ಕಾಫಿ ಡೇ ಸಾಮ್ರಾಟ ಕೊನೆ ಕಾಲ್ ನಲ್ಲಿ ಹೇಳಿದ್ದೇನ?

ಕಾಫಿ ಡೇ ಸಾಮ್ರಾಟ ಕೊನೆ ಕಾಲ್ ನಲ್ಲಿ ಹೇಳಿದ್ದೇನ?

ಬೆಂಗಳೂರು, ಜು. 31: ಮಲೆನಾಡಿನ ಕಾಫಿ ಘಮವನ್ನು ಪ್ರಪಂಚದ ತುಂಬೆಲ್ಲಾ ಪಸರಿಸಿದ್ದ ವಿ.ಜಿ. ಸಿದ್ದಾರ್ಥ ಹೆಗ್ಡೆ ದುರಂತ ಅಂತ್ಯ ಕಂಡಿದ್ದಾರೆ. ಹೌದು  ಕಾಫಿ ಡೇ ಸಾಮ್ರಾಟ ಸಿದ್ಧಾರ್ಥ ಅವರು ನಮ್ಮನ್ನೆಲ್ಲ ಅಗಲಿದ್ದಾರೆ. ಸೋಮವಾರ ಸಂಜೆ 6.06 ಕ್ಕೆ ಸಿದ್ಧಾರ್ಥ ಕರೆ ಮಾಡಿದಾಗ ಆತಂಕದಲ್ಲಿದ್ದಂತೆ ಭಾಸವಾಯಿತು. ಆದರೆ, ಈ ರೀತಿ ಮಾಡಿಕೊಳ್ಳುತ್ತಾರೆ ಎಂದು ಎಣಿಸಿರಲೇ ಇಲ್ಲ ಎಂದು ಅವರ ಕಂಪನಿಯ ಸಿಬ್ಬಂದಿ ಜಾವೇದ್ ಪರ್ವೇಜ್ ಹೇಳಿದ್ದಾರೆ.

ಸಿದ್ಧಾರ್ಥ್ ಕಣ್ಮರೆಯಾಗುವ ಮುನ್ನ ದೂರವಾಣಿ ಮೂಲಕ ಮಾತನಾಡಿದ ಕಡೆಯ ವ್ಯಕ್ತಿಯಾಗಿದ್ದರು ಪರ್ವೇಜ್.

ನಮ್ಮಿಬ್ಬರ ಮಾತುಕತೆ ಕೇವಲ 58 ಸೆಕೆಂಡುಗಳದ್ದಾಗಿತ್ತು ಮತ್ತು ದೈನಂದಿನ ವಿಚಾರಗಳ ಬಗ್ಗೆ ಮಾತನಾಡಿದೆವು. ಆ ಸಮಯದಲ್ಲಿ ಸಿದ್ಧಾರ್ಥ್ ಹೀಗೆ ಮಾಡಿಕೊಳ್ಳುತ್ತಾರೆ ಎಂದು ನನ್ನ ಅರಿವಿಗೇ ಬರಲಿಲ್ಲ ಎಂದು ಪರ್ವೇಜ್ ತಿಳಿಸಿದ್ದಾರೆ.

ಸಿದ್ಧಾರ್ಥ್ ನನ್ನೊಂದಿಗೆ ಮಾತನಾಡುವಾಗ ಅವರ ಧ್ವನಿ ಸಾಮಾನ್ಯವಾಗಿ ಗಟ್ಟಿಯಾಗಿರುತ್ತದೆ. ಆದರೆ, ಅಂದು ಮಾತನಾಡುವಾಗ ಸ್ವಲ್ಪ ಭಿನ್ನವಾಗಿತ್ತು ಮತ್ತು ಅವರ ಧ್ವನಿ ಆತಂಕಕ್ಕೀಡಾದವರಂತೆ ಕಂಡುಬಂದಿತ್ತು. ಅವರನ್ನು ನಿಜಕ್ಕೂ ಏನು ಬಾಧಿಸುತ್ತಿತ್ತು ಎಂಬುದು ನನಗೆ ಗೊತ್ತಿಲ್ಲ ಮತ್ತು ಎಲ್ಲವೂ ಸರಿ ಹೋಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನ ಮಾಡಿದೆ. ಆದರೆ, ಏನಾಗುತ್ತಿದೆ ಎಂಬುದು ನಿನಗೆ ಅರ್ಥವಾಗುತ್ತಿಲ್ಲ ಎಂದರು. ಮಾರುಕಟ್ಟೆ ಕಠಿಣವಾಗುತ್ತಿದೆ. ನೀನು ಹಣಕಾಸು ವ್ಯವಹಾರ ನೋಡಿಕೋ ಎಂದು ನನಗೆ ಹೇಳಿದರು ಎಂದು ಪರ್ವೇಜ್ ಹೇಳಿದ್ದಾರೆ.

ಅಂದು ಬೆಳಗ್ಗೆಯಿಂದ ಸಿದ್ಧಾರ್ಥ ಅವರೊಂದಿಗೆ ನಾಲ್ಕು ಬಾರಿ ಫೋನಿನಲ್ಲಿ ಮಾತನಾಡಿದ್ದೆ. ಅವೆಲ್ಲವೂ ವ್ಯವಹಾರಕ್ಕೆ ಸಂಬಂಧಿಸಿದ್ದವಾಗಿದ್ದವು. ಆದರೆ, ಸಂಜೆ 6.06 ಕ್ಕೆ ಬಂದ ಕರೆಯಲ್ಲಿ ಮಾತ್ರ ಸಿದ್ಧಾರ್ಥ ಆತಂಕಕ್ಕೆ ಒಳಗಾದವರಂತೆ ಮತ್ತು ಅಸಹಾಯಕರಂತೆ ಮಾತನಾಡಿದರು ಎಂದು ಪರ್ವೇಜ್ ತಮ್ಮ ಮತ್ತು ಸಿದ್ಧಾರ್ಥ ನಡುವಿನ ಕೊನೆಯ ಸಂಭಾಷಣೆಯ ವಿವರವನ್ನು ನೀಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos