‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಲು ಸಾರ್ವಜನಿಕರಿಗೆ ಸುವರ್ಣಾವಕಾಶ 

‘ಟಾಕ್ಸಿಕ್’ ಚಿತ್ರದಲ್ಲಿ ನಟಿಸಲು ಸಾರ್ವಜನಿಕರಿಗೆ ಸುವರ್ಣಾವಕಾಶ 

ಬೆಂಗಳೂರು: ಕೆಜಿಎಫ್‌ ಸಿನಿಮಾದ ಮೂಲಕ ದೇಶವಿದೇಶಗಳಲ್ಲಿ ಅಭಿಮಾನಿಗಳನ್ನು ಗಳಿಸಿರುವ ಸ್ಯಾಂಡಲ್‌ವುಡ್‌ ನಟ ಯಶ್‌ ಅವರ ಮುಂಬರುವ ಟಾಕ್ಸಿಕ್‌ ಸಿನಿಮಾದ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ. ಕೆಜಿಎಫ್‌ ಬಳಿಕದ ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಹೊರತುಪಡಿಸಿ ಬೇರೆ ಯಾವ ಕಲಾವಿದರು ನಟಿಸಲಿದ್ದಾರೆ ಎಂಬ ಕುರಿತು ವಿವರ ಲಭ್ಯವಿಲ್ಲ.

ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಗೋವಾದಲ್ಲಿ ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ಆರಂಭವಾಗಿದೆ ಎನ್ನುವ ಗುಸುಗುಸು ಶುರುವಾಗಿದೆ. ಒಟ್ನಲ್ಲಿ ಯಶ್ ಅಂತೂ ಬೀಚ್‌ಗಳ ಊರಿನಲ್ಲಿ ಫ್ಯಾಮಿಲಿ ಸಮೇತ ಬೀಡು ಬಿಟ್ಟಂತೆ ಕಾಣುತ್ತಿದೆ. ಅಲ್ಲೇ ‘ಟಾಕ್ಸಿಕ್’ ಚಿತ್ರತಂಡ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

ಮಲಯಾಳಂ ನಿರ್ದೇಶನದ ಗೀತು ಮೋಹನ್ ದಾಸ್ ‘ಟಾಕ್ಸಿಕ್’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯರಾಗಿ ಕರೀನಾ ಕಪೂರ್ ಹಾಗೂ ಶ್ರುತಿ ಹಾಸನ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗಲಿದೆ. ಮುಂದಿನ ವರ್ಷ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.

ಕೆವಿಎನ್ ಪ್ರೊಡಕ್ಷನ್ಸ್ ಜೊತೆಗೆ ನಟ ಯಶ್ ಕೂಡ ‘ಟಾಕ್ಸಿಕ್’ ಸಿನಿಮಾ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ. ಅಂದಾಜು 180 ಕೋಟಿ ರೂ. ಬಜೆಟ್‌ನಲ್ಲಿ ಈ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಡಿ ಬರಲಿದೆ.

ಗೋವಾ ಹಿನ್ನೆಲೆಯ ಡ್ರಗ್ಸ್ ಮಾಫಿಯಾ ಕಥೆ ಚಿತ್ರದಲ್ಲಿದೆ ಎನ್ನುವ ಊಹಾಪೋಹವೂ ಇದೆ. ಇದೊಂದು ಪೀರಿಯಡ್ ಸಿನಿಮಾ ಎನ್ನಲಾಗ್ತಿದೆ 60, 70 ದಶಕದ ಕಥೆ ಎನ್ನುವ ಅಂತೆ ಕಂತೆ ಸುದ್ದಿ ಹರಿದಾಡ್ತಿದೆ. ಆದರೆ ಕಥೆಯ ಬಗ್ಗೆ ಚಿತ್ರತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಅಂದಹಾಗೆ ಚಿತ್ರತಂಡ ಈಗ ಕಾಸ್ಟಿಂಗ್ ಕಾಲ್ ಮಾಡಿದೆ. ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುವ ಸಹ ಕಲಾವಿದರ ಬೇಟೆಗೆ ಮುಂದಾಗಿದೆ.

ಹೌದು. ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುವ ಅವಕಾಶ ನಿಮಗೂ ಸಿಗಲಿದೆ. ಈ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಿದೆ. ಚಿತ್ರದಲ್ಲಿ ನೀವು ಕಾಣಿಸಿಕೊಳ್ಳಲು ಏನು ಮಾಡಬೇಕು, ಎನ್ನುವ ಬಗ್ಗೆ ವಿವರಿಸಿದೆ. 25 ರಿಂದ 75 ವರ್ಷದೊಳಗಿನ ಪುರುಷರು, 12ರಿಂದ 16 ವರ್ಷದೊಳಗಿನ ಮಕ್ಕಳು, 23ರಿಂದ 65 ವರ್ಷದೊಳಗಿನ ವಯಸ್ಸಿನ ಮಹಿಳೆಯರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಬಹುದು. ನಟಿಸುವ ಆಸಕ್ತಿ ಇರುವವರು ಚಿತ್ರತಂಡ ಹೇಳಿದಂತೆ ಮಾಡಿ ತಮ್ಮ ಪ್ರತಿಭೆಯ ಪರಿಚಯ ಮಾಡಿಕೊಟ್ಟು ‘ಟಾಕ್ಸಿಕ್’ ಚಿತ್ರದಲ್ಲಿ ನಟಿಸುವ ಅವಕಾಶ ಪಡೆಯಬಹುದಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos