IPL 2024 ಇಂದು RCB vs CSK ಕದನ!

IPL 2024 ಇಂದು RCB vs CSK ಕದನ!

ಚೆನ್ನೈ: 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಚೆನ್ನೈನ ಚಿದಂಬರಂ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಇಂದು ಅದ್ಧೂರಿ ಸಮಾರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.‌

ಇಂದು  ಉದ್ಘಾಟನೆಯಾಗಲಿದ್ದು ಪಂದ್ಯದಲ್ಲಿ 5 ಬಾರಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ 3 ಬಾರಿ ರನ್ನರ್‌ ಅಪ್‌ ಪ್ರಶಸ್ತಿ ಪಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಆರ್‌ಸಿಬಿ ಮತ್ತು ಚೆನ್ನೈ ನಡುವೆ 31 ಪಂದ್ಯಗಳು ನಡೆದಿದ್ದು, 20 ಪಂದ್ಯಗಳಲ್ಲಿ ಚೆನ್ನೈ, 10 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ.

ಇಲ್ಲಿನ ಚೆಪಾಕ್‌ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯ ವಹಿಸಲಿದ್ದು, ಇಲ್ಲಿ 2008ರ ನಂತರ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದಿಲ್ಲ. ಚೊಚ್ಚಲ ಆವೃತ್ತಿಯಲ್ಲಿ ಸಾಧಿಸಿದ ಗೆಲುವೇ ಕೊನೆ, ಆ ಬಳಿಕ ಸತತ 7 ಪಂದ್ಯಗಳಲ್ಲಿ ಸೋಲುಂಡಿರುವ ಆರ್‌ಸಿಬಿ, ಈ ಬಾರಿ ಸೋಲಿನ ಸರಪಳಿ ಕಳಚಲು ಕಾಯುತ್ತಿದೆ.

ಫಾಫ್‌ಗೆ ಚಾಲೆಂಜ್‌: ಚೆನ್ನೈ ಆಟಗಾರನಾಗಿ ಯಶಸ್ಸು ಸಾಧಿಸಿದ್ದ ಫಾಫ್‌ ಡು ಪ್ಲೆಸಿಸ್, ಕಳೆದೆರಡು ಆವೃತ್ತಿಗಳಿಂದ ಆರ್‌ಸಿಬಿ ತಂಡವನ್ನು ಮುನ್ನಡೆಸುತ್ತಿದ್ದು, ಇದೇ ಮೊದಲ ಬಾರಿಗೆ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿಯ ನಾಯಕರಾಗಿ ಆಡಲಿದ್ದಾರೆ. ತಾವು ಸಿಎಸ್‌ಕೆ ತಂಡದಲ್ಲಿದ್ದಾಗ ತಮ್ಮ ಆರಂಭಿಕ ಜೊತೆಗಾರರಾಗಿದ್ದ ಋತುರಾಜ್‌ ಗಾಯಕ್ವಾಡ್‌ ಈಗ ಎದುರಾಳಿ ತಂಡದ ನಾಯಕ. ಡು ಪ್ಲೆಸಿಸ್ ಯಾವ ರೀತಿ ರಣತಂತ್ರಗಳನ್ನು ಹೆಣೆಯಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.

ಕಳೆದ ವರ್ಷ ಚೆನ್ನೈಗೆ 5ನೇ ಐಪಿಎಲ್‌ ಟ್ರೋಫಿ ಗೆಲ್ಲಿಸಿಕೊಟ್ಟ ಬಳಿಕ ಧೋನಿ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 11 ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಧೋನಿ ಮರಳಲಿದ್ದು, ನಾಯಕನಲ್ಲದ ಧೋನಿಯ ಸೇವೆಯನ್ನು ಸಿಎಸ್‌ಕೆ ಹೇಗೆ ಬಳಸಿಕೊಳ್ಳಲಿದೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ.

ಇನ್ನು ಕೊಹ್ಲಿ 2 ತಿಂಗಳುಗಳ ಬಳಿಕ ಮೈದಾನಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಕಳೆದ ವರ್ಷದ ಐಪಿಎಲ್‌ ಬಳಿಕ ಕೊಹ್ಲಿ ಕೇವಲ 2 ಟಿ20 ಪಂದ್ಯಗಳನ್ನಾಡಿದ್ದು, ಈ ವರ್ಷ ಟಿ20 ವಿಶ್ವಕಪ್‌ ದೃಷ್ಟಿಯಿಂದ ಅವರ ಪ್ರದರ್ಶನ ಬಹಳ ಮಹತ್ವ ಪಡೆದುಕೊಂಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos