ಡಿಕೆ ಸುರೇಶ್ ಗೆದ್ದೇ ಗೆಲ್ಲುತ್ತಾರೆ: ಸಿಎಂ ಸಿದ್ದು

ಡಿಕೆ ಸುರೇಶ್ ಗೆದ್ದೇ ಗೆಲ್ಲುತ್ತಾರೆ: ಸಿಎಂ ಸಿದ್ದು

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಸುರೇಶ ಅವರು ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಭರ್ಜರಿ ರೋಡ್ ಮೂಲಕ ಆಗಮಿಸಿದ ಡಿಕೆ ಸುರೇಶ್ ರಾಮನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಅನೇಕ ಕಾಂಗ್ರೆಸ್ ನಾಯಕರು ಹಾಜರಿದ್ದರು. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದು, ಲೋಕಸಭೆ ಅಖಾಡಕ್ಕೆ ಭರ್ಜರಿ ಬಲ ಪ್ರದರ್ಶನ ನಡೆಯಿತು. ಇದೇ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಗೆಲುವು ಖಚಿತ ಎಂದು ಭರವಸೆ ವ್ಯಕ್ತಪಡಿಸಿದರು.

‘ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಡಾ. ಸಿಎನ್ ಮಂಜುನಾಥ್ ಅವರನ್ನು ಕಣಕ್ಕಿಳಿಸಿದೆ. ಅವರ ‘ಹೃದಯ’ ನೋಡಿ ಜನ ಮತದಾನ ಮಾಡಲಿದ್ದಾರೆ. ಡಾ. ಮಂಜುನಾಥ್​ ಸರ್ಕಾರಿ ಕೆಲಸದಲ್ಲಿದ್ದವರು. ನಿವೃತ್ತರಾಗಿ ಈಗ ರಾಜಕಾರಣಕ್ಕೆ ಬಂದಿದ್ದಾರೆ. ಸಂಸದ ಡಿಕೆ ಸುರೇಶ್ ಮೂರು ಬಾರಿ ಲೋಕಸಭಾ ಸದಸ್ಯರಾಗಿದ್ದು, ಸಾಕಷ್ಟು ಕೆಲಸ ಮಾಡಿದ್ದಾರೆ. ಸಂಸತ್​​ನಲ್ಲಿ, ಸಂಸತ್ ಹೊರಗಡೆ, ಕ್ಷೇತ್ರದಲ್ಲಿ ಬಹಳ ಕ್ರಿಯಾಶೀಲರಾಗಿ ಕೆಲಸ ಮಾಡಿದವರು. ಹೀಗಾಗಿ ಬಿಜೆಪಿಯವರು ಯಾರನ್ನೇ ಅಭ್ಯರ್ಥಿಯನ್ನಾಗಿ ಮಾಡಿದರೂ ಡಿಕೆ ಸುರೇಶ್ ಗೆದ್ದೇ ಗೆಲ್ಲುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್ ಪಕ್ಷದ ಸರ್ಕಾರ ಬಡವರ ಪರವಾಗಿ ಅನೇಕ ಯೋಜನೆಗಳನ್ನು ನೀಡಿದೆ. ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಡಿ‌ಕೆ ಸುರೇಶ್ ಈ ಕ್ಷೇತ್ರಕ್ಕೆ ಬಹಳ ಕೆಲಸ ಮಾಡಿದ್ದಾರೆ. ಹಗಲು ರಾತ್ರಿ ದುಡಿದಿದ್ದಾರೆ. ಹೀಗಾಗಿ ಅವರಿಗೆ ಜನ ಮತ ನೀಡುತ್ತಾರೆ. ಕಳೆದ‌ ಬಾರಿ ಬಿಜೆಪಿಯವರು ಎಲ್ಲಾ 28 ಕ್ಷೇತ್ರ ಗೆಲ್ಲುತ್ತೇವೆ ಎಂದಿದ್ದರು. ಆದರೆ,‌ ಗೆದ್ರಾ? ಕಳೆದ ಬಾರಿ ನಮ್ಮ ಸರ್ಕಾರ ಇರಲಿಲ್ಲ. ಈ‌ಬಾರಿ ನಮ್ಮ ಸರ್ಕಾರ ಇದೆ. ಐದು ಗ್ಯಾರಂಟಿಗಳಿಂದ ನಾವು ಗೆಲ್ಲುತ್ತೇವೆ ಎಂದು ಸಿಎಂ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos