ಮನೆ ಬದಲಿಗೆ ಅಪಾರ್ಟ್ ಮೆಂಟ್‌ಗೆ ವಿರೋಧ

ಮನೆ ಬದಲಿಗೆ ಅಪಾರ್ಟ್ ಮೆಂಟ್‌ಗೆ ವಿರೋಧ

ತುಮಕೂರು:ವಿಶೇಷ ವಸತಿ ಯೋಜನೆಯಡಿಯಲ್ಲಿ ಹಕ್ಕಿಪಕ್ಕಿ ಜನಾಂಗಕ್ಕೆ ಮಂಜೂರಾಗಿರುವ ಜಾಗದಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಿಕೊಡದೆ ನಿವೇಶನ ವಿಂಗಡಿಸಿ ಅವರವರ ಹೆಸರಿಗೆ ಹಕ್ಕುಪತ್ರ ವಿತರಿಸುವ ಜತೆಗೆ ಮನೆ ಕಟ್ಟಿಕೊಡಬೇಕು ಎಂದು ಆಗ್ರಹಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಹಾಗೂ ಹಕ್ಕಿಪಿಕ್ಕಿ ಯುವಕರ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಸಮಾವೇಶಗೊಂಡ ದಸಂಸ ಹಾಗೂ ಹಕ್ಕಿಪಿಕ್ಕಿ ಯುವಕ ಸಂಘದ ಪದಾಧಿಕಾರಿಗಳು ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ನಿವೇಶನ ಹಕ್ಕುಪತ್ರ ವಿತರಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ದಸಂಸ ಅಧ್ಯಕ್ಷ ಪಿ.ಎನ್. ರಾಮಯ್ಯ, ತುಮಕೂರು ತಾಲ್ಲೂಕಿನ ಕಸಬಾ ಹೋಬಳಿ ಅರಕೆರೆ ಅಮಲಾಪುರ ಕೇಂದ್ರೀಯ ವಿದ್ಯಾಲಯದ ಬಳಿ ಸರ್ಕಾರಿ ಜಮೀನಿನಲ್ಲಿ ಗುಡಿಸಲು ಹಾಕಿಕೊಂಡು ಹಕ್ಕಿಪಿಕ್ಕಿ ಜನಾಂಗದ ೩೨ ಕುಟುಂಬಗಳು ವಾಸವಾಗಿವೆ. ಇವರಿಗೆ ವಿಶೇಷ ಯೋಜನೆಯಡಿ ಅಮಲಾಪುರ ಗ್ರಾಮಕ್ಕೆ ಸೇರಿದ ಸ.ನಂ. ೩೧ ರಲ್ಲಿ ೧.೩೦ ಎಕರೆ ಜಮೀನು ಈ ಜನಾಂಗಕ್ಕೆ ಮಂಜೂರಾಗಿದೆ. ಈ ಹಿಂದೆ ಇದ್ದ ಜಿಲ್ಲಾಧಿಕಾರಿಗಳ ಕಾಲದಲ್ಲಿ ಅಸಸ್‌ಮೆಂಟ್‌ನಲ್ಲಿ ಅಪಾರ್ಟ್ಮೆಂಟ್ ನಿರ್ಮಿಸಲಾಗುತ್ತದೆ ಎಂದು ನಮೂದಾಗಿದೆ. ಆದರೆ ಇವರುಗಳಿಗೆ ನಿವೇಶನ ವಿಂಗಡಿಸಿ ಒಬ್ಬೊಬ್ಬರಿಗೆ ಒಂದೊಂದು ಮನೆ ನಿರ್ಮಿಸಿಕೊಟ್ಟು ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಈಗ ಮಂಜೂರಾಗಿರುವ ಸ್ಥಳದಲ್ಲಿ ಮೂಲ ಸೌಕರ್ಯವಿಲ್ಲದೆ ಕುಡಿಯುವ ನೀರು, ಬೀದಿದೀಪ, ರಸ್ತೆ, ಚರಂಡಿ ಯಾವುದೂ ಇಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಹೆಚ್ಚು ಜನ ವೃದ್ದರಿದ್ದಾರೆ. ಈಗಿರುವ ಜಾಗದಲ್ಲಿ ಗಿಡಗಂಟೆ ಬೆಳೆದಿದ್ದು, ಹಳ್ಳಕೊಳ್ಳದಿಂದ ಕೂಡಿದೆ. ಮಳೆ ಬಂದರೆ ನೀರು ತುಂಬಿಕೊಳ್ಳುತ್ತದೆ. ಆದ್ದರಿಂದ ತುರ್ತಾಗಿ ಇವರಿಗೆ ಅಪಾರ್ಟ್ಮೆಂಟ್ ಕಟ್ಟಿಕೊಡುವುದರ ಬದಲು ಪ್ರತಿಯೊಬ್ಬರಿಗೂ ಒಂದೊಂದು ನಿವೇಶನ ವಿಂಗಡಿಸಿ ಮನೆ ನಿರ್ಮಿಸಿಕೊಟ್ಟು ಅವರು ನೆಮ್ಮದಿಯಿಂದ ಜೀವನೋಪಾಯ ನಡೆಸಲು ಅನುಕೂಲು ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos