ಯೋಗ್ಯ ವಯಸ್ಸಿನಲ್ಲಿ ಮದುವೆಯಾಗಿ..ಇಲ್ಲಾಂದ್ರೆ ?

ಯೋಗ್ಯ ವಯಸ್ಸಿನಲ್ಲಿ ಮದುವೆಯಾಗಿ..ಇಲ್ಲಾಂದ್ರೆ ?

ವಯಸ್ಸಿಗೆ ಬಂದ ಹುಡುಗರಿಗೆ ಮದುವೆಯಾಗಲು ಹುಡುಗಿಯರು ಸಿಗದಿರುವುದು ಸಮಸ್ಯೆಯಾಗಿ ಪರಿಣಮಿಸಿದೆ. ಹಲವು ಕಾರಣಗಳಿಂದಾಗಿ ಪುರುಷರು ಮತ್ತು ಮಹಿಳೆಯರು ಈಗೀಗ ತಡವಾಗಿ ಮದುವೆಯಾಗುತ್ತಿರುವುದು ಕಂಡು ಬರುತ್ತಿದೆ.

ಇತ್ತೀಚೆಗಿನ ದಿನಗಳಲ್ಲಿ ಇದು ದಾಂಪತ್ಯ ಜೀವನದಲ್ಲಿ ಅಷ್ಟೇ ಮಾತ್ರವಲ್ಲ ಸಂತಾನೋತ್ಪತ್ತಿಯಲ್ಲಿಯೂ ಕೆಲವೊಂದು ತೊಂದರೆಗಳನ್ನು ನೀಡುತ್ತಿದೆ ಎಂಬುದು ಹಲವು ವಿಚಾರಗಳಲ್ಲಿ ಸಾಬೀತಾಗಿದೆ. ಇಷ್ಟಕ್ಕೂ ವಯಸ್ಸು ಮೀರಿದರೆ ವಂಶಾವಳಿ ಮೇಲೆ ಏನೆಲ್ಲ ಕೆಟ್ಟ ಪರಿಣಾಮ ಬೀರುತ್ತದೆ. ಏನೇನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಖ್ಯಾತ ವೈದ್ಯರಾದ ಡಾ.ದೇವಿಕಾ ಗುಣಶೀಲ ಅವರು ಹೇಳಿದ್ದಾರೆ. ಅವರು ಏನು ಹೇಳಿದ್ದಾರೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

ಪುರುಷರಲ್ಲಿ ವಯಸ್ಸಾಗುತ್ತಿದ್ದಂತೆ ವಂಶಾವಳಿಯ ಮೇಲೆ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ಅನೇಕ ಅಧ್ಯಯನಗಳಾಗಿವೆ. ಅಂದರೆ, ತಂದೆಗೆ ವಯಸ್ಸಾಗುತ್ತಿದ್ದಂತೇ ಹುಟ್ಟುವ ಮಗುವಿಗೆ ಮುಂದೆ ಮಾರ್ಫನ್ ಸಿಂಡ್ರೋಮ್, ಪಾಲಿಫಾರ್ಮೇಶನ್ ಇನ್ ಲಾರ್ಜ್ ಬಾವೆಲ್ ಮುಂತಾದ ಸಿಂಡ್ರೋಮ್‍ಗಳು ಕಾಣಿಸಿಕೊಳ್ಳಬಹುದು. ವಿಷಯವನ್ನು ಆಳವಾಗಿ ನೋಡುವುದಾದರೆ, ತಂದೆಯಾಗುವ ಪ್ರಕ್ರಿಯೆಯಲ್ಲಿ ವಯಸ್ಸಾದಂತೆ ಹುಟ್ಟುವ ಮಕ್ಕಳಲ್ಲಿ ಇಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಅಧ್ಯಯನದ ಪ್ರಕಾರ 30-34ವಯಸ್ಸಿನ ಅವಧಿಯಲ್ಲಿ ತಂದೆಯಾಗುವವರ ಮಕ್ಕಳಲ್ಲಿ 1000ಕ್ಕೆ ಒಂದು ಮಗುವಿಗೆ, 40-45ವಯಸ್ಸಿನಲ್ಲಿ ತಂದೆಯಾದರೆ ಅಂಥವರಲ್ಲಿ 1000ಕ್ಕೆ 4 ಅಥವಾ 5 ಮಕ್ಕಳಿಗೆ ಹಾಗೂ 45 ವಯಸ್ಸಿನ ನಂತರ ತಂದೆಯಾದರೆ 1000ಕ್ಕೆ 37 ಮಕ್ಕಳಿಗೆ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು!

ಮಕ್ಕಳಲ್ಲಿ ಅನುವಂಶೀಯವಾಗಿ ಕಾಣಿಸಿಕೊಳ್ಳುವ ಅನೇಕ ತೊಂದರೆಗಳಿಗೆ ತಂದೆಯಾಗುವಾಗಿನ ವಯಸ್ಸು 40 ದಾಟಿರುವುದೇ ಕಾರಣ ಶೇ.33ರಷ್ಟು ಮಕ್ಕಳಿಗೆ ಮೇಲ್ಕಾಣಿಸಿದ ತೊಂದರೆಗಳು ಹೀಗಾದಾಗ ಕಾಣಿಸಿಕೊಳ್ಳುತ್ತವೆ ಎಂದು ಫ್ರೈಡ್‍ಮನ್ ತಮ್ಮ ಲೇಖನವೊಂದರಲ್ಲಿ ಹೇಳುತ್ತಾರೆ. ಜೊತೆಗೆ ಮಗುವಿನ ಲೈಂಗಿಕ ಸಾಮಥ್ರ್ಯ ಹಾಗೂ ಹೆಣ್ಣು ಮತ್ತು ಗಂಡಿನ ಅನುಪಾತದ ಮೇಲೂ ತಂದೆಯಾಗುವಾಗಿನ ವಯಸ್ಸು ಪರಿಣಾಮ ಬೀರುತ್ತದೆ.

ಮಹಿಳೆಯರಲ್ಲಿ 25ವರ್ಷ ವಯಸ್ಸಿನ ನಂತರ ಉತ್ಪತ್ತಿಯಾದ ಅಂಡಾಣುವಿನ ಗುಣಮಟ್ಟ ಕಡಿಮೆಯಾಗುತ್ತ ಬರುತ್ತದೆ. ಗರ್ಭದಲ್ಲಿನ ಭ್ರೂಣದ ಮೊದಲ ಹಂತವು ಋತುಚಕ್ರದಲ್ಲಿ ನಷ್ಟವಾಗುವ ಪ್ರಮಾಣ ಹೆಚ್ಚುತ್ತದೆ. ಇದೂ ಒಂದು ರೀತಿಯಲ್ಲಿ ಗರ್ಭಪಾತವೇ ಆಗಿರುತ್ತದೆ. ಋತುಮತಿಯಾದ ಸಂದರ್ಭದಲ್ಲಿ ರಕ್ತಸ್ರಾವದ ಜೊತೆಗೆ ಈ ಬಗೆಯ ಗರ್ಭಪಾತ ಸಂಭವಿಸಿರುತ್ತದೆ. ಸಾಮಾನ್ಯವಾಗಿ ಋತುಚಕ್ರದ 17-18ನೇ ದಿನ ಈ ಪ್ರಕ್ರಿಯೆ ಸಂಭವಿಸಿರುತ್ತದೆ. ಮಹಿಳೆಯರ ಅರಿವಿಗೇ ಬಾರದಂತೆ ಇದು ನಡೆಯುತ್ತದೆ. ಉತ್ಪತ್ತಿಯಾದ ಭ್ರೂಣ ಗರ್ಭಪಾತವಾಗುವ ಅಪಾಯವು ಕಿರಿ ವಯಸ್ಸಿನ ಮಹಿಳೆಯರಲ್ಲಿ ಶೇ. 24ರಷ್ಟು ಮತ್ತು 35 ವರ್ಷ ದಾಟಿದ ಮಹಿಳೆಯರಲ್ಲಿ ಶೇ. 38ರಷ್ಟು ಇರುತ್ತದೆ.

ಅಂಡಾಣುಗಳ ಅಂಶವಷ್ಟೇ ಅಲ್ಲದೇ, ಗರ್ಭದ ಅಂಶಗಳೂ ಕೂಡ ವಯಸ್ಸಾದ ಮಹಿಳೆಯರಲ್ಲಿನ ಬಂಜೆತನದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆ. ಅಂಡಾಣುಗಳನ್ನು ಕಿರಿ ವಯಸ್ಸಿನ ಮಹಿಳೆಯರಿಂದ ಪಡೆದು ವಿಭಿನ್ನ ವಯೋಮಾನದ ಮಹಿಳೆಯರ ಗರ್ಭಾಶಯಕ್ಕೆ ದಾನ ಮಾಡಿದಾಗ ಫಲಿತಾಂಶ ವಿಭಿನ್ನವಾಗಿಯೇ ಇರುತ್ತದೆ. ಉದಾಹರಣೆಗೆ 40 ಅಥವಾ ಅದಕ್ಕಿಂತ ಹೆಚ್ಚಿನ ವಯೋಮಾನದ ಮಹಿಳೆಯರಲ್ಲಿ ಶೇಕಡಾ 10ರಷ್ಟು ಗರ್ಭ ಕಟ್ಟುವವಿಕೆ ಯಶಸ್ವಿಯಾದರೆ, 35ಕ್ಕಿಂತ ಸಣ್ಣ ವಯಸ್ಸಿನ ಮಹಿಳೆಯರಲ್ಲಿ ಇದರ ಯಶಸ್ಸಿನ ಪ್ರಮಾಣ ಶೇಕಡಾ 23ರಷ್ಟು.

ರೂಢಿಗತವಾಗಿ ಹೇಳುವುದಾದರೆ, ಮಹಿಳೆ ಮೊದಲ ಬಾರಿ ಗರ್ಭ ಧರಿಸುವಾಗ 30 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರಬಾರದು. ಆದರೆ ಈಗಿನ ಮಹಿಳೆಯರು ಮಹತ್ವಾಕಾಂಕ್ಷಿಗಳಾಗಿದ್ದಾರೆ. ವೃತ್ತಿಪರರಾಗುತ್ತಿದ್ದಾರೆ. ಮಗುವನ್ನು ಹೆರುವುದು ಮತ್ತು ಅದನ್ನು ನೋಡಿಕೊಳ್ಳುವುದು ದೊಡ್ಡ ಭಾರ ಎನ್ನುವ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಮಗುವನ್ನು ನೋಡಿಕೊಳ್ಳುವುದೆಂದರೆ ತಮ್ಮ ವೃತ್ತಿ ಜೀವನಕ್ಕೆ ತೊಂದರೆ ಹಾಗೂ ಆದಾಯಕ್ಕೂ ತೊಂದರೆ ಎನ್ನುವ ಭಾವನೆ ಹೆಚ್ಚುತ್ತಿದೆ. ವೃತ್ತಿಪರ ಮಹಿಳೆಯರು ತಮ್ಮ ಕುಟುಂಬದ ವಿಸ್ತರಣೆ ತಡವಾಗಲಿ ಎಂದು ಬಯಸಿದರೆ ಅಂಥವರು ತಮ್ಮ ದೇಹಾರೋಗ್ಯವನ್ನು (ಫಲವತ್ತತೆಯನ್ನು) ಸರಿಯಾಗಿ ಕಾಪಾಡಿಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಬೊಜ್ಜು ಬೆಳೆಸಿಕೊಳ್ಳಬಾರದು. ಏಕೆಂದರೆ ಬೊಜ್ಜು ಫಲವತ್ತತೆಯ ವೈರಿ. ಬೊಜ್ಜು ಇರುವ ಮಹಿಳೆಯರಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಿ ಅದು ತಡವಾಗಿ ಗರ್ಭಧಾರಣೆ ಮಾಡಲು ಇಚ್ಛಿಸುವವರಿಗೆ ಅಡ್ಡಿ ಉಂಟುಮಾಡಬಲ್ಲದು. ಧೂಮಪಾನ ಕೂಡ ಮಾರಕ. ಹಾಗೆಯೇ ಅತಿಯಾದ ಮದ್ಯ ಸೇವನೆಯೂ ಋತುಚಕ್ರದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ. ಅತಿಯಾದ ಕಾಫಿ ಸೇವನೆಯೂ ಕೂಡ ತೊಂದರೆದಾಯಕ. ಇದೂ ಮಹಿಳೆಯರ ಫಲವತ್ತತೆಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೇ ಪದೇ ಪದೇ ಗರ್ಭಪಾತ ಆದರೆ ಅಥವಾ ಮಾಡಿಸಿಕೊಂಡರೂ ಮುಂದೆ ಹುಟ್ಟುವ ಮಗುವಿಗೆ ತೊಂದರೆಯಾಗುತ್ತದೆ. ಅನೇಕ ಬಾರಿ ವೃತ್ತಿಪರ ಕಾರಣಗಳಿಗೆ ಮದುವೆಯನ್ನು ಮುಂದೂಡಿದರೆ ಅದು ವಿವಾಹೇತರ ಸಂಬಂಧಗಳಲ್ಲಿ ಅಂತ್ಯವಾಗುವ ಸಾಧ್ಯತೆಗಳಿರುತ್ತವೆ. ಇದು ಅನೇಕ ದೈಹಿಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಇವೆಲ್ಲ ಕಾರಣಗಳಿಗೆ ಗರ್ಭಧಾರಣೆ ಸಮಸ್ಯೆ ಎದುರಾಗಬಹುದು.

ವಯಸ್ಸಾದಂತೆ ಗರ್ಭಧರಿಸಲು ಅಥವಾ ತಂದೆಯಾಗಲು ಬೇಕಾದ ಫಲವತ್ತತೆ ಕಡಿಮೆಯಾಗುತ್ತದೆ ಎಂಬುದು ಸತ್ಯ. 35 ವರ್ಷಕ್ಕಿಂತ ತಡವಾಗಿ ಮದುವೆಯಾಗುವ ಮಹಿಳೆಯರು ಕುಟುಂಬ ಯೋಜನೆಯ ಯಾವುದೇ ಕ್ರಮವನ್ನು ಅನುಸರಿಸದೇ ಇರುವುದು ಒಳ್ಳೆಯದು. ಇಂತಹ ಮಹಿಳೆಯರು ಮದುವೆಯಾದ 6 ತಿಂಗಳಲ್ಲಿ ಗರ್ಭವತಿಯರಾಗದೇ ಇದ್ದರೆ ಕೂಡಲೇ ತಜ್ಞರನ್ನು ಸಂಪರ್ಕಿಸಬೇಕು. ಇಂತಹ ಸನ್ನಿವೇಶದಲ್ಲಿ ಚಿಕಿತ್ಸೆ ಬೇಕಾಗಬಹುದು. ಈ ಸನ್ನಿವೇಶಗಳಲ್ಲಿ ಅಂಡಾಣು ವೃದ್ಧಿಗೆ ಸೂಕ್ತ ಚಿಕಿತ್ಸೆ ಹಾಗೂ ಅಗತ್ಯ ಬಿದ್ದರೆ ಕೃತಕ ಗರ್ಭಧಾರಣೆಯನ್ನೂ ಮಾಡುವ ಸಂದರ್ಭ ಬರಬಹುದು ಆದ್ದರಿಂದ ಎಚ್ಚರವಾಗಿರುವುದು ಒಳಿತು.

ಫ್ರೆಶ್ ನ್ಯೂಸ್

Latest Posts

Featured Videos