ಸಾರ್ವಜನಿಕರೇ ನಿರ್ಮಿಸಿದ ರಸ್ತೆ

ಸಾರ್ವಜನಿಕರೇ ನಿರ್ಮಿಸಿದ ರಸ್ತೆ

ಬೆಂಗಳೂರು, ಅ. 21: ಕಳೆದ ನಾಲ್ಕು ವರ್ಷಗಳಿಂದ ಜನಪ್ರತಿನಿಧಿಗಳು, ಪಾಲಿಕೆ ಅಧಿಕಾರಿಗಳಿಗೆ ಮನವಿ ನೀಡಿದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ನಿವಾಸಿಗರೇ ತಮ್ಮಗಳ ಸ್ವಂತ ಖರ್ಚಿನಲ್ಲಿ ರಸ್ತೆ ಮಾಡಿಸಿಕೊಂಡು ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಂಡಿದ್ದಾರೆ.

ಕಾಡುಗೋಡಿಯಿಂದ ಅಟಲ್ ಬಿಹಾರಿ ವಾಜಪೇಯಿ ಮುಖ್ಯ ರಸ್ತೆಯಿಂದ ಚನ್ನಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಒಂದು ಕಿಮೀ ಉದ್ದದ ಮಣ್ಣಿನ ರಸ್ತೆಗೆ ಡಾಂಬರು ಹಾಕಿಸುವಂತೆ ನಿವಾಸಿಗಳು ಶಾಸಕರು, ಪಾಲಿಕೆ ಸದಸ್ಯರು, ಅಧಿಕಾರಿಗಳನ್ನು ಕಾಡಿ ಬೇಡಿದರೂ ಪ್ರಯೋಜನವಾಗಿರಲಿಲ್ಲ. ಕೃಷ್ಣಕುಟೀರ ಮತ್ತು ಮಲೀಬುರೈಸಿಂಗ್ ನಿವಾಸಿಗಳ ರಸ್ತೆ ದುರಸ್ತಿ ಮಾಡಿಕೊಂಡ ಯಶಸ್ಸಿನ ಕಥೆಯಿದು. ಮಳೆ ಬಂದರೆ ಸಾಕು,ಮಣ್ಣಿನ ರಸ್ತೆಯಾದ್ದರಿಂದ ರಸ್ತೆಯಲ್ಲಿ ನೀರು ತುಂಬಿಕೊಂಡು ಕೆಸರಿನ ರಾಡಿಯಾಗುತ್ತಿತ್ತು.

ಎಲ್ಲೆಂದರಲ್ಲೇ  ದ್ವಿಚಕ್ರ ವಾಹನಗಳು ಸಿಲುಕುತ್ತಿದ್ದವು. ಮಳೆ ಬಂತೆಂದರೆ ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗುತ್ತಿತ್ತು. ಮಳೆ ಬಂದಾಗ ಕೆಸರು ಗದ್ದೆಯಾದರೆ, ಬೇಸಿಗೆಯಲ್ಲಿ ಕೆಂದೂಳಿನ ಅಭಿಷೇಕವಾಗಿ  ಇಲ್ಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಕೃಷ್ಣ ಕುಟೀರದಲ್ಲಿ 47 ವಿಲ್ಲಾಗಳು, ರೈಸಿಂಗ್ ಸಿಟಿಯ ಅಪಾರ್ಟ್ಮೆಂಟ್‌ನಲ್ಲಿ 150 ಫ್ಲಾಟ್‌ಗಳ ಮಾಲೀಕರು ಮತ್ತು ಇಲ್ಲಿನ ನಿವಾಸಿಗಳಿಂದ ತಲಾ ಐದುನೂರು ರೂ.ಗಳಂತೆ ವಂತಿಗೆ ಸಂಗ್ರಹಿಸಿ 2 ಲಕ್ಷ ರೂ. ಸಂಗ್ರಹ ಮಾಡಲಾಯಿತು.

ರಸ್ತೆ ದುರಸ್ತಿ ಆರಂಭಿಸಿ ದಪ್ಪ ಜಲ್ಲಿ, ವೆಟ್ ಮಿಕ್ಸ್, ಜಲ್ಲಿ ಪುಡಿ ಹಾಕಿ ರಸ್ತೆಯನ್ನು ಸಮತಟ್ಟು ಮಾಡಿ, ನಂತರ ಬೇಬಿ ಜಲ್ಲಿ, ಸಿಮೆಂಟ್ ಹಾಗೂ ವೆಟ್ ಮಿಕ್ಸ್ನೊಂದಿಗೆ ಮಿಶ್ರಣ ಮಾಡಿ ರಸ್ತೆಗೆ ಹರಡಿ ವೈಬ್ರೇಟರ್‌ನಿಂದ ಸಮತಟ್ಟುಗೊಳಿಸಲಾಗಿದೆ. ವಾಹನಗಳು ಸೇರಿದಂತೆ ಪಾದಚಾರಿ ಜನರೂ ಕೂಡಾ ಮಳೆ ಬಂದ ಸಂದರ್ಭಗಳಲ್ಲಿ ಓಡಾಡಲು ಸಾದ್ಯವಾಗುತ್ತಿರಲಿಲ್ಲ. ಅಂತಹ ಹದಗೆಟ್ಟ  ಸುಮಾರು 400 ರಿಂದ 7೦೦ ಮೀಟರ್ ಉದ್ದದ ರಸ್ತೆಯನ್ನು ಸಾರ್ವಜನಿಕರೇ ನಿರ್ಮಿಸಿಕೊಂಡಿದ್ದಾರೆ.

ಕೆಸರು ಮತ್ತು ಧೂಳಿನಿಂದ ಬೇಸತ್ತಿದ್ದ ಇಲ್ಲಿನ ನಿವಾಸಿಗಳೀಗ ಯಾವುದೇ ಸಮಸ್ಯೆಗಳಿಲ್ಲದೆ ನೆಮ್ಮದಿಯಿಂದ ಓಡಾಡುತ್ತಿದ್ದಾರೆ. ಮಲುಬು ರೈಸಿಂಗ್ ಸಿಟಿಯ ಜನತೆ ನಮ್ಮೊಂದಿಗೆ ಕೈಜೋಡಿಸಿದ್ದರಿಂದ ಕಳೆದ ನಾಲ್ಕು ವರ್ಷಗಳಿಂದ ಅಧ್ವಾನವಾಗಿದ್ದ ರಸ್ತೆಯನ್ನು ಯಶಸ್ವಿಯಾಗಿ ದುರಸ್ತಿ ಮಾಡಲು ಸಾದ್ಯವಾಯಿತು. ಮಳೆಗಾಲ ಬಂತೆಂದರೆ ಈ ರಸ್ತೆಯಲ್ಲಿ ಕಾರುಗಳು ಒಮ್ಮೆ ಸಂಚರಿಸಿದರೆ, ನೀರಿನಿಂದ ತೊಳೆಯಬೇಕಿತ್ತು. ಹಾಗಾಗಿ ಸುಮಾರು ಜನ ಇಲ್ಲಿ ಕಾರುಗಳನ್ನೇ  ಓಡಿಸುತ್ತಿರಲಿಲ್ಲ. ತೀವ್ರ ತೊಂದರೆ ಅನುಭವಿಸಿದ ಮೇಲೆ ಅಂದರೆ ಕೆಟ್ಟ ಮೇಲೆ ಬುದ್ಧಿ ಬಂತು ಅಂದ ಹಾಗೆ ನಾವೇ ರಸ್ತೆ ದುರಸ್ತಿ ಮಾಡಿಕೊಂಡಿದ್ದೇವೆ.

ಮಹಾನಗರ ಪಾಲಿಕೆ ಇದೇ ರಸ್ತೆಯನ್ನು ದುರಸ್ತಿ ಮಾಡಿದ್ದರೆ15 ಲಕ್ಷ ರೂ. ಖರ್ಚು ಮಾಡುತ್ತಿತ್ತು. ನಾವು ಕೇವಲ ೨ ಲಕ್ಷ ರೂ.ಗಳಲ್ಲಿ ರಸ್ತೆಯನ್ನು ಸಿಮೆಂಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿದ್ದೇವೆ. ಕಾರ್ಮಿಕರೊಂದಿಗೆ ನಾವೆಲ್ಲರೂ ಕೆಲಸ ಮಾಡಿ ಒಂದು ವಾರ ಮಾಡಬೇಕಿದ್ದ ಕೆಲಸವನ್ನು ಎರಡೇ ದಿನದಲ್ಲಿ ಪೂರ್ಣಗೊಳಿಸಿದ್ದೇವೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos