ನನ್ನ ಜೊತೆ ಚರ್ಚೆಗೆ ಬನ್ನಿ, 8 ತಿಂಗಳಲ್ಲಿ ನಾನೇನು ಮಾಡಿದ್ದೇನೆಂದು ಉತ್ತರಿಸುತ್ತೇನೆ: ಸಿಎಂ

ನನ್ನ ಜೊತೆ ಚರ್ಚೆಗೆ ಬನ್ನಿ, 8 ತಿಂಗಳಲ್ಲಿ ನಾನೇನು ಮಾಡಿದ್ದೇನೆಂದು ಉತ್ತರಿಸುತ್ತೇನೆ: ಸಿಎಂ

ಚಿಕ್ಕಮಗಳೂರು, ಮಾ.7, ನ್ಯೂಸ್ ಎಕ್ಸ್ ಪ್ರೆಸ್: ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಕಳೆದ 8 ತಿಂಗಳಲ್ಲಿ ನಾನೇನು ಮಾಡಿದ್ದೇನೆ. ನಾಲ್ಕೂವರೆ ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಏನು ಮಾಡಿದ್ದಾರೆ ಎಂಬುದನ್ನು ತಿಳಿಯಲು ನನ್ನ ಜೊತೆ ಚರ್ಚೆಗೆ ಬರಲಿ, ಆಗ ಉತ್ತರಿಸುತ್ತೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೋದಿ ವಿರುದ್ಧ ಗುಡುಗಿದ್ದಾರೆ.

ಇಂದು ಶೃಂಗೇರಿಗೆ ಕುಟುಂಬ ಸಮೇತ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ರೈತರ ಪರವಾಗಿ ಇದ್ದೇನೆ. ಮೋದಿ ಇದುವರೆಗೂ ರೈತರ ಸಾಲ ಮನ್ನಾ ಮಾಡಲಾಗದೆ ರೈತರ ವಿರೋಧಿಯಾಗಿದ್ದಾರೆ. ರೈತರ ಸಾಲ ಮನ್ನಾ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ.

ಪ್ರಧಾನಿ ಮೋದಿಯವರು ಸಿಎಂ ರಿಮೋಟ್ ಕಂಟ್ರೋಲ್ ಎಂದಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಯಾವ ಯಾವ ಕಾರ್ಯಕ್ರಮ ರೂಪಿಸಬೇಕೆಂಬುದನ್ನು ಈ ಮೊದಲೇ ಸಿದ್ಧಪಡಿಸಿದ್ದೇವೆ. ಅದರಂತೆ ಕಾರ್ಯಕ್ರಮಗಳು ನಡೆಯಬೇಕೆಂದು ಶಾಸಕರು ಒತ್ತಾಯಿಸುತ್ತಾರೆ. ಅದಕ್ಕೇ ನಮ್ಮ ಸ್ನೇಹಿತರು ನನ್ನನ್ನು ರಿಮೋಟ್ ಮಾಡಿಕೊಂಡಿದ್ದಾರೆ ಎಂದು ಹಾಸ್ಯ ಚಟಾಕಿ ಸಿಡಿಸಿದರು.

ರಾಜ್ಯದ ಬಿಜೆಪಿ ಮುಖಂಡರು ಪ್ರಧಾನಿ ಅವರಿಗೆ ನೀಡಿರುವ ಮಾಹಿತಿಯನ್ನು ಆಧರಿಸಿ ಅವರು ಭಾಷಣ ಮಾಡುತ್ತಾರೆ. ಅದು ಸಂತೆಯಲ್ಲಿ ಮಾಡಿದ ಭಾಷಣದಂತೆ. ಎಲ್ಲದಕ್ಕೂ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದರು.

ಹಾಸನದ ಶಾಸಕ ಪ್ರೀತಮ್‍ಗೌಡ ಜೆಡಿಎಸ್ ಕುಟುಂಬದ ಬಗ್ಗೆ ಮಾತನಾಡಿರುವ ಕುರಿತು ಮಾಧ್ಯಮದವರು ಗಮನ ಸೆಳೆದಾಗ, ನಮ್ಮ ಕುಟುಂಬ ಜನಪರ ಕೆಲಸ ಮಾಡಿಕೊಂಡು ಬಂದಿದೆ. ಜನರ ಕಷ್ಟ-ಸುಖಕ್ಕೆ ಭಾಗಿಯಾಗುತ್ತಾ ಪ್ರೀತಿವಿಶ್ವಾಸದಿಂದ ಕಾಣುತ್ತಿದೆ.

ನಾವು ಜನಕ್ಕೆ ಹತ್ತಿರವಾಗಿದ್ದೇವೆ. ಇದನ್ನು ಸಹಿಸದೆ ಅಸೂಯೆಯಿಂದ ಅವರು ಮಾತನಾಡಿರಬಹುದು. ನಾವು ಯಾವ ಗುತ್ತಿಗೆಯನ್ನು ಪಡೆದಿಲ್ಲ. ಇಂತಹವರ ಮಾತಿಗೆಲ್ಲ ಪ್ರತಿಕ್ರಿಯಿಸುವುದು ನಮ್ಮ ಘನತೆಗೆ ಕಡಿಮೆ ಎಂದರು.

ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಪತ್ನಿ ಚೆನ್ನಮ್ಮ, ಸಚಿವ ರೇವಣ್ಣ, ಶಾಸಕಿ ಅನಿತಾಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ ಅವರು ಶೃಂಗೇರಿ ಶಾರದಾಂಬೆ ದರ್ಶನ ಪಡೆದು ನಂತರ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ಶಾರದಾಂಬೆಯ ಸನ್ನಿಧಾನದಲ್ಲಿ ನಡೆದ ವಿಶೇಷ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡಿದ್ದರು. ಶೃಂಗೇರಿ ಭೇಟಿಗೆ ವಿಶೇಷವಾದ ಅರ್ಥ ಕಲ್ಪಿಸುವುದು ಬೇಡ. ಈ ದೇವಿ ಆಶೀರ್ವಾದಕ್ಕೆ ನಾವು ಕುಟುಂಬ ಸಮೇತ ಬಂದು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದೇವೆ ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್, ನಿಖಿಲ್ ಸ್ಪರ್ಧಿಸುವ ಹಿನ್ನೆಲೆಯಲ್ಲಿ ಗೌಡರ ಕುಟುಂಬ ಈ ಯಾತ್ರೆ ಕೈಗೊಂಡಿತ್ತು ಎಂದು ಹೇಳಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos