2024 ಐಪಿಎಲ್‌ ಆರಂಭಕ್ಕೆ ಕ್ಷಣಗಣನೆ

2024 ಐಪಿಎಲ್‌ ಆರಂಭಕ್ಕೆ ಕ್ಷಣಗಣನೆ

ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಅತಿ ದೊಡ್ಡ ಹಬ್ಬ ಐಪಿಎಲ್‌ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ವನಿತೆಯರ ಕ್ರಿಕೆಟ್‌ ಲೀಗ್‌ ಮುಗಿದ ಬೆನ್ನಲ್ಲೇ ವಿಶ್ವದ ದುಬಾರಿ ಹಾಗೂ ಜನಪ್ರಿಯ ಟೂರ್ನಿ ಆರಂಭವಾಗುತ್ತಿದೆ.  17ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಬಾಕಿಯಿದೆ. ಚೆನ್ನೈನ ಚಿದಂಬರ  ಕ್ರಿಕೆಟ್​ ಕ್ರೀಡಾಂಗಣದಲ್ಲಿ ಶುಕ್ರವಾರ ಅದ್ಧೂರಿ ಸಮಾರಂಭದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದ್ದು, ಇನ್ನೆರಡು ತಿಂಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.

ಚುನಾವಣೆ ಹೊರತಾಗಿಯೂ ಈ ಬಾರಿ ಸಂಪೂರ್ಣ ಐಪಿಎಲ್‌ ಲೀಗ್‌ ಭಾರತದಲ್ಲೇ ಆಯೋಜಿಸುವುದಾಗಿ ಬಿಸಿಸಿಐ  ಕಾರ್ಯದರ್ಶಿ ಜಯ್‌ ಶಾ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಮೊದಲ 15 ದಿನಗಳ ಕಾಲ ನಡೆಯಲಿರುವ 21 ಪಂದ್ಯಗಳಿಗೆ ಮಾತ್ರ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಉಳಿದ ಪಂದ್ಯಗಳ ವೇಳಾಪಟ್ಟಿಯೂ ಶೀಘ್ರದಲ್ಲೇ ಪ್ರಕಟವಾಗುವ ನಿರೀಕ್ಷೆಯಿದೆ.

ನಾಳೆಯಿಂದ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಚಾಲನೆ ಸಿಗುತ್ತಿದ್ದು, ನಾಳೆ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತನ್ನ ತವರು ನೆಲದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲು ಸಜ್ಜಾಗಿದೆ.   ಆರ್‌ಸಿಬಿ ಮತ್ತು ಚೆನ್ನೈ ನಡುವೆ 31 ಪಂದ್ಯಗಳು ನಡೆದಿದ್ದು, 20 ಪಂದ್ಯಗಳಲ್ಲಿ ಚೆನ್ನೈ, 10 ಪಂದ್ಯಗಳಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. 1 ಪಂದ್ಯ ಫಲಿತಾಂಶವಿಲ್ಲದೇ ರದ್ದಾಗಿದೆ.

2023ರ ಟೂರ್ನಿ ಆರಂಭದಿಂದಲ್ಲೇ ನಿವೃತ್ತಿಯ ಸುಳಿವು ನೀಡಿದ್ದ ಸಿಎಸ್‌ಕೆ ನಾಯಕ ಎಂ.ಎಸ್‌ ಧೋನಿ ಅವರಿಗೆ 17ನೇ ಆವೃತ್ತಿಯ ಐಪಿಎಲ್‌ ಟೂರ್ನಿ ಕೊನೇ ಲೀಗ್‌ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದ್ರೆ ಮಹಿ ಆಪ್ತರು ಇನ್ನೂ ಎರಡು ಸೀಸನ್‌ ಆಡಬಹುದು ಎಂದು ಸುಳಿವು ಕೊಟ್ಟಿದ್ದಾರೆ. ಈ ನಡುವೆ ಆಸೀಸ್‌ ಬ್ಯಾಟರ್‌ ಡೇವಿಡ್‌ ವಾರ್ನರ್‌, ಭಾರತದ ಅಮಿತ್‌ ಮಿಶ್ರಾ, ಶಿಖರ್‌ ಧವನ್‌, ಪಿಯೂಶ್‌ ಚಾವ್ಲಾ ಅವರಿಗೂ ಇದು ಕೊನೆಯ ಟೂರ್ನಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos