ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್

ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ಚುನಾವಣೆಗೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿರುವ ಕಾಂಗ್ರೆಸ್ ಪಕ್ಷ ಇಂದು ತನ್ನ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯನ್ನು ‘ನ್ಯಾಯಪತ್ರ’ ಎಂದು ಕರೆದಿದೆ.

ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಚಿದಂಬರಂ ಹಾಗೂ ವೇಣುಗೋಪಾಲ್‌ ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಇಂದು ಬಿಡುಗಡೆ ಮಾಡಿದೆ. “ನ್ಯಾಯಪತ್ರ” ಪ್ರಣಾಳಿಕೆಗೆ ಹೆಸರಿಟ್ಟಿರುವ ಕಾಂಗ್ರೆಸ್, ಹಲವು ಭರವಸೆಗಳನ್ನು ನೀಡಿದೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ‘ಯುವ ನ್ಯಾಯ’, ‘ನಾರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ಶ್ರಮಿಕ್ ನ್ಯಾಯ’ ಮತ್ತು ‘ಹಿಸ್ಸೆದಾರಿ ನ್ಯಾಯ’ ಹಾಗೂ ಖಾತರಿಗಳು ಸೇರಿದಂತೆ ಪಂಚ ನ್ಯಾಯ ಅಥವಾ ‘ನ್ಯಾಯದ ಐದು ಸ್ತಂಭಗಳಿಗೆ’ ಒತ್ತು ನೀಡಿದೆ.

ಧರ್ಮ, ಭಾಷೆ, ಜಾತಿಯನ್ನು ಮೀರಿ ನೋಡಲು ಜನರಿಗೆ ಮನವಿ ಮಾಡಲಾಗಿದ್ದು, ಬುದ್ಧಿವಂತಿಕೆಯಿಂದ ಆಯ್ಕೆ ಮಾಡಿ ಮತ್ತು ಪ್ರಜಾಪ್ರಭುತ್ವ ಸರ್ಕಾರವನ್ನು ಸ್ಥಾಪಿಸಿ ಎಂದು ಕಾಂಗ್ರೆಸ್ ಮತದಾರರಿಗೆ ಮನವಿ ಮಾಡಿದೆ.

ಅಂತೆಯೇ ಕಾಂಗ್ರೆಸ್ ರಾಷ್ಟ್ರವ್ಯಾಪಿ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ನಡೆಸಲಿದ್ದು, SC, ST ಮತ್ತು OBC ಗಳಿಗೆ ಮೀಸಲಾತಿಯಲ್ಲಿ 50 ಪ್ರತಿಶತ ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ಅಂತೆಯೇ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ, ಅಗ್ನಿಪಥ್ ಯೋಜನೆ ರದ್ದು, ವಿವಿಧ ಹಂತಗಳಲ್ಲಿ 30 ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ, ಎಸ್ಸಿ, ಎಸ್ಟಿ ಮತ್ತು ಒಬಿಸಿ ಸಮುದಾಯಗಳಿಗಿರುವ ಮೀಸಲಾತಿ ಮೀತಿ ಹೆಚ್ಚಳ ಹಾಗೂ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ ನಡೆಸಲಾಗುವುದು ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ಈಗಾಗಲೇ ಕಾಂಗ್ರೆಸ್‌ ಪಕ್ಷವು ‘ಪಂಚ ನ್ಯಾಯ’, ’25 ಗ್ಯಾರಂಟಿ’ಗಳನ್ನು ಘೋಷಿಸಿದೆ. ‘ಮನೆ ಮನೆ ಗ್ಯಾರಂಟಿ’ ಅಭಿಯಾನವು ಆರಂಭವಾಗಿದೆ. ದೇಶದಾದ್ಯಂತ ಸಮಾಲೋಚನೆಗಳನ್ನು ನಡೆಸಿ ಕಾಂಗ್ರೆಸ್‌, ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ. ಇ ಮೇಲ್‌ ಹಾಗೂ ‘ಆವಾಜ್‌ ಭಾರತ್‌ ಕಿ’ ವೆಬ್‌ಸೈಟ್‌ ಮೂಲಕ ಇದಕ್ಕೆ ಸಾವಿರಾರು ಸಲಹೆಗಳು ಬಂದಿದ್ದವು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos