ಇತಿಹಾಸ ಪ್ರಸಿದ್ಧ ಶ್ರೀಕಾಶೀಶ್ವರ

ಇತಿಹಾಸ ಪ್ರಸಿದ್ಧ ಶ್ರೀಕಾಶೀಶ್ವರ

ಕೆ.ಆರ್.ಪುರಂ, ಫೆ. 21: ಸತ್ಯರೂಪಿಯೂ, ನಿಜಸೌಂದರ್ಯಕಾರನೂ ಆಗಿರುವ ಪರಮಶಿವನು ಎಲ್ಲರಿಗೂ ಮಂಗಳವನ್ನುಂಟು ಮಾಡುವ ಸಂಕಲ್ಪನಿಷ್ಟನಾಗಿರುವುದ ರಿಂದ ಶರಣರು ಕೇವಲ ಆತನನ್ನು ಮಾತ್ರ ಭಜಿಸಬೇಕೆಂದು ಹಂಬಲಿಸುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಅವರು ತಿಳಿಸಿದರು.

ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ಕ್ಷೇತ್ರದ ಹೊರಮಾವು ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಶ್ರೀಕಾಶೀಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಅದ್ದೂರಿ ಮಹಾ ಶಿವರಾತ್ರಿ ಮಹೋತ್ಸವ ಹಾಗೂ 51 ದೇವತೆಗಳ ದರ್ಶನ ಏರ್ಪಡಿಸಿದ್ದು, ಸಾವಿರಾರು ಭಕ್ತರು ದರ್ಶನ ಪಡೆದು ದೇವರ ಕೃಪೆಗೆ ಪಾತ್ರರಾದರು.

ಇಲ್ಲಿನ ಶ್ರೀಕಾಶೀಶ್ವರ ದೇವಾಲಯಕ್ಕೆ ಭೇಟಿನೀಡಿದ ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ್ ಶ್ರೀಕಾಶೀಶ್ವರ ಹಾಗೂ 51 ದೇವತಾ ಮೂರ್ತಿಗಳ ದರ್ಶನ ಪಡೆದು ನಂತರ ಮಾತನಾಡಿದರು.

ತ್ರಿಮೂರ್ತಿಗಳಲ್ಲಿ ಒಬ್ಬನಾದ ಶಿವನು ಹಿಂದೂ ಧರ್ಮದಲ್ಲಿ ಪೂಜಿಸಲ್ಪಡುವ ದೇವರುಗಳಲ್ಲಿ ಒಬ್ಬರು, ಪರಶಿವನನ್ನು ಬಸವಣ್ಣನವರು ಕೂಡಲಸಂಗಯ್ಯನ ರೂಪದಲ್ಲಿ ಕಾಣುತ್ತಾರೆ ಆತನಿಗೆ ಪೂಜೆಯ ವಿಚಾರದಲ್ಲಿಯೂ ಯಾವ ತಕರಾರುಗಳಿಲ್ಲ ಭಕ್ತಿಯಿಂದ ಮಾಡಿದ ಎಲ್ಲ ಬಗೆಯ ಪೂಜೆಗಳನ್ನೂ ಆತ ಸ್ವೀಕರಿಸುತ್ತಾನೆ ಎಂದು ಹಿರಿಯರು ಹೇಳುತ್ತಾರೆ ಎಂದರು.

ಪರಿಪೂರ್ಣತೆ, ಯೋಗ, ಧ್ಯಾನ, ಆನಂದ, ಆಧ್ಯಾತ್ಮಿಕತೆಯ ಒಲುಮೆಯನ್ನು ಬೀರುವವನು ಶಿವನಿಗೆ ಇಂತವರೇ ಭಕ್ತರೆಂಬುದಿಲ್ಲ ಋಷಿ ಮುನಿ, ಸಾಧು ಸಂತರಿಂದ ಹಿಡಿದು ಸಾಮಾನ್ಯರಲ್ಲಿ ಸಾಮಾನ್ಯನೂ ಶಿವನನ್ನು ಬೇಡುತ್ತಾನೆ. ಎಲ್ಲಾ ರೀತಿಯ ಭಕ್ತರಿಗೂ ಲೌಕಿಕ, ಆಧ್ಯಾತ್ಮಿಕ, ಸಂಪತ್ತಿನ ಸುಖವನ್ನು ಕರುಣಿಸುವವನು ಶಿವ ಎಂದು ಹೇಳಿದರು.

ಇಲ್ಲಿನ  ದೇವಸ್ಥಾನದಲ್ಲಿ ಬೆಳಿಗ್ಗೆ 6 ಗಂಟೆಗೆ ಕಾಮಾಕ್ಷಿಮ್ಮದೇವಿ ಪೂಜೆ, ನವಗ್ರಹ ಹೋಮ, ಗಣಪತಿ ಪೂಜೆ, ಗಣಪತಿ ಹೋಮ 21 ದೀಪಾರಾಧನೆ ಹಾಗೂ 21 ಕಳಶ ಪ್ರತಿಷ್ಠಾಪನೆ ಪುಷ್ಪಾರ್ಚನೆ ಮಾಡಲಾಗಿದ್ದು ನಂತರ ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಸಂಜೆ 6ಕ್ಕೆ ಸಂಧ್ಯಾ ಕಾಲ ಪೂಜೆ, ತ್ರಿಶತಿ ಅರ್ಚನೆ, ಶ್ರೀಲಕ್ಷ್ಮಿ ಹೋಮ, ಶ್ರೀಮೃತ್ಯುಂಜಯ ಹೋಮ, ಶ್ರೀಮಹಾ ಸುದರ್ಶನ ಹೋಮ ಶ್ರೀಧನವಂತ್ರಿ ಹೋಮ ಏರ್ಪಡಿಸಲಾಗಿತ್ತು, ರಾತ್ರಿ ಏಳು ಗಂಟೆಗೆ ತಮಿಳುನಾಡಿನ ಶಿವಕಾಶಿಯಿಂದ ತರಲಾದ ಬಿರುಸು ಬಾಣಗಳನ್ನು ಹೊಡೆಯಲಾಗಿತ್ತು.

ದೇವಸ್ಥಾನ ಆವರಣದಲ್ಲಿ ಶ್ರಿಮೂಕಾಂಬಿಕಾದೇವಿ, ಮುತ್ಯಲಮ್ಮದೇವಿ, ರೇಣುಕಾ ಯಲ್ಲಮ್ಮದೇವಿ, ಕಾಳಿಕಾದೇವಿ, ಅಂಗಳಪರಮೇಶ್ವರಿ, ಮಹೇಶ್ವರಮ್ಮದೇವಿ, ಶಿವದುರ್ಗದೇವಿ, ಚಿಕ್ಕಮ್ಮದೇವಿ, ದುರ್ಗಾಪರಮೇಶ್ವರಿ, ಕನಕದುರ್ಗ, ಕಾಮಾಕ್ಷಿಮ್ಮದೇವಿ ಸೇರಿದಂತೆ 51 ವಿವಿಧ ದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು ಎಂದು ದೇವಸ್ಥಾನದ ಧರ್ಮದರ್ಶಿ ಪ್ರತಾಪ್ ಅವರು ತಿಳಿಸಿದರು.

ದೇವರುಗಳ ದರ್ಶನ ಪಡೆಯಲು ಸುತ್ತಮುತ್ತಲಿನ ಕಲ್ಕೆರೆ, ರಾಮಮೂರ್ತಿನಗರ, ಜಯಂತಿನಗರ, ಅಕ್ಷಯನಗರ, ಬಂಜಾರು ಬಡಾವಣೆ, ಕನಕನಗರ, ಚನ್ನಸಂದ್ರ, ಆಗರ, ಕಲ್ಯಾಣನಗರ, ಬಾಣಸವಾಡಿ ಹೆಣ್ಣೂರು, ಹೊಸಕೋಟೆ ಮುಂತಾದ ಕಡೆಗಳಿಂದ ಭಕ್ತರು ದೇವರ ದರ್ಶನ ಪಡೆದು ಕೃಪೆ ಗೆ ಪಾತ್ರರಾದರು.

ಶ್ರೀಕಾಶೀಶ್ವರ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಬರುವ ಭಕ್ತರಿಗೆ 51 ದೇವರುಗಳ ದರ್ಶನ ವ್ಯವಸ್ಥೆ ಮಾಡಲಾಗಿದ್ದು, ಮಹಾ ಶಿವರಾತ್ರಿ ಹಬ್ಬವನ್ನು ಪ್ರತಿ ವರ್ಷ ವಿನೂತನವಾಗಿ ಅಚರಿಸುತ್ತೇವೆ ಎಂದು ದೇವಸ್ಥಾನದ ಧರ್ಮದರ್ಶಿ ಪ್ರತಾಪ್ ಅವರು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos