ಶ್ರೀಕಂಠದತ್ತ ಒಡೆಯರ್ ಪುಣ್ಯಸ್ಮರಣೆ

ಶ್ರೀಕಂಠದತ್ತ ಒಡೆಯರ್ ಪುಣ್ಯಸ್ಮರಣೆ

ಮೈಸೂರು, ಡಿ. 10 :  ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ 6ನೇ ಪುಣ್ಯಸ್ಮರಣೆ ನಗರದಲ್ಲಿ ಮಂಗಳವಾರ ಹಲವೆಡೆ ನಡೆಯಿತು. ಮೈಸೂರು ರಕ್ಷಣಾ ವೇದಿಕೆ ವತಿಯಿಂದ ಇಲ್ಲಿನ ಗನ್ಹೌಸ್ ಸಮೀಪದ ಕುವೆಂಪು ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಸೇರಿದಂತೆ ಹಲವರು ರಾಜವಂಶಸ್ಥರ ಕೊಡುಗೆಗಳನ್ನು ಸ್ಮರಿಸಿದರು.
‘ಮೈಸೂರು ರಾಜವಂಶಸ್ಥರ ಕೊಡುಗೆಗಳನ್ನು ಹೇಳುತ್ತಾ ಹೋದರೆ ದಿನಗಳೇ ಸಾಲದು’ ಎಂದು ಸಿಪಿಕೆ ಶ್ಲಾಘಿಸಿದರು.
ಭಾರತದಲ್ಲೇ ಮೈಸೂರು ಸಂಸ್ಥಾನ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಕನ್ನಡ ಮತ್ತು ಸಾಹಿತ್ಯಕ ಪರಂಪರೆಗೆ ಕೊಡುಗೆ ನೀಡಿದೆ ಎಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಜನಪರ ಕಾರ್ಯಕ್ರಮಗಳನ್ನು, ಜಯಚಾಮರಾಜ ಒಡೆಯರ್ ಅವರು ಸಂಗೀತ ಕೃತಿಗಳನ್ನು ರಚಿಸುವ ಮೂಲಕ ಕೊಡುಗೆ ನೀಡಿದರೆ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಈ ಪರಂಪರೆಯನ್ನು ಮುಂದುವರಿಸಿರು ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಮಾತನಾಡಿ, ‘ಮೈಸೂರಿನ ಸಂಸದರಾಗಿ, ರಾಜ್ಯ ಕ್ರಿಕೆಟ್ ಸಂಸ್ಥೆಯ ಬೆಳವಣಿಗೆಯಲ್ಲಿ ಪ್ರಧಾನ ಪೋಷಕರಾಗಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಾಡಿಗೆ ಕೊಡುಗೆ ನೀಡಿದ್ದಾರೆ’ ಎಂದು ತಿಳಿಸಿದರು.
ದಸರಾ ಮಹೋತ್ಸವದ ಧಾರ್ಮಿಕ ಪರಂಪರೆಯನ್ನು ಭಕ್ತಿ, ಗೌರವಗಳಿಂದ ಮುನ್ನಡೆಸಿದ ಕೀರ್ತಿಯೂ ಇವರಿಗೆ ಸಲ್ಲಬೇಕು. ಇವರೊಬ್ಬ ನಿರ್ಗರ್ವಿ, ಜನಮುಖಿ, ಎಲ್ಲರನ್ನೂ ಸಮಾನವಾಗಿ ಕಾಣುವ ಮನೋಭಾವದವರಾಗಿದ್ದರು ಎಂದು ಹೇಳಿದರು.
ವೈದ್ಯ ಡಾ.ಎಸ್.ಪಿ.ಯೋಗಣ್ಣ, ಮೈಸೂರು ರಕ್ಷಣಾ ವೇದಿಕೆಯ ಅಧ್ಯಕ್ಷ ಮೈ.ಕಾ.ಪ್ರೇಮಕುಮಾರ್, ಉಪಾಧ್ಯಕ್ಷ ಕುಮಾರ್ಗೌಡ, ಮುಖಂಡರಾದ ರವಿ, ಗುರುರಾಜ್, ಪ್ರಮೋದ್, ಯುವ ಮುಖಂಡ ಸ್ವರೂಪ್ ಹಾಗೂ ಇತರರು ಭಾಗವಹಿಸಿದ್ದರು.
ಕರ್ನಾಟಕ ರಾಜ್ಯ ಅರಸು ಮಹಾಸಭಾದ ವತಿಯಿಂದ ಮಧುವನದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರನ್ನು ಸ್ಮರಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos