ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸಿಕ್ಸ್​ಗಳ ಸುರಿಮಳೆ

ಹೈದರಾಬಾದ್‌ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಸಿಕ್ಸ್​ಗಳ ಸುರಿಮಳೆ

ಬೆಂಗಳೂರು: ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆಟಗಾರರು ಸಿಕ್ಸರ್‌ ಹಾಗೂ ಬೌಂಡರಿಗಳ ಸುರಿಮಳೆ ಹರಿಸಿ ಅಭಿಮಾನಿಗಳಿಗೆ ಭರ್ಜರಿ ರಸದೌತಣ ಉಣಬಡಿಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಎಸ್‌ಆರ್‌ಎಚ್ ತನ್ನ ಪಾಲಿನ 20 ಓವರ್‌ಗಳಿಗೆ 277 ರನ್ ಕಲೆ ಹಾಕಿದರೆ, ತಾವೇನು ಕಡಿಮೆ ಎಂಬಂತೆ ರನ್‌ಗಳಿಸಿದ ಮುಂಬೈ ಇಂಡಿಯನ್ಸ್ ಆಟಗಾರರು 246 ರನ್ ಗಳಿಸಿದರೂ 31 ರನ್ ಸೋಲು ಅನುಭವಿಸಿದರು.

ಇಂಡಿಯನ್ ಪ್ರೀಮಿಯರ್ ಲೀಗ್​ನ 8ನೇ ಪಂದ್ಯದಲ್ಲಿ ಸಿಕ್ಸ್​ಗಳ ಸುರಿಮಳೆಯಾಗಿದೆ. ಈ ಸಿಕ್ಸ್​ಗಳೊಂದಿಗೆ ಇದೀಗ ಸನ್​ರೈಸರ್ಸ್ ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ಬ್ಯಾಟರ್​ಗಳು ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಂದರೆ ಐಪಿಎಲ್​ ಇತಿಹಾಸದಲ್ಲೇ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸ್ ಮೂಡಿಬಂದಿವೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್​ರೈಸರ್ಸ್ ಹೈದರಾಬಾದ್ ಪರ ಟ್ರಾವಿಸ್ ಹೆಡ್ 3 ಸಿಕ್ಸ್ ಬಾರಿಸಿದರೆ, ಅಭಿಷೇಕ್ ಶರ್ಮಾ 7 ಸಿಕ್ಸ್ ಸಿಡಿಸಿದರು. ಇನ್ನು ಮಾರ್ಕ್ರಾಮ್ 1 ಸಿಕ್ಸರ್ ಬಾರಿಸಿದರೆ, ಹೆನ್ರಿಕ್ ಕ್ಲಾಸೆನ್ ಬರೋಬ್ಬರಿ 7 ಸಿಕ್ಸ್ ಸಿಡಿಸಿ ಅಬ್ಬರಿಸಿದರು. ಇದರೊಂದಿಗೆ ಎಸ್​ಆರ್​ಹೆಚ್​ ಇನಿಂಗ್ಸ್​ನಲ್ಲಿ 18 ಸಿಕ್ಸ್​ಗಳು ಮೂಡಿಬಂದಿತ್ತು.

ಇನ್ನು ಮುಂಬೈ ಇಂಡಿಯನ್ಸ್ ತಂಡದ ಪರ ರೋಹಿತ್ ಶರ್ಮಾ 3 ಸಿಕ್ಸ್ ಬಾರಿಸಿದರೆ, ಇಶಾನ್ ಕಿಶನ್ 4 ಸಿಕ್ಸ್ ಸಿಡಿಸಿದ್ದರು. ಹಾಗೆಯೇ ನಮನ್ ಧಿರ್ 2, ತಿಲಕ್ ವರ್ಮಾ 6 ಸಿಕ್ಸ್​ಗಳನ್ನು ಬಾರಿಸಿದ್ದರು. ಇನ್ನು ಹಾರ್ದಿಕ್ ಪಾಂಡ್ಯ 1, ಟಿಮ್ ಡೇವಿಡ್ 3 ಹಾಗೂ ರೊಮಾರಿಯೊ ಶೆಫರ್ಡ್ 1 ಸಿಕ್ಸ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ ಬ್ಯಾಟರ್​ಗಳು ಒಟ್ಟು 20 ಸಿಕ್ಸ್​ಗಳನ್ನು ಬಾರಿಸಿದ್ದರು.

ಇದಕ್ಕೂ ಮುನ್ನ ಈ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಹೆಸರಿನಲ್ಲಿತ್ತು. 2018 ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ಜೊತೆಗೂಡಿ ಒಟ್ಟು 33 ಸಿಕ್ಸ್ ಸಿಡಿಸಿ ಈ ವಿಶೇಷ ದಾಖಲೆ ಬರೆದಿದ್ದರು.

ಇದೀಗ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ಬ್ಯಾಟರ್​ಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ 38 ಸಿಕ್ಸ್ ಸಿಡಿಸಿ ಐಪಿಎಲ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos