ಪೂಜ್ಯ ಮಹಾಪೌರರ ಅಧ್ಯಕ್ಷತೆಯಲ್ಲಿ ಎಲ್ಲ ಶಾಲಾ ಮುಖ್ಯಸ್ಥರುಗಳ ಜೊತೆ ಸಭೆ

ಪೂಜ್ಯ ಮಹಾಪೌರರ ಅಧ್ಯಕ್ಷತೆಯಲ್ಲಿ ಎಲ್ಲ ಶಾಲಾ ಮುಖ್ಯಸ್ಥರುಗಳ ಜೊತೆ ಸಭೆ

ಬೆಂಗಳೂರು, ಜು. 17 : ಪಶ್ಚಿಮ ವಲಯದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ಕಸ ವಿಂಗಡಣೆ, ಪಿಓಪಿ ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಉಪಯೋಗಿಸುವಂತೆ ಹಾಗೂ ನೀರನ್ನು ಪೋಲು ಮಾಡದಂತೆ ಪರಿಸರ ಸಂರಕ್ಷಣೆ ಮಾಡುವ ಕುರಿತು ಪೂಜ್ಯ ಮಹಾಪೌರರ ಅಧ್ಯಕ್ಷತೆಯಲ್ಲಿ ಇಂದು ಮಲ್ಲೇಶ್ವರ ಐಪಿಪಿ ಕೇಂದ್ರದಲ್ಲಿ ಎಲ್ಲ ಶಾಲಾ ಮುಖ್ಯಸ್ಥರ ಜೊತೆ ಸಭೆ ನಡೆಯಿತು. ಸಭೆಯಲ್ಲಿ ಮಾನ್ಯ ಜೆಡಿಎಸ್ ನಾಯಕಿ,  ಪಶ್ಚಿಮ ವಲಯದ ಜಂಟಿ ಆಯುಕ್ತರು, ಮುಖ್ಯ ಇಂಜಿನಿಯರ್ಗಳು, ಪಾಲಿಕೆ ಅಧಿಕಾರಿಗಳು, ಎಲ್ಲ ಶಾಲಾ ಮುಖ್ಯಸ್ಥರುಗಳು ಹಾಗೂ ಇತರೆ ಗಣ್ಯರುಗಳು ಉಪಸ್ಥಿತರಿದ್ದರು.

ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ, ಕಸ ವಿಂಗಡಣೆ, ಪಿಓಪಿ ಗಣೇಶ ಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಉಪಯೋಗಿಸುವುದು, ನೀರು ಮಿತಬಳಕೆ ಹಾಗೂ ಪರಿಸರ ಸಂರಕ್ಷಣೆ ಮಾಡುವ ಕುರಿತು ಪಶ್ಚಿಮ ವಲಯದಲ್ಲಿ ಮುಂದಿನ ವಾರ ಜಾಗೃತಿ ಜಾಥಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಶಾಲಾ ಮುಖ್ಯಸ್ಥರಿಗೆ ಮಹಾಪೌರರು ತಿಳಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಹಾಪೌರರು, ಯಾವುದೇ ವಿಷಯವನ್ನಾಗಲಿ ಶಿಕ್ಷಕರ ಮೂಲಕ ಮಕ್ಕಳಿಗೆ ತಿಳಿಸಿದರೆ ಅದನ್ನು ಕೂಡಲೆ ಅನುಕರಣೆ ಮಾಡುತ್ತಾರೆ. ಈ ನಿಟ್ಟಿನಲ್ಲಿ ಎಲ್ಲಾ ಶಾಲೆಗಳಲ್ಲಿಯೂ ಮಕ್ಕಳಿಗೆ ಪರಿಸರ ಸಂರಕ್ಷಣೆ, ನೀರು ಮಿತಬಳಕೆ, ಪ್ಲಾಸ್ಟಿಕ್ ಬಳಕೆ ನಿಷೇಧ, ಪಿಓಪಿ ಗಣೇಶ ಮೂರ್ತಿ ಬದಲು ಮಣ್ಣಿನ ಮೂರ್ತಿ ಬಳಕೆ ಹಾಗೂ ಕಸ ವಿಂಗಡಣೆ ಮಾಡುವ ಬಗ್ಗೆ ನಿತ್ಯ ಎರಡು ನಿಮಿಷಗಳ ಕಾಲ ಅರಿವು ಮೂಡಿಸಬೇಕು. ಆಗ ಮಕ್ಕಳು ತಮ್ಮ ಮೆನೆ ಹಾಗೂ ಅಕ್ಕ-ಪಕ್ಕದ ಮನೆಯವರಿಗೆ ಮನವರಿಕೆ ಮಾಡುತ್ತಾರೆ ಎಂದು ಹೇಳಿದರು.

ಈ ಮೇಲಿನ ಎಲ್ಲ ಅಂಶಗಳ ಬಗ್ಗೆ ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕಿದೆ. ಅದಕ್ಕೆ ಎಲ್ಲ ಶಾಲಾ ಮಕ್ಕಳ ಸಹಕಾರ ಅವಶ್ಯಕತೆಯಿದೆ. ಈ ಪೈಕಿ ಪಶ್ಚಿಮ ವಲಯದಲ್ಲಿ 33 ಬಿಬಿಎಂಪಿ ಹಾಗೂ ಸುಮಾರು140 ಖಾಸಗಿ ಶಾಲೆಗಳಿದ್ದು, ಎಲ್ಲರೂ ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಶಾಲಾ ಮುಖ್ಯಸ್ಥರುಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವತಿಯಿಂದ ನಗರದ ಎಂಟು ವಲಯಗಳಲ್ಲೂ ಜಾಥಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಸಂಬಂಧ ದಕ್ಷಿಣ ವಲಯದಲ್ಲಿ ಜುಲೈ 20(ಶನಿವಾರ) ರಂದು ಎಲ್ಲ ಶಾಲಾ ಮಕ್ಕಳ ಸಹಯೋಗದಲ್ಲಿ ಜಾಥಾ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಕಾರ್ಯಕ್ರಮ ಆಯಾ ವಾರ್ಡ್ ಪಾಲಿಕೆ ಸದಸ್ಯರುಗಳ ನೇತೃತ್ವದಲ್ಲಿ ನಡೆಯಲಿದೆ.

ಅದೇ ರೀತಿ ಪಶ್ಚಿಮ ವಲಯದಲ್ಲಿ ಮುಂದಿನ ವಾರ ಆಯೋಜಿಸಲಾಗುತ್ತಿದ್ದು, ಈ ಬಗ್ಗೆ ಎಲ್ಲಾ ಶಾಲೆಗಳಿಗೂ ಸುತ್ತೋಲೆ ಕಳುಹಿಸಲಾಗುವುದು ಎಂದರು.

ಪಶ್ಚಿಮ ವಲಯದಲ್ಲಿ ಬರುವ ಎಲ್ಲಾ ಶಾಲೆಗಳ  ಮಕ್ಕಳೂ ಜಾಥಾದಲ್ಲಿ ಪಾಲ್ಗೊಳ್ಳಬೇಕು. ಜಾಥಾ ಸಕ್ರಿಯವಾಗಿ ನಡೆಯಬೇಕೆಂಬ ಉದ್ದೇಶದಿಂದ ಆಯಾ ವಲಯಗಳ ಜಂಟಿ ಆಯುಕ್ತರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗುತ್ತಿದೆ. ಅವರು ಎಲ್ಲಾ ಶಾಲೆಗಳಿಗೂ ಭೇಟಿ ನೀಡಿ ಯಾವ ರೀತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಯಾವ ರಸ್ತೆ ಮಾರ್ಗದಲ್ಲಿ ಸಾಗಬೇಕು ಎಂಬ ಮಾರ್ಗಸೂಚಿಯನ್ನು ನೀಡುತ್ತಾರೆ. ಜೊತೆಗೆ ಪಾಲಿಕೆಯಿಂದಲೇ ಜಾಗೃತಿ ಮೂಡಿಸುವ ನಾಮಫಲಕಗಳನ್ನು ಸಿದ್ಧಪಡಿಸಿ ಮಕ್ಕಳಿಗೆ ವಿತರಿಸಲಾಗುವುದು ಎಂದರು.

 

ಫ್ರೆಶ್ ನ್ಯೂಸ್

Latest Posts

Featured Videos