ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲಿದೆ ರಾಜಹಂಸಗಡದ ಕೋಟೆ

ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಲಿದೆ ರಾಜಹಂಸಗಡದ ಕೋಟೆ

ಚಿಕ್ಕೋಡಿ, ಜ. 25: ನಗರದಿಂದ 20 ಕಿ.ಮೀ ದೂರದಲ್ಲಿರುವ ರಾಜಹಂಸಗಡ ಕೋಟೆಯ ಅಭಿವೃದ್ಧಿಗೆ ಮತ್ತೆ ಸಕಾಲ ಒದಗಿ ಬಂದಿದೆ. ಕೋಟೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ರೂ.3.50 ಕೋಟಿ ಮಂಜೂರು ಮಾಡಿದ್ದು, ಶೀಘ್ರವೇ ಗಾರ್ಡನ್, ಸ್ವಾಗತ ಕಮಾನು, ಸಂಪರ್ಕ ರಸ್ತೆ ಸೇರಿದಂತೆ ಇತರೆ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ.

ಕೋಟೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ರೂ.15 ಕೋಟಿ ಅನುದಾನದ ಬೇಡಿಕೆಯನ್ನು ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸರ್ಕಾರದ ಮುಂದಿಟ್ಟಿದ್ದರು. ಮೊದಲ ಹಂತದಲ್ಲಿ ರೂ. 3.50 ಕೋಟಿ ಮಂಜೂರಾಗಿದೆ. ಅದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಂಜೂರಾಗಿರುವ ರೂ.50 ಲಕ್ಷ ಅನುದಾನವನ್ನು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯ ನಿರ್ಮಾಣ ಮತ್ತು ಪ್ರತಿಷ್ಠಾಪನೆಗೆ ವೆಚ್ಚ ಮಾಡಲಾಗುವುದು.

ಕೋಟೆಯ ಮೇಲ್ಭಾಗದಲ್ಲಿ ಶಿವಾಜಿಯ ಪುತ್ಥಳಿ ಪ್ರತಿಷ್ಠಾಪನೆಯ ಬೇಡಿಕೆ ಕಳೆದ 10 ವರ್ಷಗಳಿಂದ ಕೇಳಿ ಬರುತ್ತಲೇ ಇದ್ದು, ಅದಕ್ಕೆ ಈಗ ಮುಕ್ತಿ ಸಿಗುವ ಕಾಲ ಬಂದಿದೆ. ಪುತ್ಥಳಿಗಾಗಿ ಹೆಬ್ಬಾಳಕರ ಅವರು ರೂ. 1 ಕೋಟಿಯ ಪ್ರಸ್ತಾವಣೆಯನ್ನು ಸರ್ಕಾರಕ್ಕೆ ಕಳಿಸಿದ್ದರು. ಸರ್ಕಾರವು ಪ್ರಸ್ತಾವಣೆಯ ಅರ್ಧದಷ್ಟನ್ನು ಮಂಜೂರು ಮಾಡಿದೆ.

ಸಮುದ್ರ ಮಟ್ಟದಿಂದ 2,500 ಅಡಿ ಎತ್ತರವಿರುವ ಈ ಕೋಟೆಯನ್ನು ಶಿವಾಜಿ ಮಹಾರಾಜರು ಶತ್ರುಗಳ ಮೇಲೆ ನಿಗಾ ಇಡಲು ಬಳಸುತ್ತಿದ್ದರೆಂದು ಹೇಳಲಾಗುತ್ತದೆ. ದೂರದರ್ಶಕ ಬಳಕೆಯ ಮೂಲಕ ಈ ಕೋಟೆಯಿಂದ ಸವದತ್ತಿ ಮತ್ತು ಬೈಲಹೊಂಗಲ ತಾಲೂಕಿನ ವರೆಗಿನ ಭೂಮಿಯ ಮಟ್ಟದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಬಹುದು.

ಕೋಟೆಯ ಅಭಿವೃದ್ಧಿಗಾಗಿ ಸ್ಥಳೀಯ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿ ಸಾರ್ವಜನಿಕರಿಂದಲೇ ವಂತಿಕೆ ಸಂಗ್ರಹಿಸುವುದಾಗಿ ಕಳೆದ ವರ್ಷ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದರು. ಶಾಸಕರ ನಿಧಿಯಿಂದಲೂ ಹಣವನ್ನು ಹೊಂದಿಸುವುದಾಗಿ ತಿಳಿಸಿದ್ದರು. ಈಗ ಸರ್ಕಾರ ಅನುದಾನ ಬಿಡುಗಡೆ ಮಾಡಿರುವುದರಿಂದ ಸಾರ್ವಜನಿಕರಿಂದ ವಂತಿಕೆ ಸಂಗ್ರಹಿಸುವ ಯೋಚನೆಯನ್ನು ಕೈಬಿಡುವ ಸಾಧ್ಯತೆ ಇದೆ.

ಹಲವಾರು ಕೊರತೆಗಳ ನಡುವೆಯೂ, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಕೋಟೆಯತ್ತ ಆಕರ್ಷಣೆಗೊಳ್ಳುತ್ತಿದ್ದು,  ವಿಶೇಷವಾಗಿ ವಾರದ ರಜೆ ದಿನಗಳಲ್ಲಿ ಕೋಟೆಯತ್ತ ಬರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸಿದರೆ ಕೋಟೆಯು ಈ ಭಾಗದ ಮಹತ್ವದ ಪ್ರವಾಸಿ ತಾಣವಾಗುವುದರಲ್ಲಿ ಅನುಮಾನವಿಲ್ಲ.

 ವರದಿ:- ಯಲ್ಲಪ್ಪ ಮಬನೂರ

 

ಫ್ರೆಶ್ ನ್ಯೂಸ್

Latest Posts

Featured Videos