್ಡು ಕೊಟ್ಟಿರುವುದು ನಿಜ. ಇಲ್ಲ ಎಂದು ಅವರು ಹೇಳಲಿ. ನಾನು ಉತ್ತರ ಕೊಡುತ್ತೇನೆ ಎಂದು ಶ್ರೀನಿವಾಸಗೌಡ ಹೇಳಿದರು.

ಆಗ ಮೈತ್ರಿಪಕ್ಷಗಳ ಶಾಸಕರು ಬಿಜೆಪಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸದನದಲ್ಲಿ ಕೆಲ ಹೊತ್ತು ಗದ್ದಲ ಸೃಷ್ಟಿಯಾಯಿತು.

ಇದೆಲ್ಲವನ್ನೂ ಹತಾಶರಾಗಿ ಗಮನಿಸುತ್ತಿದ್ದ ರಮೇಶ್ ಕುಮಾರ್ ಅವರು ಗದ್ದಲ ತಡೆಯಲು ಯತ್ನಿಸಲಿಲ್ಲ. ಇಲ್ಲಿ ನಡೆಯುತ್ತಿರುವುದೆಲ್ಲವನ್ನೂ ಉದ್ದೇಶಪೂರ್ವಕವಾಗಿ ರೆಕಾರ್ಡ್ಗೆ ಹೋಗಲಿ ಎಂದು ಬಿಡುತ್ತಿದ್ದೇನೆಂದು ರಮೇಶ್ ಕುಮಾರ್ ಹೇಳಿದರು.

 

ಫ್ರೆಶ್ ನ್ಯೂಸ್

Latest Posts

Featured Videos