ರಾಯಣ್ಣ ಪ್ರತಿಮೆ ಸ್ಥಾಪನೆಗೆ ಒತ್ತಾಯ

  • In State
  • August 20, 2020
  • 178 Views
ರಾಯಣ್ಣ ಪ್ರತಿಮೆ ಸ್ಥಾಪನೆಗೆ ಒತ್ತಾಯ

ತುಮಕೂರು:ಬೆಳಗಾವಿ ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿದ್ದ  ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಪೊಲೀಸರು ದೌರ್ಜನ್ಯದಿಂದ ಸ್ಥಳಾಂತರ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕುರುಬರ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ಸುರೇಶ್ ಅವರು, ನಾಡು ಕಂಡ ಅಪ್ರತಿಮ ದೇಶಭಕ್ತ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಏಕಾಏಕಿ ಪೊಲೀಸರು ಸ್ಥಳಾಂತರ ಮಾಡಿದ್ದಾರೆ, ಇದನ್ನು ವಿರೋಧಿಸಿದ ಸಾರ್ವಜನಿಕರ ಮೇಲೆಯೂ ಹಲ್ಲೆ ಮಾಡಿ, ಪ್ರತಿಮೆಯನ್ನು ಸ್ಥಳಾಂತರ ಮಾಡಿದ್ದಾರೆ, ಇಂದು ದೇಶಭಕ್ತ ಸಂಗೊಳ್ಳಿ ರಾಯಣ್ಣ ಅವರಿಗೆ ಮಾಡಿದ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶಕ್ಕಾಗಿ ಹೋರಾಡಿದ ಹುತ್ಮಾತ್ಮರನ್ನು ಸ್ಮರಿಸಬೇಕಾಗಿರುವ ಸರ್ಕಾರ ಹಾಗೂ ಅಧಿಕಾರಿಗಳು ಪ್ರತಿಮೆ ಸ್ಥಳಾಂತರ ಮಾಡುವ ಮೂಲಕ ಹುತ್ಮಾತ್ಮರಿಗೆ ಅಗೌರವ ತೋರಿದ್ದಾರೆ, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರವನ್ನು ಸರ್ಕಾರ ವಹಿಸಬೇಕಾಗಿದ್ದು, ಪ್ರತಿಮೆ ಸ್ಥಳಾಂತರ ಮಾಡುವಾಗ ಅಗೌರವ ತೋರಿದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಗೊಳ್ಳಿರಾಯಣ್ಣ ಅವರು ಇಂದಿನ ಯುವಕರಿಗೆ ಆದರ್ಶಪ್ರಾಯವಾಗಿದ್ದು, ಅವರ ಬಗ್ಗೆ ಯುವ ಸಮುದಾಯದಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಹಾಗೂ ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ಪುನರ್ ಸ್ಥಾಪಿಸುವಂತೆ ಒತ್ತಾಯಿಸಿದರು.

ಪ್ರತಿಮೆ ಸ್ಥಳಾಂತರಕ್ಕೆ ವಿರೋಧಿಸಿದ ಸ್ಥಳೀಯರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದ ಅವರು, ರಾಯಣ್ಣ ಯಾವುದೇ ಒಂದು ಜಾತಿಗೆ ಸೀಮಿತವಾದ ವ್ಯಕ್ತಿಯಲ್ಲ, ಬ್ರಿಟಿಷರ ವಿರುದ್ಧ ಬಂಡೆದ್ದ ಕ್ರಾಂತಿವೀರ ಅಂತಹವರಿಗೆ ಅಪಮಾನ ಮಾಡುವಂತಹ ಕೆಲಸವನ್ನು ಮಾಡಿದರೆ ರಾಯಣ್ಣ ಅಭಿಮಾನಿಗಳು ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos