ತಲೆ ಎತ್ತಲಿದೆ ದೇಶದ ಅತಿದೊಡ್ಡ ಚಾಮುಂಡಿ ವಿಗ್ರಹ

ತಲೆ ಎತ್ತಲಿದೆ ದೇಶದ ಅತಿದೊಡ್ಡ ಚಾಮುಂಡಿ ವಿಗ್ರಹ

ರಾಮನಗರ: ನಮ್ಮ ರಾಜ್ಯದ ಕೀರ್ತಿಯನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮ ಸನ್ನದ್ಧವಾಗಿದೆ. ಅಮಾವಾಸ್ಯೆಯ ಜೊತೆಗೆ ವರ್ಷದ ಕೊನೆಯ ಸೂರ್ಯಗ್ರಹಣದ ಹಿನ್ನೆಲೆ ತಾಯಿ ಚಾಮುಂಡೇಶ್ವರಿಯ ಪಾದಪೂಜೆಯನ್ನು ವಿವಿಧ ಹೋಮ, ಹವನ, ಸಂಕಲ್ಪಗಳ ಮೂಲಕ ನೆರವೇರಿಸಲಾಯಿತು.
ದೇವಸ್ಥಾನದ ಧರ್ಮದರ್ಶಿಗಳಾದ ಗೌಡಗೆರೆಯ ಮಲ್ಲೇಶ್ ಅವರು ಮಾತನಾಡಿ, ಚಾಮುಂಡೇಶ್ವರಿ ದೇವಿಯ 60 ಅಡಿ ಎತ್ತರದ 18 ಭುಜಗಳ ಸಿಂಹ ವಾಹನರೂಢ ವಿಗ್ರಹವನ್ನು ಪ್ರತಿಸ್ಥಾಪನೆ ಮಾಡಲು ನಿರ್ಧರಿಸಿದ್ದೇವೆ. ಈ ವಿಗ್ರಹ ನಮ್ಮ ಕರ್ನಾಟಕ ಹಾಗೂ ದೇಶದ ಅತಿದೊಡ್ಡ ವಿಗ್ರಹವಾಗಲಿದೆ.
ವಿಗ್ರಹವನ್ನು ಪಂಚಲೋಹಗಳಾದ ಚಿನ್ನ, ಬೆಳ್ಳಿ, ಹಿತ್ತಾಳೆ, ತಾಮ್ರಾ, ಕಂಚಿನಿಂದ ಸರಿಸುಮಾರು 30 ರಿಂದ 35 ಟನ್ ತೂಕದಲ್ಲಿ ತಯಾರಿಸಲಾಗುತ್ತಿದೆ. ಈಗಾಗಲೇ ಶೇ.30ರಷ್ಟು ಕೆಲಸ ಮುಗಿದಿದೆ. ಮುಂದಿನ ವರ್ಷದ ಏಪ್ರಿಲ್ ಅಥವಾ ಮೇ ತಿಂಗಳ ಸಮಯಕ್ಕೆ ವಿಗ್ರಹವನ್ನು ಲೋಕಾರ್ಪಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಮಾವಾಸ್ಯೆಯಾದ ಹಿನ್ನೆಲೆ ರಾಮನಗರದ ಜೊತೆಗೆ ಬೆಂಗಳೂರು, ಮೈಸೂರು, ಮಂಡ್ಯ, ತಮಿಳುನಾಡಿನಿಂದಲೂ ಭಕ್ತರ ದಂಡು ಆಗಮಿಸಿ ಪೂಜೆ ಸಲ್ಲಿಸಿದರು. ತಾಯಿ ಚಾಮುಂಡೇಶ್ವರಿಗೆ ಚಂಡಿಕಾ ಹೋಮ ಮಾಡಿ ಪ್ರಪಂಚಕ್ಕೆ ಮಾರಿಯಾಗಿರುವ ಕೊರೋನಾ ದೂರವಾಗಲೆಂದು ಪ್ರಾರ್ಥನೆ ಸಲ್ಲಿಸಲಾಯಿತು.
ಮುಸ್ಲಿಮರಿಂದ ವಿಗ್ರಹ ತಯಾರು
ಈ ವಿಗ್ರಹವನ್ನು ಕರ್ನಾಟಕದ ಜೊತೆಗೆ ತಮಿಳುನಾಡಿನ ಶಿಲ್ಪಿಗಳು ತಯಾರಿಸುತ್ತಿದ್ದಾರೆ. ಆದರೆ ಮುಖ್ಯವಾಗಿ ವಿಗ್ರಹದ ಮಾದರಿಯನ್ನು ತಯಾರು ಮಾಡಿರುವುದು ಮುಸ್ಲಿಂ ಸಮುದಾಯದ ಮೂಲತಃ ಬೆಂಗಳೂರು ಮೂಲದವರಾದ ಪಠಾಣ್ ಎಂಬುವರು ಎನ್ನುವುದು ಮತ್ತೊಂದು ವಿಶೇಷ
ಚಾಮುಂಡಿ ತಾಯಿಯ ವಿಗ್ರಹದ ಮಾದರಿ ವಿಗ್ರಹ ತಯಾರು ಮಾಡಿಕೊಟ್ಟಿರುವವರು ಮುಸ್ಲಿಂ ಸಮುದಾಯದ ಶಿಲ್ಪಿಯಾಗಿರುವುದು ನಮಗೆ ಅತ್ಯಂತ ಸಂತೋಷದ ವಿಚಾರ ಎಂದು ದೇವಸ್ಥಾನದ ಧರ್ಮದರ್ಶಿಗಳಾದ ಗೌಡಗೆರೆ ಮಲ್ಲೇಶ್‌ರವರು ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.
ಈ ವಿಗ್ರಹ ನಮ್ಮ ಜಿಲ್ಲೆಗೆ ಒಂದು ಕಳಶವಾಗಲಿದೆ. ಗೌಡಗೆರೆ ಗ್ರಾಮ ಅತ್ಯಂತ ಶಕ್ತಿಶಾಲಿ ಧಾರ್ಮಿಕ ಕೇಂದ್ರವಾಗಲಿದೆ ಎಂದು ಮಲ್ಲೇಶ್ ಅಭಿಪ್ರಾಯಪಟ್ಟಿದ್ದಾರೆ. ಇನ್ನು ದೇವಸ್ಥಾನದ ಆವರಣದಲ್ಲಿ ವಿಗ್ರಹದ ಕೆಲಸ ಅತಿವೇಗವಾಗಿ ನಡೆಯುತ್ತಿದೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos