ಗಣರಾಜ್ಯೋತ್ಸವ ದಿನಾಚರಣೆ: 10 ಕೈದಿಗಳಿಗೆ ಬಿಡುಗಡೆ

ಗಣರಾಜ್ಯೋತ್ಸವ ದಿನಾಚರಣೆ: 10 ಕೈದಿಗಳಿಗೆ ಬಿಡುಗಡೆ

ಬೆಳಗಾವಿ: ಹಿಂಡಲಗಾ ಕಾರಾಗೃಹದಲ್ಲಿ 14 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿರುವ 10 ಕೈದಿಗಳು ಗಣರಾಜ್ಯೋತ್ಸವ ದಿನಾಚರಣೆಯಂದು ಬಿಡುಗಡೆಗೊಳ್ಳಲಿದ್ದಾರೆ. ಸ್ಥಾಯಿ ಸಲಹಾ ಸಮಿತಿ ಸಭೆಯಲ್ಲಿ ಹತ್ತು ಜನರ ಹೆಸರನ್ನು ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗುತ್ತಿದೆ.

ಹಿಂಡಲಗಾ ಕಾರಾಗೃಹ ಸ್ಥಾಯಿ ಸಲಹಾ ಸಮಿತಿ ಸಭೆಯು ಸನ್ನಡತೆಯ ಆಧಾರದ ಮೇಲೆ ಅವಧಿ ಪೂರ್ವ ಹತ್ತು ಕೈದಿಗಳನ್ನು ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ನಿನ್ನೆ ನಡೆದ ಸಭೆಯಲ್ಲಿ ತೀರ್ಮಾನಿಸಿದ್ದಾರೆ. ರಾಜ್ಯಪಾಲರ ಅಂಕಿತ ದೊರತರೆ ಇದೇ 26ರ ಗಣರಾಜ್ಯೋತ್ಸವದಂದು ಕೈದಿಗಳಿಗೆ ಬಿಡುಗಡೆ ಭಾಗ್ಯ ದೊರೆತು ಜೈಲು ವಾಸದಿಂದ ಮುಕ್ತಿ ಹೊಂದಲಿದ್ದಾರೆ.

ಹಿಂಡಲಗಾದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಪೊಲೀಸ್ ಅಧೀಕ್ಷರು, ಅಧೀಕ್ಷಕರು ಮತ್ತು ಜಿಲ್ಲಾ ಶಸ್ತ್ರ ಚಿಕಿತ್ಸಕರು, ಅಭಿಮನ್ಯು ಎನ್.ಡಿ, ಅನುಶ್ರೀ ದಿನೇಶ ದೇಶಪಾಂಡೆ ಸೇರಿ ಆರು ಸದಸ್ಯರ ಒಳಗೊಂಡ ಸ್ಥಾಯಿ ಸಲಹಾ ಮಂಡಳಿಯು ನಿನ್ನೆ ಸಂಜೆ 5 ಗಂಟೆಯಿಂದ ನಡೆದ ಸಭೆಯ ಮುಂದೆ ಒಟ್ಟು 16 ಕೈದಿಗಳ ಹೆಸರು ಕೇಳಿ ಬಂದಿದ್ದವು.

ಅವರಲ್ಲಿ 2 ಮಹಿಳೆ ಹಾಗೂ 8 ಪುರುಷ ಸೇರಿ ಒಟ್ಟು 10 ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗೆ ಯೋಗ್ಯರೆಂದು ಗುರುತಿಸಿ ಹತ್ತು ಜನರನ್ನು ಆಯ್ಕೆ ಮಾಡುವ ಮೂಲಕ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ರಾಜಪ್ಪ ಕದಲಿ, ಮಹ್ಮದ್ ಹವಾಲ್ದಾರ, ಶ್ರೀರಾಜ ಸಾಂಬರೇಕರ, ಪರ್ನಾಂಡಿಸ್ ಡಿಸೋಜಾ, ಯಲ್ಲಪ್ಪಾ ಹರಿಜನ, ಬಸಯ್ಯ ಹಿರೇಮಠ, ಮಲ್ಲಪ್ಪಾ ಅಕಲನೂರ, ಗಂಗಾದರ ಕಾಡಗೇ, ಲಕ್ಷ್ಮೀ ನಾಯಕ, ರೇಣುಕಾ ಕಮ್ಮಾರ ಎಂಬ ಹೆಸರುಗಳನ್ನು ಸ್ಥಾಯಿ ಸಲಹಾ ಸಮಿತಿ ಮಂಡಳಿ ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದಾರೆ ಎನ್ನಲಾಗಿದೆ.

ಅಪರಾಧ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದ ಕೈದಿಗಳು ಜೈಲಿನ ಒಳಗಡೆ ತಮ್ಮ ನಡತೆಯ ಆಧಾರದ ಮೇಲೆ ಪ್ರತಿವರ್ಷ ಗಣರಾಜ್ಯೋತ್ಸವ ದಿನದಂದು ಬಿಡುಗಡೆಗೊಳ್ಳುವಂತೆ ಈ ಬಾರಿಯೂ ಸಹ ಜ. 26ರಂದು ಬಿಡುಗಡೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ವಿವಿಧ ಕಾರಾಗೃಹಗಳಿಂದ ಬಿಡುಗಡೆ ಮಾಡುವಂತೆ ಹಿಂಡಲಗಾ ಕಾರಾಗೃಹದಿಂದ 10 ಜನ ಕೈದಿಗಳ ಹೆಸರು ಕೇಳಿ ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos