ಪಕ್ಷಗಳ ಹಣದ ಮೂಲ ಅರಿಯುವ ಅಗತ್ಯ ಮತದಾರರಿಗೆ ಇಲ್ಲವಂತೆ..!

ಪಕ್ಷಗಳ ಹಣದ ಮೂಲ ಅರಿಯುವ ಅಗತ್ಯ ಮತದಾರರಿಗೆ ಇಲ್ಲವಂತೆ..!

ನವದೆಹಲಿ, ಏ. 12, ನ್ಯೂಸ್ ಎಕ್ಸ್ ಪ್ರೆಸ್ : ಚುನಾವಣೆ ಬಾಂಡ್​ಗಳನ್ನು ಹೆಸರು ಬಹಿರಂಗಪಡಿಸದೆಯೇ ನೀಡಲಾಗುತ್ತದೆ. ಯಾವ ಬಾಂಡ್ ಯಾವ ಖರೀದಿದಾರರನ್ನು ತಲುಪುತ್ತದೆ ಎಂಬುದು ಪಕ್ಷ ಇಲ್ಲವೇ ಬ್ಯಾಂಕ್​ಗಳಿಗೆ ತಿಳಿಯುವುದಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿತ್ತು. ರಾಜಕೀಯ ಪಕ್ಷಗಳಿಗೆ ಎಲ್ಲಿಂದ ಹಣ/ ದೇಣಿಗೆ ಬರುತ್ತದೆ ಎಂಬುದರ ಮೂಲವನ್ನು ಮತದಾರರು ತಿಳಿಯುವ ಅಗತ್ಯ ಇಲ್ಲ ಎಂದು ಕೇಂದ್ರ ಸರ್ಕಾರದ ಅಟಾರ್ನಿ ಜನರಲ್​ ಕೆ.ಕೆ. ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ವೇಣುಗೋಪಾಲ್, ಅರ್ಜಿದಾರರಿಗೆ ನೀಡಿದ ಪ್ರತಿಕ್ರಿಯೆಯಲ್ಲಿ, ರಾಜಕೀಯ ಪಕ್ಷಗಳಿಗೆ ಎಲ್ಲಿಂದ ಹಣ ಬರುತ್ತದೆ ಎಂಬುದನ್ನು ಅರ್ಥೈಸಿಕೊಳ್ಳುವ ಅಗತ್ಯ ಮತದಾರರಿಗೆ ಇಲ್ಲ ಎಂದಿದ್ದಾರೆ. ಆದರೆ, ಅರ್ಜಿದಾರರು ಮತದಾರರಿಗೆ ರಾಜಕೀಯ ಪಕ್ಷಗಳ ದೇಣಿಗೆ ತಿಳಿಯಬೇಕು ಎಂದು ಪ್ರತಿಪಾದಿಸಿದ್ದಾರೆ. ಚುನಾವಣೆ ದೇಣಿಗೆ ಸಂಗ್ರಹಕ್ಕೆ ರಾಜಕೀಯ ಪಕ್ಷಗಳು ಚುನಾವಣೆ ಬಾಂಡ್ ಬಳಸುವುದರ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಶುಕ್ರವಾರ ಈ ಬಗ್ಗೆ ಆದೇಶ ಪ್ರಕಟಿಸಲಿದೆ. ಗುರುವಾರವೇ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾಯಾಲಯ ಆದೇಶವನ್ನು ಕಾಯ್ದಿರಿಸಿದೆ. X​ ಅಥವಾ Y ವ್ಯಕ್ತಿಯ ಅರ್ಜಿ ಆಧಾರದ ಮೇಲೆ ಚುನಾವಣೆ ಬಾಂಡ್ ನೀಡುವ ಬ್ಯಾಂಕ್, ಯಾವ ಬಾಂಡ್​ ಅನ್ನು ಅರ್ಜಿದಾರ ಎಕ್ಸ್​ಗೆ ಹಾಗೂ ಯಾವ ಬಾಂಡನ್ನು ಅನ್ನು ವೈ ವ್ಯಕ್ತಿಗೆ ನೀಡಲಾಗಿದೆ ಎಂಬ ಮಾಹಿತಿಯನ್ನು ಹೊಂದಿದೆಯೇ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರ ನೇತೃತ್ವದ ನ್ಯಾಯಪೀಠವು ವೇಣುಗೋಪಾಲ್ ಅವರನ್ನು ಪ್ರಶ್ನಿಸಿತು. ಇದಕ್ಕೆ ಇಲ್ಲ ಎನ್ನುವಂತೆ ಅಟಾರ್ನಿ ಜನರಲ್ ಪ್ರತಿಕ್ರಿಯಿಸಿದರು. ಸಾರ್ವತ್ರಿಕ ಚುನಾವಣೆ ಪೂರ್ಣಗೊಳ್ಳುವವರೆಗೂ ಕಾಯಬೇಕು, ಈ ವಿಚಾರದಲ್ಲಿ ಅಡ್ಡಿಪಡಿಸಬಾರದು ಎಂದು ಅಟಾರ್ನಿ ಜನರಲ್ ವೇಣುಗೋಪಾಲ್ ನ್ಯಾಯಾಲಯವನ್ನು ಕೋರಿದರು. ಮುಂದೆ ಬರುವ ಹೊಸ ಸರ್ಕಾರ ಈ ಕಾರ್ಯಯೋಜನೆಯ ಬಗ್ಗೆ ಪರಿಶೀಲಿಸುತ್ತದೆ ಎಂದಷ್ಟೇ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos